ಯಾವುದೇ ಖಾಸಗಿ ಸಂಘ, ಸಂಸ್ಥೆ ಅಥವಾ ವ್ಯಕ್ತಿಗಳ ಗುಂಪು ಸರ್ಕಾರಿ ಆಸ್ತಿ ಅಥವಾ ಆವರಣವನ್ನು ಬಳಸಲು ‘ಪೂರ್ವಾನುಮತಿ’ ಕಡ್ಡಾಯಗೊಳಿಸಿದ್ದ ರಾಜ್ಯ ಸರ್ಕಾರದ ಇತ್ತೀಚಿನ ಆದೇಶಕ್ಕೆ ತಡೆ ನೀಡಿ ಹೈಕೋರ್ಟ್‌ನ ಧಾರವಾಡ ಪೀಠವು ಮಂಗಳವಾರ (ಅ.28) ಆದೇಶಿಸಿದೆ.
ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಸರ್ಕಾರದ ನಿರ್ದೇಶನಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿ, ಮುಂದಿನ ವಿಚಾರಣೆಯನ್ನು ನವೆಂಬರ್ 17ಕ್ಕೆ ಮುಂದೂಡಿದೆ ಎಂದು ವರದಿಯಾಗಿದೆ.
ಅರ್ಜಿದಾರರ ಪರ ನ್ಯಾಯಾಲಯಕ್ಕೆ ಹಾಜರಾದ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ, ಈ ಆದೇಶವು ನಾಗರಿಕರ ಮೂಲಭೂತ ಹಕ್ಕುಗಳ ಮೇಲೆ ನಿರ್ಬಂಧ ಹೇರುತ್ತದೆ ಎಂದು ವಾದಿಸಿದ್ದಾರೆ.
“ಹತ್ತಕ್ಕಿಂತ ಹೆಚ್ಚು ಜನರು ಸೇರುವ ಸಭೆಗಳಿಗೆ ಅನುಮತಿ ಪಡೆಯಬೇಕೆಂದು ಸರ್ಕಾರ ಆದೇಶಿಸಿದೆ. ಇದು ಸಂವಿಧಾನದಲ್ಲಿ ಒದಗಿಸಲಾದ ಮೂಲಭೂತ ಹಕ್ಕಿನ ಮೇಲಿನ ನಿರ್ಬಂಧವಾಗಿದೆ. ಉದ್ಯಾನವನದಲ್ಲಿ ಪಾರ್ಟಿ ನಡೆಸಿದರೂ, ಸರ್ಕಾರಿ ಆದೇಶದ ಪ್ರಕಾರ ಅದು ಕಾನೂನುಬಾಹಿರ ಸಭೆಯಾಗುತ್ತದೆ” ಎಂದು ವಕೀಲ ಹಾರನಹಳ್ಳಿ ವಿಚಾರಣೆಯ ಸಂದರ್ಭದಲ್ಲಿ ಹೇಳಿದ್ದಾರೆ.
ಆರ್‌ಎಸ್‌ಎಸ್ ಸಂಬಂಧಿತ ಚಟುವಟಿಕೆಗಳನ್ನು ನಿರ್ಬಂಧಿಸುವ ಗುರಿಯನ್ನು ಹೊಂದಿದೆ ಎಂದು ಹಲವರು ಭಾವಿಸಿದ್ದ ಈ ಆದೇಶವು ಮುಂದಿನ ವಿಚಾರಣೆಯವರೆಗೆ ತಡೆಹಿಡಿಯಲ್ಪಟ್ಟಿದೆ.
ಸರ್ಕಾರದ ಆದೇಶವನ್ನು ಪ್ರಶ್ನಿಸಿ ಹುಬ್ಬಳ್ಳಿಯ ಪುನಃಶ್ಚೇತನ ಸೇವಾ ಸಂಸ್ಥೆ ಅಧ್ಯಕ್ಷ ವಿನಾಯಕ ಮತ್ತು ವಿ ಕೇರ್ ಫೌಂಡೇಶನ್ ಅಧ್ಯಕ್ಷ ಗಂಗಾಧರಯ್ಯ, ಧಾರವಾಡದ ರಾಜೀವ ಮಲ್ಹಾರ ಕುಲಕರ್ಣಿ ಹಾಗೂ ಬೆಳಗಾವಿಯ ಉಮಾ ಸತ್ಯಜಿತ್ ಚವಾಣ್ ಅರ್ಜಿ ಸಲ್ಲಿಸಿದ್ದರು. ಸರ್ಕಾರದ ಕ್ರಮವು ಖಾಸಗಿ ಸಂಸ್ಥೆಗಳು ಕಾನೂನುಬದ್ಧ ಚಟುವಟಿಕೆಗಳನ್ನು ನಡೆಸುವ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ವಾದಿಸಿದ್ದರು.
ಈ ತಿಂಗಳ ಆರಂಭದಲ್ಲಿ ಹೊರಡಿಸಲಾದ, ಈಗ ತಡೆಹಿಡಿಯಲಾದ ಸರ್ಕಾರಿ ಆದೇಶ (ಜಿಒ)ವು ಸಾರ್ವಜನಿಕ ಮತ್ತು ಸರ್ಕಾರಿ ಸ್ವಾಮ್ಯದ ಆಸ್ತಿಗಳನ್ನು ಹೇಗೆ ಬಳಸಬಹುದು ಎಂಬುದರ ಕುರಿತು ವಿವರವಾದ ಮಾರ್ಗಸೂಚಿಗಳನ್ನು ರೂಪಿಸಿತ್ತು.
ಯಾವುದೇ ಖಾಸಗಿ ಅಥವಾ ಸಾಮಾಜಿಕ ಸಂಸ್ಥೆಗಳು ಸರ್ಕಾರಿ ಶಾಲೆಗಳು, ಕಾಲೇಜು ಮೈದಾನಗಳು ಅಥವಾ ಇತರ ಸರ್ಕಾರಿ ಸ್ಥಳಗಳಲ್ಲಿ ಆಯಾ ಇಲಾಖೆಗಳ ಮುಖ್ಯಸ್ಥರ ಲಿಖಿತ ಅನುಮತಿಯಿಲ್ಲದೆ ಕಾರ್ಯಕ್ರಮಗಳು, ಸಭೆಗಳು ಅಥವಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ ಎಂದು ಸರ್ಕಾರದ ಆದೇಶ ಹೇಳಿತ್ತು.
ಕರ್ನಾಟಕ ಭೂ ಕಂದಾಯ ಮತ್ತು ಶಿಕ್ಷಣ ಕಾಯ್ದೆಗಳ ಅಡಿಯಲ್ಲಿ ಯಾವುದೇ ಉಲ್ಲಂಘನೆಗಳ ವಿರುದ್ಧ ಕ್ರಮ ಕೈಗೊಳ್ಳಲು ಮತ್ತು ಅನುಸರಣೆಯನ್ನು ಮೇಲ್ವಿಚಾರಣೆ ಮಾಡಲು ಜಿಲ್ಲಾಡಳಿತಗಳಿಗೆ ನಿರ್ದೇಶನ ನೀಡಿತ್ತು.
ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಅವರು ಸರ್ಕಾರದ ಈ ಕ್ರಮವು ಯಾವುದೇ ನಿರ್ದಿಷ್ಟ ಸಂಸ್ಥೆಯನ್ನು ಗುರಿಯಾಗಿರಿಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಸಿಎಂ ಸಿದ್ದರಾಮಯ್ಯ ಕೂಡ ಆರ್‌ಎಸ್‌ಎಸ್ ಅನ್ನು ಗುರಿಯಾಗಿಸಿ ಆದೇಶ ಹೊರಡಿಸಿಲ್ಲ ಎಂದು ಹೇಳಿದ್ದರು.
ಹೈಕೋರ್ಟ್ ಪೀಠದ ಇಂದಿನ ಆದೇಶದ ಬಗ್ಗೆ ಸಾರ್ವಜನಿಕರು ಗೊಂದಲ ವ್ಯಕ್ತಪಡಿಸಿದ್ದಾರೆ. ನ್ಯಾಯಾಲಯ ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆ ನೀಡಿರುವ ಹಿನ್ನೆಲೆ, ಮುಂದಿನ ಆದೇಶದವರೆಗೆ ಖಾಸಗಿ ಸಂಘ, ಸಂಸ್ಥೆಗಳು ಸರ್ಕಾರಿ ಆಸ್ತಿ ಅಥವಾ ಆವರಣವನ್ನು ತಮ್ಮ ಚಟುವಟಿಕೆಗಳಿಗೆ ಬಳಸಿಕೊಳ್ಳಬಹುದೇ? ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.
ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಭಾಗಿಯಾಗಿದ್ದ ಡಾ. ಶ್ರೀಧರ್; ಯಶಸ್ವಿನಿ ಟ್ರಸ್ಟ್‌ನಿಂದ ಹೆಸರು ಕೈಬಿಟ್ಟ ಸರ್ಕಾರ


