ಕೇಂದ್ರ ಮಾಹಿತಿ ಆಯೋಗದ (ಸಿಐಸಿ) ನೇಮಕಾತಿಗಳಿಗೆ ಆಯ್ಕೆಯಾದ ಅಭ್ಯರ್ಥಿಗಳ ಹೆಸರುಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಲು ಸುಪ್ರೀಂ ಕೋರ್ಟ್ ಸೋಮವಾರ (ಅ.27) ನಿರಾಕರಿಸಿದೆ.
ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯಡಿ ಪಾರದರ್ಶಕ ನೇಮಕಾತಿಗಳಿಗಾಗಿ ನ್ಯಾಯಾಲಯವು ಈ ಹಿಂದೆ ನಿಗದಿಪಡಿಸಿದ ಮಾರ್ಗಸೂಚಿಗಳನ್ನು ಕೇಂದ್ರವು ಅನುಸರಿಸುತ್ತದೆ ಎಂಬುದರಲ್ಲಿ ‘ಸಂದೇಹಪಡಲು ಯಾವುದೇ ಕಾರಣಗಳಿಲ್ಲ’ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಕೇಂದ್ರ ಮತ್ತು ರಾಜ್ಯ ಮಾಹಿತಿ ಆಯೋಗಗಳ ನೇಮಕಾತಿಗಳಲ್ಲಿ ವಿಳಂಬ ಮತ್ತು ಪಾರದರ್ಶಕತೆಯ ಕೊರತೆಯ ಕುರಿತು ಹೋರಾಟಗಾರ್ತಿ ಅಂಜಲಿ ಭಾರದ್ವಾಜ್ ಅವರು ವಕೀಲ ಪ್ರಶಾಂತ್ ಭೂಷಣ್ ಮೂಲಕ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರ ಪೀಠವು ವಿಚಾರಣೆ ನಡೆಸಿದೆ.
ಮಾಹಿತಿ ಆಯೋಗಗಳಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವಂತೆ ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಈ ಹಿಂದೆ ಆದೇಶಗಳನ್ನು ನೀಡಿದ್ದರೂ, ಸರ್ಕಾರ ಕರ್ತವ್ಯಲೋಪ ಎಸಗಿದೆ ಎಂದು ಭೂಷಣ್ ವಾದಿಸಿದ್ದರು.
“ಜನವರಿ 7ರಂದು ನ್ಯಾಯಾಲಯವು ಕೇಂದ್ರ ಸರ್ಕಾರಕ್ಕೆ ಒಂದು ನಿರ್ದೇಶನ ನೀಡಿತ್ತು. ಅದರಲ್ಲಿ ‘ಶೋಧ ಸಮಿತಿಯ ಸದಸ್ಯರ ಹೆಸರುಗಳು ಮತ್ತು ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಪಟ್ಟಿ’ಯನ್ನು ಬಹಿರಂಗಪಡಿಸುವಂತೆ ಸೂಚಿಸಲಾಗಿತ್ತು. ಮತ್ತಷ್ಟು, ಈ ವಿವರಗಳನ್ನು ‘ಅಂಜಲಿ ಭಾರದ್ವಾಜ್ ಪ್ರಕರಣದಲ್ಲಿ ಈ ನ್ಯಾಯಾಲಯವು ನೀಡಿದ ನಿರ್ದೇಶನಗಳ ಪ್ರಕಾರ ಅಧಿಸೂಚನೆ ಮಾಡಬೇಕು’ ಎಂದು ಆದೇಶದಲ್ಲಿ ಹೇಳಲಾಗಿತ್ತು. ಆದರೆ, ಕೇಂದ್ರ ಸರ್ಕಾರವು ಈ ನಿರ್ದೇಶನಗಳನ್ನು ಉಲ್ಲಂಘಿಸಿ ವರ್ತಿಸುತ್ತಿದೆ” ಎಂದು ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ ನಟರಾಜ್, “ಶೋಧನಾ ಸಮಿತಿಯು ಹೆಸರುಗಳನ್ನು ಶಾರ್ಟ್‌ಲಿಸ್ಟ್ ಮಾಡಿದೆ. ಪ್ರಧಾನಿ, ವಿರೋಧ ಪಕ್ಷದ ನಾಯಕ ಮತ್ತು ಪ್ರಧಾನಿ ನಾಮನಿರ್ದೇಶನ ಮಾಡಿದ ಕೇಂದ್ರ ಸಚಿವರನ್ನು ಒಳಗೊಂಡ ಆಯ್ಕೆ ಸಮಿತಿಯು ನೇಮಕಾತಿಗಳನ್ನು ಮಾಡುತ್ತದೆ” ಎಂದು ಪೀಠಕ್ಕೆ ತಿಳಿಸಿದ್ದರು. “ಸಂಪೂರ್ಣ ನೇಮಕಾತಿ ಪ್ರಕ್ರಿಯೆಯು ಎರಡರಿಂದ ಮೂರು ವಾರಗಳಲ್ಲಿ ಪೂರ್ಣಗೊಳ್ಳಲಿದೆ” ಎಂದು ಭರವಸೆ ನೀಡಿದ್ದರು.
ಇದಕ್ಕೆ, ಹಿಂದಿನ ತೀರ್ಪುಗಳ ಹೊರತಾಗಿಯೂ ಶಾರ್ಟ್‌ಲಿಸ್ಟ್ ಮಾಡಲಾದ ಅಭ್ಯರ್ಥಿಗಳ ಹೆಸರುಗಳು ಮತ್ತು ಅವರನ್ನು ಆಯ್ಕೆ ಮಾಡುವ ಮಾನದಂಡಗಳನ್ನು ಸಾರ್ವಜನಿಕಗೊಳಿಸಲಾಗಿಲ್ಲ ಎಂದು ಭೂಷಣ್ ಪ್ರತಿಕ್ರಿಯೆ ನೀಡಿದ್ದರು.
“ನೇಮಕಾತಿ ಮಾಡುವ ಮೊದಲು ಅವರು ಶಾರ್ಟ್‌ಲಿಸ್ಟ್ ಮಾಡುವ ಮಾನದಂಡಗಳನ್ನು ಮತ್ತು ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಬೇಕು” ಎಂದು ಭೂಷಣ್ ಆಗ್ರಹಿಸಿದ್ದರು. “ಅರ್ಜಿ ಸಲ್ಲಿಸದ ವ್ಯಕ್ತಿಯನ್ನು ಕೂಡ ನೇಮಿಸಬಹುದು ಎಂದು ಅವರು ಹೇಳುತ್ತಿದ್ದಾರೆ. ಆರ್‌ಟಿಐ ಕಾಯ್ದೆಯಲ್ಲಿ ಯಾವುದೇ ಪೂರ್ವ ಅನುಭವವಿಲ್ಲದ ಪತ್ರಕರ್ತರೊಬ್ಬರನ್ನು ಸರ್ಕಾರವನ್ನು ಹೊಗಳುವ ಲೇಖನಗಳನ್ನು ಬರೆದ ಕಾರಣಕ್ಕೆ ಸಿಐಸಿಗೆ ನೇಮಿಸಲಾಗಿದೆ. ಸರಿಯಾದ ಮಾನದಂಡಗಳನ್ನು ಅನುಸರಿಸದೆ ಜನರನ್ನು ‘ಏರ್-ಡ್ರಾಪ್’ ಮಾಡಲಾಗುತ್ತಿದೆ” ಎಂದು ಪ್ರಶಾಂತ್ ಭೂಷಣ್ ಆರೋಪಿಸಿದ್ದರು.
ಖಾಲಿ ಹುದ್ದೆಗಳನ್ನು ಭರ್ತಿ ಮಾಡುವಲ್ಲಿ ವಿಳಂಬವಾಗಿದೆ ಎಂದು ಒಪ್ಪಿಕೊಂಡ ನ್ಯಾಯಮೂರ್ತಿ ಕಾಂತ್, ಈ ಪ್ರಕ್ರಿಯೆಯು 2-3 ವಾರಗಳಲ್ಲಿ ಮುಗಿಯುವುದರಿಂದ ಫಲಿತಾಂಶಕ್ಕಾಗಿ ಕಾಯುವುದು ಉತ್ತಮ ಎಂದು ಪ್ರಶಾಂತ್ ಭೂಷಣ್ ಅವರಿಗೆ ಸೂಚಿಸಿದ್ದಾರೆ. “ನೀವು ಹೇಳಿದ್ದು ಸರಿ ವಿಳಂಬವಾಗಿದೆ. ಆದರೆ, ಅವರು ಸ್ವಲ್ಪ ಸಮಯ ಕೇಳುತ್ತಿದ್ದಾರೆ. ಸರಿಯಾದ ಸಮಯ ಬರಲಿ” ಎಂದು ನ್ಯಾಯಮೂರ್ತಿ ಕಾಂತ್ ಭೂಷಣ್ ಅವರಿಗೆ ತಿಳಿಸಿದ್ದಾರೆ.
“ನೇಮಕಾತಿಗಿಂತ ಮೊದಲು ಪಾರದರ್ಶಕತೆ ಇರಬೇಕು. ಯಾರು ಅರ್ಜಿ ಸಲ್ಲಿಸಿದ್ದಾರೆ, ಅವರ ಆಯ್ಕೆಗೆ ಮಾನದಂಡಗಳು ಯಾವುವು ಮತ್ತು ಯಾರನ್ನು ಶಾರ್ಟ್‌ಲಿಸ್ಟ್ ಮಾಡಲಾಗಿದೆ ಎಂದು ತಿಳಿದುಕೊಳ್ಳುವ ಹಕ್ಕು ಜನರಿಗೆ ಇದೆ. ನೇಮಕಾತಿಗೆ ಮೊದಲು ಇದನ್ನು ಮಾಡಬೇಕು” ಎಂದು ಭೂಷಣ್ ವಾದಿಸಿದ್ದಾರೆ.
ಈ ವೇಳೆ ನೇಮಕಾತಿ ಪೂರ್ವ ಬಹಿರಂಗಪಡಿಸುವಿಕೆಯ ಅರ್ಜಿಯನ್ನು ವಿರೋಧಿಸಿದ ಎಎಸ್‌ಜಿ ನಟರಾಜ್, “ಯಾವುದೇ ಅನರ್ಹ ವ್ಯಕ್ತಿಯನ್ನು ನೇಮಿಸಿದರೆ, ನೇಮಕಾತಿಯ ನಂತರ ನ್ಯಾಯಾಲಯವು ಅದನ್ನು ಪರಿಶೀಲಿಸಬಹುದು” ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ.ಕಾಂತ್ ಅವರು, “ಆಯ್ಕೆ ಪ್ರಕ್ರಿಯೆಯ ಪ್ರತಿಯೊಂದು ಹಂತದಲ್ಲೂ ನ್ಯಾಯಾಂಗದ ಹಸ್ತಕ್ಷೇಪವು ಕಾರ್ಯನಿರ್ವಹಣೆಗೆ ಅಡ್ಡಿಯಾಗಬಹುದು. ನಾವು ಪ್ರತಿ ಹಂತಕ್ಕೂ ನ್ಯಾಯಾಂಗ ಪರಿಶೀಲನೆಯನ್ನು ಪ್ರಾರಂಭಿಸಿದರೆ ಯಾವುದೇ ಆಯ್ಕೆ ಸಾಧ್ಯವಿಲ್ಲ. ಪಾರದರ್ಶಕತೆ ಇರಬೇಕು, ಮತ್ತು ನಾವು ಅದನ್ನು ಖಚಿತಪಡಿಸಿಕೊಳ್ಳುತ್ತೇವೆ. ತಿಳಿದುಕೊಳ್ಳುವ ಹಕ್ಕು ಇದೆ, ಮತ್ತು ಅದಕ್ಕೆ ಯಾವುದೇ ಅಪವಾದ ಆಗಲು ಬಿಡುವುದಿಲ್ಲ” ಎಂದಿದ್ದಾರೆ.
ಯಾವುದೇ ಅನರ್ಹ ನೇಮಕಾತಿ ನಡೆದರೆ ನ್ಯಾಯಾಲಯ ಮಧ್ಯಪ್ರವೇಶಿಸುತ್ತದೆ ಎಂದು ನ್ಯಾಯಮೂರ್ತಿ ಕಾಂತ್ ಭೂಷಣ್ ಅವರಿಗೆ ಭರವಸೆ ನೀಡಿದ್ದಾರೆ.
ಹಲವಾರು ರಾಜ್ಯಗಳು ಈಗಾಗಲೇ ಶಾರ್ಟ್‌ಲಿಸ್ಟ್ ಮಾಡಿದ ಹೆಸರುಗಳನ್ನು ಬಹಿರಂಗಪಡಿಸುತ್ತಿದ್ದರೆ, ಕೇಂದ್ರವು ಅದೇ ರೀತಿ ಏಕೆ ಮಾಡಬಾರದು? ಈ ದೇಶದ ಜನರಿಗೆ ಯಾರನ್ನು ಪರಿಗಣಿಸಲಾಗುತ್ತಿದೆ ಎಂದು ತಿಳಿಯುವ ಹಕ್ಕು ಏಕೆ ಇರಬಾರದು? ಎಂದು ಪ್ರಶಾಂತ್ ಭೂಷಣ್ ಪ್ರಶ್ನಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ.ಕಾಂತ್ ಅವರು, “ಅವರು ಬಹಿರಂಗಪಡಿಸುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ ಹೇಳಿದ್ದಾರೆ. ನೇಮಕಾತಿ ಮುಗಿಯುವ ಮೊದಲು ಅವರು ಅದನ್ನು ಮಾಡಬೇಕು” ಎಂದು ಭೂಷಣ್ ಆಗ್ರಹಿಸಿದ್ದಾರೆ.
ಭೂಷಣ್ ಅವರ ಭಾರೀ ಮನವಿಯ ಹೊರತಾಗಿಯೂ, ಶಾರ್ಟ್‌ಲಿಸ್ಟ್ ಮಾಡಲಾದ ಹೆಸರುಗಳನ್ನು ಬಹಿರಂಗಪಡಿಸಲು ಪೀಠವು ಯಾವುದೇ ನಿರ್ದೇಶನವನ್ನು ನೀಡಿಲ್ಲ.
ರೈತ ಮಹಿಳೆಯ ವಿರುದ್ಧ ಅವಹೇಳನಕಾರಿ ಹೇಳಿಕೆ ಪ್ರಕರಣ: ಕ್ಷಮೆಯಾಚಿಸಿದ ನಟಿ ಕಂಗನಾ ರಣಾವತ್‌ಗೆ ಜಾಮೀನು


