ಛತ್ ಪೂಜೆಗಾಗಿ ನಿಮಿತ್ತ ಸಾಮಾನ್ಯ ಜನರು ಮಲಿನಗೊಂಡ ಯಮುನಾ ನದಿಯಲ್ಲಿ ಪುಣ್ಯಸ್ನಾನ ಮಾಡಬೇಕಾದರೆ, ಪ್ರಧಾನಿ ಮೋದಿಯವರಿಗೆ ಬಿಜೆಪಿ ಫಿಲ್ಟರ್ ನೀರಿನ ನಕಲಿ ‘ಯಮುನಾ ಘಾಟ್’ ನಿರ್ಮಿಸಿದೆ ಎಂದು ಆಮ್ ಆದ್ಮಿ ಪಕ್ಷ (ಎಎಪಿ) ಭಾನುವಾರ (26) ಆರೋಪಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಎಪಿ ದೆಹಲಿ ಘಟಕದ ಅಧ್ಯಕ್ಷ ಸೌರಭ್ ಭಾರದ್ವಾಜ್, “ಬಿಜೆಪಿ ಭಕ್ತರನ್ನು ‘ಮೋಸ’ ಮಾಡುತ್ತಿದೆ ಮತ್ತು ಪೂರ್ವಾಂಚಲಿಗಳ ಜೀವನದ ಜೊತೆ ಆಟವಾಡುತ್ತಿದೆ” ಎಂದು ಹೇಳಿದ್ದಾರೆ.
“ಬಿಹಾರದಲ್ಲಿ ಅಧಿಕಾರ ಹಿಡಿಯುವ ಹತಾಶ ಪ್ರಯತ್ನದಲ್ಲಿ ಬಿಜೆಪಿ ದೆಹಲಿಯ ಲಕ್ಷಾಂತರ ಪೂರ್ವಾಂಚಲಿಗಳ ಜೀವನದ ಜೊತೆ ಆಟವಾಡುತ್ತಿದೆ. ಪ್ರಧಾನಿ ಮೋದಿಗಾಗಿ ವಾಸುದೇವ್ ಘಾಟ್‌ನಲ್ಲಿ ಫಿಲ್ಟರ್ ನೀರಿನ ನಕಲಿ ಯಮುನಾ ಘಾಟ್ ನಿರ್ಮಿಸಲಾಗಿದೆ. ಭಕ್ತರು ಕಲುಷಿತ ನದಿಯಲ್ಲಿ ನಿಲ್ಲಬೇಕಾಗಿದೆ” ಎಂದು ಭಾರದ್ವಾಜ್ ಕಿಡಿಕಾರಿದ್ದಾರೆ.
ದೆಹಲಿಗೆ ಕುಡಿಯುವ ನೀರು ಪೂರೈಸುವ ವಝೀರಾಬಾದ್ ನೀರು ಸಂಸ್ಕರಣಾ ಘಟಕದ ಪೈಪ್‌ಲೈನ್‌ನಿಂದ ಘಾಟ್‌ಗೆ ನೀರನ್ನು ತೆಗೆದುಕೊಳ್ಳಲಾಗಿದೆ ಎಂದು ಭಾರದ್ವಾಜ್ ಆರೋಪಿಸಿದ್ದಾರೆ.
ದೆಹಲಿ ಜಲ ಸಚಿವ ಪರ್ವೇಶ್ ವರ್ಮಾ ಅವರು ಹಿಂದಿನ ಎಎಪಿ ಸರ್ಕಾರವನ್ನು ನಿಂದಿಸಿ ಅಧಿಕಾರಿಗಳ ಹಲ್ಲೆ ಮಾಡಿದ್ದ ನೊರೆಯನ್ನು ತೆರವುಗೊಳಿಸಲು ಈಗ ಅದೇ ರಾಸಾಯನಿಕವನ್ನು ಯಮುನಾ ನದಿಗೆ ಸಿಂಪಡಿಸುತ್ತಿದ್ದಾರೆ ಎಂದು ಭಾರದ್ವಾಜ್ ಹೇಳಿದ್ದಾರೆ.
ಬಿಜೆಪಿ ಒಂದು ಸುಳ್ಳು ಮರೆಮಾಚಲು ಸಾವಿರ ಸುಳ್ಳು ಹೇಳುತ್ತಿದೆ. ಮತದಾರರನ್ನು ಮರುಳು ಮಾಡಲು ಮತ್ತು ಯಮುನಾ ನದಿ ಅಪಾಯಕಾರಿಯಾಗಿ ವಿಷಕಾರಿಯಾಗಿದೆ ಎಂಬ ಸತ್ಯವನ್ನು ಮರೆಮಾಚಲು ನಾಟಕ ಮಾಡುತ್ತಿದೆ ಎಂದು ಭಾರದ್ವಾಜ್ ಆರೋಪಿಸಿದ್ದಾರೆ.
“ಯಮುನಾ ನೀರು ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿ ಒಪ್ಪಿಕೊಂಡಿದೆ. ಆದರೂ, ಬಿಜೆಪಿ ನಾಯಕರು ಫೋಟೋ ತೆಗೆಯಲು ಮತ್ತು ನೊರೆಯನ್ನು ಮರೆಮಾಚಲು ರಾಸಾಯನಿಕಗಳನ್ನು ಸಿಂಪಡಿಸುವಲ್ಲಿ ನಿರತರಾಗಿದ್ದಾರೆ” ಎಂದು ಭಾರದ್ವಾಜ್ ಹೇಳಿದ್ದಾರೆ.
ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ ಪತ್ರಿಕಾಗೋಷ್ಠಿಯಲ್ಲಿ ಎಎಪಿಯ ಆರೋಪಗಳನ್ನು ತಳ್ಳಿಹಾಕಿದ್ದಾರೆ.
“ದೆಹಲಿಯ ಮತ್ತು ಇಡೀ ದೇಶದ ಜನರು ಆಮ್ ಆದ್ಮಿ ಪಕ್ಷದ ನಾಯಕತ್ವದ ರಾಜಕೀಯ ಹತಾಶೆಯ ನಾಚಿಕೆಗೇಡಿನ ಮಾದರಿಯನ್ನು ಕಂಡಿದ್ದಾರೆ. ಯಮುನಾ ನದಿಯ ದಡದಲ್ಲಿರುವ ನೈಸರ್ಗಿಕ ವಾಸುದೇವ್ ಘಾಟ್ ಅನ್ನು ಸ್ವಚ್ಛಗೊಳಿಸಲು ಮತ್ತು ಅಲ್ಲಿ ಶುದ್ಧ ನೀರಿನ ಲಭ್ಯತೆಗೆ ಎಎಪಿ ನಾಯಕ ಸೌರಭ್ ಭಾರದ್ವಾಜ್ ಆಕ್ಷೇಪ ವ್ಯಕ್ತಪಡಿಸಿದ್ದನ್ನು ಜನರು ನೋಡಿದ್ದಾರೆ” ಎಂದು ಹೇಳಿದ್ದಾರೆ.
“ಯಮುನಾ ನದಿಯ ಶುದ್ಧೀಕರಣಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸೌರಭ್ ಭಾರದ್ವಾಜ್ ಅವರು ಯಮುನಾ ದಡದಿಂದ ಬಿಡುಗಡೆ ಮಾಡಿದ ಲೈವ್ ವಿಡಿಯೋ, ಸರ್ಕಾರದ ಸ್ವಚ್ಛತೆ ಮತ್ತು ನೈರ್ಮಲ್ಯ ಪ್ರಯತ್ನಗಳ ವಿರುದ್ಧ ವಿರೋಧ ಪಕ್ಷದ ನಾಯಕರೊಬ್ಬರು ಆಕ್ಷೇಪಣೆ ವ್ಯಕ್ತಪಡಿಸಿದ ಮೊದಲ ರಾಜಕೀಯ ನಾಟಕವಾಗಿದೆ” ಎಂದು ಸಚ್‌ದೇವ ವಾಗ್ದಾಳಿ ನಡೆಸಿದ್ದಾರೆ.
ಹಿಂದಿನ ಎಎಪಿ ಸರ್ಕಾರವನ್ನು ಟೀಕಿಸಿದ ಸಚ್‌ದೇವ, 2018 ರಿಂದ 2024 ರವರೆಗೆ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಯಮುನಾ ನದಿಯ ದಡದಲ್ಲಿ ಛತ್ ಪೂಜೆಯನ್ನು ನಿಷೇಧಿಸಿದ್ದರು ಎಂದು ಹೇಳಿದ್ದಾರೆ.
ಈಗ, ರೇಖಾ ಗುಪ್ತಾ ಅವರ ಸರ್ಕಾರವು ಯಮುನಾದ ಮೂಲಭೂತ ಶುಚಿಗೊಳಿಸುವಿಕೆಯನ್ನು ಪೂರ್ಣಗೊಳಿಸಿ, ಕೇವಲ ಎಂಟು ತಿಂಗಳಲ್ಲಿ ಭಕ್ತರಿಗೆ ಛತ್ ಆಚರಣೆಗಳನ್ನು ಮಾಡಲು ನೈಸರ್ಗಿಕ ಘಾಟ್‌ಗಳು ಲಭ್ಯವಾಗುವಂತೆ ಮಾಡಿದಾಗ, ಅವರು ಗದ್ದಲ ಎಬ್ಬಿಸುತ್ತಿದ್ದಾರೆ ಎಂದಿದ್ದಾರೆ.
ಎಎಪಿ ನಾಯಕ ಭಾರದ್ವಾಜ್ ಅವರ ಸುದ್ದಿಗೋಷ್ಠಿ ಬಳಿಕ ಪ್ರಧಾನಿ ನಕಲಿ ಯಮುನಾ ಘಾಟ್ ವಿಷಯ ದೇಶದಾದ್ಯಂತ ಚರ್ಚೆಯಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ಗಳಿಗೆ ಆಹಾರವಾಗಿದೆ.


