ದೆಹಲಿ ಗಲಭೆ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್, ಮೀರನ್ ಹೈದರ್, ಗುಲ್ಫಿಶಾ ಫಾತಿಮಾ ಮತ್ತು ಶಿಫಾ ಉರ್ ರೆಹಮಾನ್ ಸಲ್ಲಿಸಿದ್ದ ಅರ್ಜಿಗಳಿಗೆ ಪ್ರತಿಯಾಗಿ ಅಫಿಡವಿಟ್‌ಗಳನ್ನು ಸಲ್ಲಿಸಲು ಎರಡು ವಾರಗಳ ಕಾಲಾವಕಾಶ ನೀಡಬೇಕೆಂಬ ದೆಹಲಿ ಪೊಲೀಸರ ಮನವಿಯನ್ನು ಸುಪ್ರೀಂ ಕೋರ್ಟ್ ಇಂದು (ಅಕ್ಟೋಬರ್ 27) ತಿರಸ್ಕರಿಸಿದೆ.
ಸಾಕಷ್ಟು ಸಮಯ ನೀಡಲಾಗಿದೆ ಎಂದು ಹೇಳಿದ ನ್ಯಾಯಮೂರ್ತಿ ಅರವಿಂದ್ ಕುಮಾರ್ ಮತ್ತು ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ಪೀಠ, ಪ್ರಕರಣದ ವಿಚಾರಣೆಯನ್ನು ಶುಕ್ರವಾರಕ್ಕೆ (ಅ.31) ಮುಂದೂಡಿ, ಈ ಮಧ್ಯೆ ಪ್ರತಿ ಅಫಿಡವಿಟ್ ಸಲ್ಲಿಸುವಂತೆ ದೆಹಲಿ ಪೊಲೀಸರಿಗೆ ಸೂಚಿಸಿದೆ.
ವಿಚಾರಣೆ ವೇಳೆ ದೆಹಲಿ ಪೊಲೀಸರ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಎಸ್.ವಿ. ರಾಜು, ಪ್ರತಿ-ಅಫಿಡವಿಟ್ ಸಲ್ಲಿಸಲು ಸಮಯ ಕೋರಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಕುಮಾರ್ ಅವರು, “ನಾವು ನಿಮಗೆ ಸಾಕಷ್ಟು ಸಮಯ ನೀಡಿದ್ದೇವೆ. ನೀವು ಮೊದಲ ಬಾರಿಗೆ ಹಾಜರಾಗುತ್ತಿರಬಹುದು. ಕಳೆದ ಬಾರಿ ನಾವು ನೋಟಿಸ್ ಜಾರಿ ಮಾಡುವಂತೆ ಮತ್ತು ಮುಕ್ತ ನ್ಯಾಯಾಲಯದಲ್ಲಿ ಅಕ್ಟೋಬರ್ 27ರಂದು ಈ ವಿಷಯವನ್ನು ಆಲಿಸಿ ಇತ್ಯರ್ಥಪಡಿಸುವುದಾಗಿ ಹೇಳಿದ್ದೆವು” ಎಂದಿದ್ದಾರೆ.
ಇದೇ ವೇಳೆ ನ್ಯಾಯಮೂರ್ತಿ ಕುಮಾರ್ ಅವರು ಜಾಮೀನು ಪ್ರಕರಣದಲ್ಲಿ ಪ್ರತಿ-ಅಫಿಡವಿಟ್‌ನ ಮಹತ್ವವನ್ನು ಪ್ರಶ್ನಿಸಿದ್ದಾರೆ. ಎಎಸ್‌ಜಿ ಪ್ರತಿ ಅಫಿಡವಿಟ್ ದಾಖಲಿಸಲು ಎರಡು ವಾರಗಳ ಸಮಯ ಕೇಳಿದಾಗ ನ್ಯಾಯಾಧೀಶರು ಅದಕ್ಕೆ ಒಪ್ಪಿಲ್ಲ. ಒಂದು ವಾರದ ಕಾಲಾವಕಾಶ ಕೇಳಿದಾಗಲೂ ಒಪ್ಪಿಗೆ ನೀಡಿಲ್ಲ. ಇದು ತೀರ್ಪಿನ ತುರ್ತು ಸ್ವರೂಪವನ್ನು ತೋರಿಸುತ್ತದೆ.
ಉಮರ್ ಖಾಲಿದ್ ಪರ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿ, ಅರ್ಜಿದಾರರು ಕಳೆದ 5 ವರ್ಷಗಳಿಗೂ ಹೆಚ್ಚು ಸಮಯದಿಂದ ಜೈಲಿನಲ್ಲಿದ್ದಾರೆ ಎಂಬುವುದನ್ನು ಎತ್ತಿ ತೋರಿಸಿದ್ದಾರೆ. ಹಿರಿಯ ವಕೀಲ ಎ.ಎಂ. ಸಿಂಘ್ವಿ ಅವರು ಇಡೀ ಪ್ರಕರಣದಲ್ಲಿ ವಿಳಂಬವನ್ನು ಉಲ್ಲೇಖಿಸಿದ್ದು, ಇನ್ನೂ ಹೆಚ್ಚಿನ ವಿಳಂಬ ಆಗಬಾರದು ಎಂದು ಮನವಿ ಮಾಡಿದ್ದಾರೆ.
ಅಂತಿಮವಾಗಿ, ನ್ಯಾಯಪೀಠ ಈ ವಿಷಯವನ್ನು ಶುಕ್ರವಾರಕ್ಕೆ ಮುಂದೂಡಲು ಒಪ್ಪಿತು. ಎಎಸ್‌ಜಿ ರಾಜು ಅವರಿಗೆ, “ನೀವು ಏನಾದರೂ ಯೋಚಿಸಬಹುದೇ ಎಂದು ಪರಿಶೀಲಿಸಿ” ಎಂದು ನ್ಯಾ. ಕುಮಾರ್ ಹೇಳಿದ್ದಾರೆ. ವಿಳಂಬದ ಆಧಾರದ ಮೇಲೆ ಜಾಮೀನು ನೀಡಬಹುದೇ ಎಂದು ಪರೋಕ್ಷವಾಗಿ ಸೂಚಿಸಿದ್ದಾರೆ.
ಈ ಸಂದರ್ಭದಲ್ಲಿ ಎಎಸ್‌ಜಿ ತಾವು ದಾಖಲೆಗಳನ್ನು ಪರಿಶೀಲಿಸುವುದಾಗಿ ಹೇಳಿದರೂ, “ಮೇಲ್ನೋಟಕ್ಕೆ ಕಾಣುವ ವಿಷಯಗಳು ಕೆಲವೊಮ್ಮೆ ತಪ್ಪು ತಿಳುವಳಿಕೆಗೆ ಕಾರಣವಾಗಬಹುದು” ಎಂದಿದ್ದಾರೆ. ಇದಕ್ಕೆ ನ್ಯಾ. ಕುಮಾರ್, “ತಾವು ಎಲ್ಲವನ್ನೂ ವಿವರವಾಗಿ ಓದಿಲ್ಲವಾದರೂ, ಇದು ಜಾಮೀನಿನ ಪ್ರಕರಣವಾಗಿದ್ದು, ಆರೋಪಿಗಳು ಈಗಾಗಲೇ ಐದು ವರ್ಷಗಳ ಕಾಲಾವಧಿಯನ್ನು ಜೈಲಿನಲ್ಲಿ ಪೂರ್ಣಗೊಳಿಸಿದ್ದಾರೆ” ಎಂದು ಹೇಳಿದ್ದಾರೆ. ಇದರಿಂದ ವಿಳಂಬದ ಆಧಾರದ ಮೇಲೆ ಜಾಮೀನು ಪರಿಗಣಿಸಬಹುದು ಎಂಬ ಸೂಚನೆಯಿದೆ.
ಹಿರಿಯ ವಕೀಲರಾದ ಕಪಿಲ್ ಸಿಬಲ್ (ಖಾಲಿದ್ ಪರವಾಗಿ), ಎ.ಎಂ. ಸಿಂಘ್ವಿ (ಫಾತಿಮಾ ಪರವಾಗಿ), ಸಿದ್ಧಾರ್ಥ್ ದೇವ್ (ಇಮಾಮ್ ಪರವಾಗಿ), ಸಿದ್ಧಾರ್ಥ್ ಅಗರ್ವಾಲ್ ಮುಂತಾದವರು ಅರ್ಜಿದಾರರ ಪರವಾಗಿ ವಾದ ಮಂಡಿಸಿದ್ದಾರೆ.
ಸೆಪ್ಟೆಂಬರ್ 19ರಂದು, ಈ ವಿಷಯವನ್ನು ನ್ಯಾಯಮೂರ್ತಿ ಕುಮಾರ್ ಮತ್ತು ನ್ಯಾಯಮೂರ್ತಿ ಮನಮೋಹನ್ ಅವರನ್ನೊಳಗೊಂಡ ಪೀಠದ ಮುಂದೆ ಇಡಲಾಗಿತ್ತು. ಆದರೆ, ಕಪಿಲ್ ಸಿಬಲ್ ಅವರು ಈ ಹಿಂದೆ ಅವರ ಕೊಠಡಿಯಲ್ಲಿ ಸಹವರ್ತಿಯಾಗಿದ್ದರಿಂದ ಅವರು ಹಿಂದೆ ಸರಿದಿದ್ದರು. ಅದಕ್ಕೂ ಮೊದಲು, ಸೆಪ್ಟೆಂಬರ್ 12 ರಂದು ಪ್ರಕರಣವನ್ನು ಮೊದಲು ಪಟ್ಟಿ ಮಾಡಿದಾಗ, ಪೀಠವು ಫೈಲ್‌ಗಳನ್ನು ತಡವಾಗಿ ಸ್ವೀಕರಿಸಿದ್ದರಿಂದ ನ್ಯಾಯಾಲಯವು ಪ್ರಕರಣವನ್ನು ಆಲಿಸಲು ಸಾಧ್ಯವಾಗಿರಲಿಲ್ಲ.
ದೆಹಲಿ ಹೈಕೋರ್ಟ್ ಸೆಪ್ಟೆಂಬರ್ 2ರಂದು ಜಾಮೀನು ಅರ್ಜಿಗಳನ್ನು ವಜಾಗೊಳಿಸಿ ನೀಡಿದ್ದ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ನ್ಯಾಯಮೂರ್ತಿ ನವೀನ್ ಚಾವ್ಲಾ ಮತ್ತು ನ್ಯಾಯಮೂರ್ತಿ ಶಾಲಿಂದರ್ ಕೌರ್ ಅವರನ್ನೊಳಗೊಂಡ ವಿಭಾಗೀಯ ಪೀಠವು ದೆಹಲಿ ಪೊಲೀಸರ ವಿಶೇಷ ಘಟಕವು ದಾಖಲಿಸಿರುವ 2020ರ ಎಫ್‌ಐಆರ್ ಸಂಖ್ಯೆ 59 ರಲ್ಲಿ ತೀರ್ಪು ಪ್ರಕಟಿಸಿತ್ತು.
ಮುಂದಿನ ಸಿಜೆಐ ಆಗಿ ನ್ಯಾ.ಸೂರ್ಯಕಾಂತ್ ಅವರನ್ನು ಶಿಫಾರಸು ಮಾಡಿದ ಸಿಜೆಐ ಬಿ.ಆರ್. ಗವಾಯಿ


