ಭ್ರಷ್ಟಾಚಾರ ನಿಗ್ರಹ ಸಂಸ್ಥೆ ‘ಲೋಕಪಾಲ್’ ತನ್ನ ಸದಸ್ಯರಿಗೆ ಸುಮಾರು 70 ಲಕ್ಷ ರೂಪಾಯಿ ಆನ್ ರೋಡ್ ಬೆಲೆಯ ಏಳು ಐಷಾರಾಮಿ ಬಿಎಂಡಬ್ಲ್ಯು ಕಾರುಗಳನ್ನು ಖರೀದಿಸಲು ಮುಂದಾಗಿರುವುದು ಚರ್ಚೆಗೆ ಕಾರಣವಾಗಿದೆ.
ಹಿರಿಯ ಕಾಂಗ್ರೆಸ್ ನಾಯಕರು ಹಾಗೂ ರಾಜ್ಯಸಭಾ ಸಂಸದರಾದ ಪಿ. ಚಿದಂಬರಂ ಮತ್ತು ಅಭಿಷೇಕ್ ಮನು ಸಿಂಘ್ವಿ ಅವರು ಲೋಕಪಾಲ್ ನಡೆಯನ್ನು ಟೀಕಿಸಿದ್ದಾರೆ.
ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಗೆ ಸಾಧಾರಣ ಸೆಡಾನ್ ಕಾರುಗಳನ್ನು ನೀಡುವಾಗ, ಲೋಕಪಾಲ್ ಅಧ್ಯಕ್ಷರು ಮತ್ತು ಅದರ ಆರು ಮಂದಿ ಸದಸ್ಯರು ಬಿಎಂಡಬ್ಲ್ಯು ಕಾರುಗಳನ್ನು ಬಯಸುತ್ತಿರುವುದು ಏಕೆ? ಎಂದು ಮಾಜಿ ಗೃಹ ಸಚಿವ ಪಿ. ಚಿದಂಬರಂ ಪ್ರಶ್ನಿಸಿದ್ದಾರೆ.
“ಈ ಕಾರುಗಳನ್ನು ಖರೀದಿಸಲು ಸಾರ್ವಜನಿಕ ಹಣವನ್ನು ಏಕೆ ಖರ್ಚು ಮಾಡಬೇಕು? ಲೋಕಪಾಲ್‌ನ ಕನಿಷ್ಠ ಒಬ್ಬರು ಅಥವಾ ಇಬ್ಬರು ಸದಸ್ಯರು ಈ ಕಾರುಗಳನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ ಅಥವಾ ನಿರಾಕರಿಸುತ್ತಾರೆ ಎಂದು ನಾನು ಭಾವಿಸುತ್ತೇನೆ” ಎಂದು ಚಿದಂಬರಂ ಸಾಮಾಜಿಕ ಜಾಲತಾಣ ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಲೋಕಪಾಲ್ ಕುರಿತ ಸಂಸದೀಯ ಸಮಿತಿಯ ಅಧ್ಯಕ್ಷತೆ ವಹಿಸಿದ್ದನ್ನು ನೆನಪಿಸಿಕೊಂಡಿರುವ ಕಾಂಗ್ರೆಸ್‌ನ ರಾಜ್ಯಸಭಾ ಸಂಸದ ಅಭಿಷೇಕ್ ಮನು ಸಿಂಘ್ವಿ, ನನ್ನ ತಂದೆ, ಮಾಜಿ ಸಂಸದ ಡಾ. ಎಲ್. ಎಂ. ಸಿಂಘ್ವಿ ಅವರು 1960ರ ದಶಕದಲ್ಲಿ ಲೋಕಪಾಲ್‌ನ ಕಲ್ಪನೆಯನ್ನು ಮೊದಲು ಮುನ್ನಲೆಗೆ ತಂದವರು. ಈ ಭ್ರಷ್ಟಾಚಾರ ವಿರೋಧಿ ಸಂಸ್ಥೆ ಈಗ ತನ್ನ ಸದಸ್ಯರಿಗೆ ಬಿಎಂಡಬ್ಲ್ಯು ಕಾರುಗಳನ್ನು ಖರೀದಿಸಲು ಮುಂದಾಗಿರುವುದು ದುರಂತ ವ್ಯಂಗ್ಯ ಎಂದಿದ್ದಾರೆ. ಸಮಗ್ರತೆಯ ರಕ್ಷಕರು ನ್ಯಾಯಸಮ್ಮತತೆಯ ಬದಲು ಐಷಾರಾಮಿಗಳನ್ನು ಬೆನ್ನಟ್ಟುತ್ತಿದ್ದಾರೆ” ಎಂದು ಅವರು ಎಕ್ಸ್ ಪೋಸ್ಟ್‌ನಲ್ಲಿ ಟೀಕಿಸಿದ್ದಾರೆ.
“ಲೋಕಪಾಲ್ ಸಂಸ್ಥೆಯು 2019ರಲ್ಲಿ ಸ್ಥಾಪನೆಯಾದಾಗಿನಿಂದ 8,703 ದೂರುಗಳನ್ನು ಸ್ವೀಕರಿಸಿದೆ. ಈ ಪೈಕಿ ಕೇವಲ 24 ಪ್ರಕರಣಗಳಲ್ಲಿ ತನಿಖೆ ನಡೆದಿದೆ ಮತ್ತು 6 ಪ್ರಕರಣಗಳಲ್ಲಿ ಮಾತ್ರ ಕಾನೂನು ಕ್ರಮಕ್ಕೆ ಅನುಮತಿ ನೀಡಲಾಗಿದೆ” ಎಂದು ಸಿಂಘ್ವಿ ತಿಳಿಸಿದ್ದಾರೆ.
ಮುಂದುವರಿದು, “ಈಗ ತಲಾ 70 ಲಕ್ಷ ರೂಪಾಯಿ ಮೌಲ್ಯದ ಬಿಎಂಡಬ್ಲ್ಯೂ ಕಾರುಗಳು. ಲೋಕಪಾಲ್ ಭ್ರಷ್ಟಾಚಾರವನ್ನು ತಡೆಯುವ ಶಕ್ತಿಶಾಲಿ ಸಂಸ್ಥೆಯಾಗಿರಬೇಕು, ಆದರೆ ಅದು ದುರ್ಬಲವಾಗಿ ಕೆಲಸ ಮಾಡುತ್ತಿದೆ. ಉದಾಹರಣೆಗೆ: ಅದು ಬಲಿಷ್ಠವಾದ ‘ಪ್ಯಾಂಥರ್’ (ಚೀತಾ) ರೀತಿಯಾಗಿರಬೇಕು, ಆದರೆ ಇದು ಚಿಕ್ಕ ‘ಪೂಡಲ್’ (ಪುಟ್ಟ ನಾಯಿ) ರೀತಿಯಾಗಿದೆ” ಎಂದು ಸಿಂಘ್ವಿ ಹೇಳಿದ್ದಾರೆ.
ಅಕ್ಟೋಬರ್ 16ರಂದು ಹೊರಡಿಸಲಾದ ಅಧಿಸೂಚನೆಯಲ್ಲಿ, ಲೋಕಪಾಲ್ ಏಳು ಬಿಎಂಡ್ಬ್ಲ್ಯೂ 3 ಸೀರೀಸ್ ಲಿ ಕಾರುಗಳ ಪೂರೈಕೆಗಾಗಿ ಮುಕ್ತ ಟೆಂಡರ್‌ಗಳನ್ನು ಆಹ್ವಾನಿಸಿದೆ. ಮಾಧ್ಯಮ ವರದಿಗಳ ಪ್ರಕಾರ, ಲೋಕಪಾಲ್ ಚಾಲಕರು ಮತ್ತು ಸಿಬ್ಬಂದಿಗೆ ಏಳು ದಿನಗಳ ತರಬೇತಿಯನ್ನು ನೀಡುವಂತೆ ಬಿಎಂಡಬ್ಲ್ಯು ಹೇಳಿದೆ.
ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್ ಅಧ್ಯಕ್ಷೆತೆಯ ಲೋಕ್‌ಪಾಲ್‌ನಲ್ಲಿ ನಿವೃತ್ತ ನ್ಯಾಯಾಧೀಶರಾದ ನ್ಯಾಯಮೂರ್ತಿ ಎಲ್. ನಾರಾಯಣ ಸ್ವಾಮಿ, ನ್ಯಾಯಮೂರ್ತಿ ಸಂಜಯ್ ಯಾದವ್ ಮತ್ತು ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ, ಮಾಜಿ ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಮತ್ತು ನಿವೃತ್ತ ಅಧಿಕಾರಿಗಳಾದ ಪಂಕಜ್ ಕುಮಾರ್ ಮತ್ತು ಅಜಯ್ ಟಿರ್ಕಿ ಸದಸ್ಯರಾಗಿದ್ದಾರೆ.
ನಾಮಪತ್ರ ಹಿಂಪಡೆಯುವಂತೆ ಬಿಜೆಪಿ ನಾಯಕರಿಂದ ನಮ್ಮ ಅಭ್ಯರ್ಥಿಗಳಿಗೆ ಬೆದರಿಕೆ : ಪ್ರಶಾಂತ್ ಕಿಶೋರ್ ಆರೋಪ


