ನವದೆಹಲಿ: ಭಾರತದ ಚುನಾವಣಾ ಆಯೋಗ ಇಂದು (ಸೋಮವಾರ) Special Intensive Revision (SIR)ಗಾಗಿ ಮೊದಲ ಹಂತದ ದಿನಾಂಕಗಳನ್ನು ಪ್ರಕಟಿಸಲಿದೆ.
ನವದೆಹಲಿಯ ವಿಜ್ಞಾನ ಭವನದಲ್ಲಿ ಇಂದು ಸಂಜೆ 4:15 ಕ್ಕೆ ಚುನಾವಣಾ ಆಯೋಗ ಪತ್ರಿಕಾಗೋಷ್ಠಿ ನಡೆಸಲಿದೆ.
ಉದ್ದೇಶಪೂರ್ವಕವಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಲಕ್ಷಾಂತರ ಮತದಾರರನ್ನು ಮತದಾರ ಪಟ್ಟಿಯಿಂದ ಹೊರಗಿಡುವ ಪ್ರಯತ್ನ ಮಾಡುತ್ತಿದೆ ಎಂದು ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುತ್ತಿವೆ.
ಮೊದಲ ಹಂತದಲ್ಲಿ 10 ರಿಂದ 15 ರಾಜ್ಯಗಳಲ್ಲಿ SIR ಕೈಗೊಳ್ಳಲಾಗುವುದು. ಕೇಂದ್ರಾಡಳಿತ ಪ್ರದೇಶಗಳು, ಪಶ್ಚಿಮ ಬಂಗಾಳ, ಹಿಮಾಚಲ ಪ್ರದೇಶ, ಉತ್ತರಾಖಂಡ, ತಮಿಳುನಾಡಿನಲ್ಲಿ ಮೊದಲ ಹಂತದ SIR ಕೈಗೊಳ್ಳಲಾಗುವುದು ಎನ್ನಲಾಗುತ್ತಿದೆ.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, SIR ನಾಗರಿಕರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಪಿತೂರಿ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ ಸೇರಿದಂತೆ ಬಹುತೇಕ ಎಲ್ಲಾ ವಿರೋಧ ಪಕ್ಷಗಳು ಬಿಜೆಪಿ ವಿರುದ್ಧ ಈ ಆರೋಪವನ್ನು ಮಾಡುತ್ತಿವೆ.
ಪಶ್ಚಿಮ ಬಂಗಾಳದಲ್ಲಿ 2026ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಗುರಿಯನ್ನು ಹೊಂದಿದೆ, ಹಾಗಾಗಿಯೇ ಪಶ್ಚಿಮ ಬಂಗಾಳದಲ್ಲಿ SIR ಅನ್ನು ಜಾರಿ ಮಾಡುತ್ತಿದೆ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿದೆ. ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ SIR ಅನ್ನು ಬಲವಾಗಿ ವಿರೋಧಿಸುತ್ತಿದೆ ಮತ್ತು ಆಡಳಿತ ಪಕ್ಷವು ಯಾವುದೇ “ಮಾನ್ಯ ಮತದಾರರ ಹೆಸರನ್ನು” ಪಟ್ಟಿಯಿಂದ ಅಳಿಸಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.


