ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದರಿಂದ ಕೋಪಗೊಂಡ ಆರೋಪಿಯೊಬ್ಬ ನ್ಯಾಯಾಧೀಶರ ಅಧಿಕೃತ ಮನೆಯ ಮೇಲೆ ದಾಳಿ ಮಾಡಿ ಘಟನೆ ಮಧ್ಯಪ್ರದೇಶದ ಅನೂಪ್ಪುರ ಜಿಲ್ಲೆಯಲ್ಲಿ ನಡೆದಿದೆ.
ಪ್ರಥಮ ದರ್ಜೆ ಜ್ಯುಡೀಶಿಯಲ್ ಮ್ಯಾಜಿಸ್ಟ್ರೇಟ್ ಅಮನ್ದೀಪ್ ಛಾಬ್ರಾ ಅವರ ಮನೆ ಮೇಲೆ ಶನಿವಾರ ತಡರಾತ್ರಿ ದಾಳಿ ಮಾಡಲಾಗಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಆರೋಪಿಗಳಾದ ಪ್ರಿಯಾಂಶು ಅಲಿಯಾಸ್ ಜಾಗ್ವರ್ ಸಿಂಗ್ (25), ದೇವೇಂದ್ರ ಕೇವತ್ ಅಲಿಯಾಸ್ ಸೋನು (23) ಮತ್ತು ಮಣಿಕೇಶ್ ಸಿಂಗ್ ಅಲಿಯಾಸ್ ಪುಟ್ಟನ್ (19) ಅವರನ್ನು ಬಂಧಿಸಿದ್ದಾರೆ. ದಾಳಿ ವೇಳೆ ಬಳಸಲಾದ ಬೈಕ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
“ಮೂರ್ನಾಲ್ಕು ತಿಂಗಳ ಹಿಂದೆ ಪ್ರಮುಖ ಆರೋಪಿ ಪ್ರಿಯಾಂಶು ವಿರುದ್ಧ ಪ್ರಕರಣವೊಂದು ದಾಖಲಾಗಿತ್ತು. ಇದರಲ್ಲಿ ಜಾಮೀನು ಕೋರಿ ಪ್ರಿಯಾಂಶು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಧೀಶ ಛಾಬ್ರಾ ತಿರಸ್ಕರಿಸಿದ್ದರು. ಬಳಿಕ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು ಆತನಿಗೆ ಜಾಮೀನು ಮಂಜೂರು ಮಾಡಿದ್ದರು. ಜಾಮೀನಿನ ಮೇಲೆ ಹೊರಬಂದ ಪ್ರಿಯಾಂಶು, ತನ್ನ ಸಹವರ್ತಿಗಳ ಜೊತೆ ಸೇರಿ ಛಾಬ್ರಾ ಅವರ ಮನೆ ಮೇಲೆ ದಾಳಿ ಮಾಡಿದ್ದಾನೆ. ಅಲ್ಲದೆ, ಅವರನ್ನು ಹತ್ಯೆ ಮಾಡುವ ಬೆದರಿಕೆ ಹಾಕಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಎಲ್ಲಾ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ” ಎಂದು ಅನೂಪ್ಪುರ ಎಸ್ಪಿ ಮೋತಿ ಉರ್ ರೆಹಮಾನ್ ಹೇಳಿದ್ದಾರೆ.


