ಬಿಹಾರದ ವಿರೋಧ ಪಕ್ಷಗಳ ‘ಮಹಾಘಟಬಂಧನ್’ ಮೈತ್ರಿಕೂಟವು ಮುಂಬರುವ ವಿಧಾನಸಭಾ ಚುನಾವಣೆಗೆ ಮಂಗಳವಾರ (ಅ.28) ತನ್ನ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಮಹಿಳೆಯರಿಗೆ ಆರ್ಥಿಕ ನೆರವು, ಸರ್ಕಾರಿ ಉದ್ಯೋಗ ಸೇರಿದಂತೆ ಭರಪೂರ ಭರವಸೆಗಳನ್ನು ನೀಡಿದೆ.
ಸರ್ಕಾರ ರಚನೆಯಾದ 20 ದಿನಗಳಲ್ಲಿ ಪ್ರತಿ ಕುಟುಂಬದ ಒಬ್ಬ ಸದಸ್ಯನಿಗೆ ಉದ್ಯೋಗ, ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ಮತ್ತು ಮಹಿಳೆಯರಿಗೆ ಮಾಸಿಕ 2,500 ರೂ. ಆರ್ಥಿಕ ನೆರವು ಪ್ರಣಾಳಿಕೆಯಲ್ಲಿ ಪ್ರಮುಖ ಅಂಶಗಳಾಗಿವೆ.
ಹಳೆಯ ಪಿಂಚಣಿ ಯೋಜನೆಯ (ಒಪಿಎಸ್) ಅನುಷ್ಠಾನದ ಭರವಸೆಯನ್ನು ಕೂಡ ಪ್ರಣಾಳಿಕೆ ನೀಡಿದೆ.
ಮಹಾಘಟಬಂಧನ್ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ತೇಜಸ್ವಿ ಯಾದವ್ ಅವರನ್ನು ಘೋಷಿಸಿದ ಬೆನ್ನಲ್ಲೇ, ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಗಿದೆ. ವಿಕಾಸ್‌ಶೀಲ್ ಇನ್ಸಾನ್ ಪಕ್ಷದ ಮುಖ್ಯಸ್ಥ ಮುಖೇಶ್ ಸಹಾನಿ ಅವರನ್ನು ಮಹಾ ಮೈತ್ರಿಕೂಟದ ಉಪಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೊಷಣೆ ಮಾಡಲಾಗಿದೆ.
ಬಿಹಾರದ ಆಡಳಿತಾರೂಢ ಎನ್‌ಡಿಎ ಅಕ್ಟೋಬರ್ 30 ರಂದು ವಿಧಾನಸಭಾ ಚುನಾವಣೆಗೆ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ.
ಮಹಾಘಟಬಂಧನ್ (ಮಹಾ ಮೈತ್ರಿಕೂಟ) ಅಥವಾ ಇಂಡಿಯಾ ಒಕ್ಕೂಟದ ಪ್ರಣಾಳಿಕೆಯ ಮುಖ್ಯಾಂಶಗಳು ಹೀಗಿವೆ.
- ಸರ್ಕಾರ ರಚನೆಯಾದ 20 ದಿನಗಳಲ್ಲಿ, ಪ್ರತಿ ಕುಟುಂಬದ ಒಬ್ಬ ಸದಸ್ಯರಿಗೆ ಉದ್ಯೋಗ ಸಿಗುವಂತೆ ಕಾನೂನು ರೂಪಿಸುವುದು, ಮುಂದಿನ 20 ತಿಂಗಳೊಳಗೆ ಉದ್ಯೋಗ ನೀಡುವ ಪ್ರಕ್ರಿಯೆಯನ್ನು ಪ್ರಾರಂಭಿಸುವುದು.
- ಸರ್ಕಾರಿ ಮತ್ತು ಖಾಸಗಿ ವಲಯಗಳಲ್ಲಿ 5 ವರ್ಷಗಳಲ್ಲಿ 3 ಮಿಲಿಯನ್ ಹೊಸ ಉದ್ಯೋಗಗಳನ್ನು ಸೃಷ್ಟಿಸುವುದು. ಇದರಲ್ಲಿ 1 ವರ್ಷದೊಳಗೆ ಎಲ್ಲಾ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದು ಸೇರಿದೆ.
- ರಾಜ್ಯದ ನಗರ ಪ್ರದೇಶದ ಯುವಕರಿಗೆ ಉದ್ಯೋಗಾವಕಾಶಗಳಿಗಾಗಿ ‘ಬಿಹಾರ ಉದ್ಯೋಗ ಖಾತರಿ ಮಿಷನ್’ ಮತ್ತು ಪದವೀಧರರು ಮತ್ತು ಡಿಪ್ಲೊಮಾ ಪೂರ್ಣಗೊಳಿಸಿದವರಿಗೆ ಮಾಸಿಕ 3 ಸಾವಿರ ರೂಪಾಯಿ ನಿರುದ್ಯೋಗ ಭತ್ಯೆ.
- ‘ಮಾಯಿ-ಬಹಿನಿ ಯೋಜನೆ’ ಅಡಿಯಲ್ಲಿ ಮಹಿಳೆಯರಿಗೆ 2,500 ರೂಪಾಯಿ ಮಾಸಿಕ ಆರ್ಥಿಕ ಸಹಾಯ
- ಸರ್ಕಾರಿ ಉದ್ಯೋಗಗಳು ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ. 50 ರಷ್ಟು ಮೀಸಲಾತಿ
- ಗ್ರಾಮೀಣ ಮಹಿಳಾ ಉತ್ಪಾದಕರನ್ನು ಬೆಂಬಲಿಸಲು ರಾಜ್ಯದ ಮದ್ಯ ನಿಷೇಧ ಕಾನೂನಿನಿಂದ ‘ಟೋಡಿ’ಗೆ (ತಾರಿ, ಸಾಂಪ್ರದಾಯಿಕ ತಾಳೆ ಮದ್ಯ) ವಿನಾಯಿತಿ
- ಬಡ ಮತ್ತು ಮಧ್ಯಮ ವರ್ಗದ ಮನೆಗಳಿಗೆ ತಿಂಗಳಿಗೆ 200 ಯೂನಿಟ್ ಉಚಿತ ವಿದ್ಯುತ್
- ಸಂಪೂರ್ಣ ಕೃಷಿ ಸಾಲ ಮನ್ನಾ
- ಎಲ್ಲಾ ಬೆಳೆಗಳಿಗೆ ಇನ್ಪುಟ್ ವೆಚ್ಚಗಳು + 50 ಶೇಕಡ ಲಾಭವನ್ನು ಒಳಗೊಂಡ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಗ್ಯಾರಂಟಿ
- ಪ್ರತಿ ಭೂಹೀನ ಕುಟುಂಬಕ್ಕೆ 5 ದಶಮಾಂಶ ಭೂಮಿ (ಸುಮಾರು 1/20 ಎಕರೆ)
- ಶಿಶುವಿಹಾರದಿಂದ ಪದವಿ ವರೆಗೆ ಉಚಿತ ಶಿಕ್ಷಣ.
- ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಪುನಃಸ್ಥಾಪನೆ
- ಜಾತಿ ಆಧಾರಿತ ಜನಗಣತಿ ಮತ್ತು ಹೊಸ ದತ್ತಾಂಶಗಳ ಆಧಾರದ ಮೇಲೆ ಮೀಸಲಾತಿ ಕೋಟಾಗಳ ಪರಿಶೀಲನೆ
- ಹಿಂದುಳಿದ ವರ್ಗಗಳು, ದಲಿತರು ಮತ್ತು ಬುಡಕಟ್ಟು ವರ್ಗಕ್ಕೆ ಇನ್ನು ಹೆಚ್ಚಿನ ಸಮುದಾಯಗಳನ್ನು ಸೇರಿಸಲು ಮೀಸಲಾತಿ ಮೇಲಿನ ಶೇಕಡ 50ರ ಮಿತಿಯನ್ನು ತೆಗೆದುಹಾಕುವುದು.
- ಎಲ್ಲಾ ಕುಟುಂಬಗಳಿಗೆ ಸಾರ್ವತ್ರಿಕ ಆರೋಗ್ಯ ರಕ್ಷಣೆ
- ಹಸಿರು ಬಿಹಾರ ಮಿಷನ್ ಅಡಿ ಅರಣ್ಯೀಕರಣ, ವಿಸ್ತೃತ ನೀರಾವರಿ, ನವೀಕರಿಸಬಹುದಾದ ಇಂಧನ ಯೋಜನೆಗಳು ಮತ್ತು ಉದ್ಯೋಗಗಳನ್ನು ಸೃಷ್ಟಿಸಲು ಹಾಗೂ ವಲಸೆಯನ್ನು ತಡೆಯಲು ಹೊಸ ಕೈಗಾರಿಕಾ ಕಾರಿಡಾರ್‌ಗಳು
- ಬಿಹಾರವನ್ನು ‘ಅಪರಾಧ ಮುಕ್ತ’ ಗೊಳಿಸಲು ವರ್ಧಿತ ಪೊಲೀಸ್ ವ್ಯವಸ್ಥೆ ಮತ್ತು ಕೋಮು ವಿರೋಧಿ ಉಪಕ್ರಮಗಳು ಸೇರಿದಂತೆ ಕಠಿಣ ಅಪರಾಧ ವಿರೋಧಿ ಕ್ರಮಗಳ ಜಾರಿ
- ವಕ್ಫ್ ತಿದ್ದುಪಡಿ ಕಾಯ್ದೆಯು ರಾಜ್ಯದ ಹಕ್ಕುಗಳನ್ನು ಅತಿಕ್ರಮಿಸಿದರೆ ಅದನ್ನು ರದ್ದುಗೊಳಿಸುವುದು
- ಯುವಜನರ ವಲಸೆ ನಿಲ್ಲಿಸಲು ಮತ್ತು ‘ಬಿಹಾರದ ಸ್ವಾಭಿಮಾನ’ವನ್ನು ಪುನಃಸ್ಥಾಪಿಸಲು ಕೈಗಾರಿಕೆಗಳಿಗೆ ಪ್ರೋತ್ಸಾಹ.
ಎರಡು ರಾಜ್ಯಗಳಲ್ಲಿ ಮತದಾರರಾಗಿ ನೋಂದಣಿ: ಪ್ರಶಾಂತ್ ಕಿಶೋರ್‌ಗೆ ಚುನಾವಣಾ ಆಯೋಗದಿಂದ ನೋಟಿಸ್


