ಅಸ್ಸಾಂನ ಶ್ರೀಭೂಮಿ ಜಿಲ್ಲೆಯಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಪಕ್ಷದ ಮುಖಂಡರೊಬ್ಬರು ನೋಬೆಲ್ ಪುರಸ್ಕೃತ ರವೀಂದ್ರನಾಥ ಟ್ಯಾಗೋರ್ ಅವರ ಪ್ರಸಿದ್ಧ ಗೀತೆ ‘ಅಮರ್ ಸೋನಾರ್ ಬಾಂಗ್ಲಾ’ (ನನ್ನ ಚಿನ್ನದ ಬಾಂಗ್ಲಾ) ಗೀತೆಯ ಎರಡು ಸಾಲುಗಳನ್ನು ಹಾಡಿರುವುದು ವಿವಾದಕ್ಕೆ ಕಾರಣವಾಗಿದೆ.
ಕಾಂಗ್ರೆಸ್ ನಾಯಕ ಬಾಂಗ್ಲಾದೇಶದ ರಾಷ್ಟ್ರಗೀತೆಯನ್ನು ಹಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದ್ದು, ಬುಧವಾರ (ಅ.29) ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಅವರು ಕಾನೂನು ಕ್ರಮಕ್ಕೆ ಸೂಚಿಸಿದ್ದಾರೆ.
ಇದಕ್ಕೆ ತಿರುಗೇಟು ಕೊಟ್ಟಿರುವ ಕಾಂಗ್ರೆಸ್, ಸಿಎಂ ನಿರ್ದೇಶನ ಆಡಳಿತಾರೂಢ ಬಿಜೆಪಿಯ ಅಜ್ಞಾನವನ್ನು ಬಿಂಬಿಸುತ್ತದೆ. ಬಿಜೆಪಿ ಬಂಗಾಳಿ ಸಂಸ್ಕೃತಿಯನ್ನು ಅವಮಾನಿಸಿದೆ ಎಂದು ಹೇಳಿದೆ.
ಶ್ರೀಭೂಮಿ ಜಿಲ್ಲಾ ಕಾಂಗ್ರೆಸ್ ಸೇವಾ ದಳದ ಸಭೆಯಲ್ಲಿ ಪಕ್ಷದ ಹಿರಿಯ ಸದಸ್ಯ ವಿಧುಭೂಷಣ್ ದಾಸ್ ಅವರು ‘ಅಮರ್ ಸೋನಾರ್ ಬಾಂಗ್ಲಾ’ದ ಎರಡು ಸಾಲುಗಳನ್ನು ಹಾಡಿದ್ದಾರೆ ಎನ್ನಲಾಗಿದೆ. ಈ ವಾರದ ಆರಂಭದಲ್ಲಿ ನಡೆದಿರುವ ಸಭೆಯ ವಿಡಿಯೋ ಈಗ ವೈರಲ್ ಆಗಿದ್ದು, ಬಿಜೆಪಿ ಅದನ್ನು ವಿವಾದಕ್ಕೆ ತಿರುಗಿಸಿದ ಬಳಿಕ ಸಿಎಂ ಕ್ರಮಕ್ಕೆ ಸೂಚಿಸಿದ್ದಾರೆ ಎಂದು ವರದಿಗಳು ಹೇಳಿವೆ.
ಕಾಂಗ್ರೆಸ್‌ನಿಂದ ಭಾರತ, ಭಾರತೀಯರಿಗೆ ಅವಮಾನ : ಸಿಎಂ ಶರ್ಮಾ
“ಎರಡು ದಿನಗಳ ಹಿಂದೆ ಶ್ರೀಭೂಮಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಸಭೆಯಲ್ಲಿ ಭಾರತದ ರಾಷ್ಟ್ರಗೀತೆಯ ಬದಲಿಗೆ ಬಾಂಗ್ಲಾದೇಶದ ರಾಷ್ಟ್ರಗೀತೆಯನ್ನು ಹಾಡಲಾಗಿದೆ. ಇದು ಭಾರತದ ಜನರಿಗೆ, ರಾಷ್ಟ್ರಗೀತೆಗೆ ಮಾಡಿದ ಅವಮಾನ. ಅಂತಿಮವಾಗಿ ಈಶಾನ್ಯ ಭಾರತವು ಬಾಂಗ್ಲಾದೇಶದ ಭಾಗವಾಗುತ್ತದೆ ಎಂಬ ಅಲ್ಲಿನ ನಾಯಕರ ಇತ್ತೀಚಿನ ಹೇಳಿಕೆಗೆ ಅನುಗುಣವಾಗಿ ಕಾಂಗ್ರೆಸ್‌ನವರು ನಡೆದುಕೊಂಡಿದ್ದಾರೆ” ಎಂದು ಬುಧವಾರ ನಡೆದ ಸಂಪುಟ ಸಭೆಯ ನಂತರ ಸಿಎಂ ಶರ್ಮಾ ಹೇಳಿದ್ದಾರೆ.
ಸಿಎಂ ಹೇಳಿಕೆಗೆ ತಿರುಗೇಟು ಕೊಟ್ಟಿರುವ ಅಸ್ಸಾಂ ಕಾಂಗ್ರೆಸ್ ಮುಖ್ಯಸ್ಥ ಗೌರವ್ ಗೊಗೊಯ್, “ಬಿಜೆಪಿಯ ಆರೋಪಗಳು ರವೀಂದ್ರನಾಥ ಟ್ಯಾಗೋರ್ ಹಾಗೂ ಬಂಗಾಳಿ ಭಾವನೆಗಳು ಮತ್ತು ಸಂಸ್ಕೃತಿಯ’ ಕುರಿತು ಅವರ ಅಜ್ಞಾನವನ್ನು ಸೂಚಿಸುತ್ತದೆ” ಎಂದಿದ್ದಾರೆ.
“ಇದು ರವೀಂದ್ರನಾಥ ಟ್ಯಾಗೋರ್ ರಚಿಸಿದ ಹಾಡು. ಇದು ಬಂಗಾಳಿ ಸಂಸ್ಕೃತಿಯ ಭಾವನೆಗಳನ್ನು ತಿಳಿಸುವ ಹಾಡು. ಬಿಜೆಪಿ ಸದಾ ಬಂಗಾಳಿ ಭಾಷೆ, ಬಂಗಾಳಿ ಸಂಸ್ಕೃತಿ ಮತ್ತು ಬಂಗಾಳದ ಜನರನ್ನು ಅವಮಾನಿಸುತ್ತಾ ಬಂದಿದೆ. ಅವರು ತಮ್ಮ ಅಜ್ಞಾನವನ್ನು ತೋರಿಸಿದ್ದಾರೆ. ರವೀಂದ್ರನಾಥ ಟ್ಯಾಗೋರ್ ಅವರ ಇತಿಹಾಸ ಮತ್ತು ಅವರ ತತ್ವಶಾಸ್ತ್ರದ ಬಗ್ಗೆ ಬಿಜೆಪಿಗರಿಗೆ ತಿಳಿದಿಲ್ಲ. ಬಂಗಾಳದ ಜನರು ಮತ್ತು ಭಾರತದ ವಿವಿಧ ಭಾಗಗಳಲ್ಲಿರುವ ಬಂಗಾಳಿ ಮಾತನಾಡುವ ಜನರನ್ನು ಬಿಜೆಪಿ ಮತಕ್ಕಾಗಿ ಮಾತ್ರ ಬಳಸುತ್ತದೆ. ಅವರ ಸಂಸ್ಕೃತಿ, ಭಾಷೆ ಮತ್ತು ಭಾವನೆಗಳನ್ನು ಅರ್ಥಮಾಡಿಕೊಳ್ಳುವುದಿಲ್ಲ” ಎಂದು ಹೇಳಿದ್ದಾರೆ.
ಅಸ್ಸಾಂನ ಶ್ರೀಭೂಮಿ ಜಿಲ್ಲೆಯು ಹೆಚ್ಚಾಗಿ ಬಂಗಾಳಿ ಭಾಷೆ ಮಾತನಾಡುವ ಜನರಿರುವ ಬರಾಕ್ ಕಣಿವೆಯಲ್ಲಿದೆ. ಇದು ಬಾಂಗ್ಲಾದೇಶದ ಗಡಿ ಪ್ರದೇಶವಾಗಿದೆ. 1947ರ ದೇಶ ವಿಭಜನೆ ಈ ಪ್ರದೇಶದ ಮೇಲೆ ಗಮನಾರ್ಹ ಪರಿಣಾಮ ಬೀರಿದೆ.
‘ಅಮರ್ ಸೋನಾರ್ ಬಾಂಗ್ಲಾ’ ಗೀತೆ
‘ಅಮರ್ ಸೋನಾರ್ ಬಾಂಗ್ಲಾ’ 1905ರಲ್ಲಿ ಬ್ರಿಟಿಷ್ ವೈಸ್‌ರಾಯ್ ಲಾರ್ಡ್ ಕರ್ಜನ್ ಬಂಗಾಳವನ್ನು ವಿಭಜನೆ ಮಾಡಿದ್ದನ್ನು ವಿರೋಧಿಸಿ ನಡೆದ ಸ್ವದೇಶಿ ಚಳವಳಿಯ ಸಮಯದಲ್ಲಿ ರವೀಂದ್ರನಾಥ ಟ್ಯಾಗೋರ್ ಅವರು ಬರೆದ ಮಹತ್ವದ ಗೀತೆಯಾಗಿದೆ.
ಲಾರ್ಡ್ ಕರ್ಜನ್ ಬಂಗಾಳವನ್ನು ಹಿಂದೂ ಬಹುಸಂಖ್ಯಾತ ಪಶ್ಚಿಮ ಮತ್ತು ಮುಸ್ಲಿಂ ಬಹುಸಂಖ್ಯಾತ ಪೂರ್ವ ಎಂದು ವಿಭಜಿಸಿದ್ದರು. ಇದನ್ನು ‘ಒಡೆದು ಆಳುವ’ ತಂತ್ರ ಎಂದು ವಿರೋಧಿಸಿ ಸ್ವದೇಶಿ ಚಳವಳಿ ಕಟ್ಟಲಾಗಿತ್ತು.
ಬಂಗಾಳದ ಏಕತೆ, ಹೆಮ್ಮೆ ಮತ್ತು ಪ್ರತಿರೋಧವನ್ನು ಪ್ರೇರೇಪಿಸಲು ಬರೆದ ಗೀತೆಯನ್ನು ಸೆಪ್ಟೆಂಬರ್ 1905 ರಲ್ಲಿ ಬಂಗಾಳಿ ಸಾಹಿತ್ಯ ಪತ್ರಿಕೆ ‘ಭಾರತಿ’ ಮೊದಲ ಬಾರಿಗೆ ಪ್ರಕಟಿಸಿತ್ತು. ಕಲ್ಕತ್ತಾದಲ್ಲಿ (ಕೋಲ್ಕತ್ತಾ) ನಡೆದ ಪ್ರತಿಭಟನಾ ಸಭೆಗಳಲ್ಲಿ ಈ ಗೀತೆಯನ್ನು ಹಾಡಲಾಗಿತ್ತು.
“ನಾನು ವಿಭಜನೆಯನ್ನು ಪ್ರತಿಭಟಿಸಲು ‘ಅಮರ್ ಸೋನಾರ್ ಬಾಂಗ್ಲಾ’ ಬರೆದೆ… ನಾನು ಬಂಗಾಳವನ್ನು ನನ್ನ ತಾಯಿಯಾಗಿ, ಚಿನ್ನವಾಗಿ ಮತ್ತು ಸುಂದರವಾಗಿ ನೋಡಿದೆ” ಎಂದು ಸ್ವತಃ ಟ್ಯಾಗೋರ್ ಅವರು ಈ ಗೀತೆ ಕುರಿತು ಹೇಳಿದ್ದರು.
ಬಂಗಾಳಿ ಸಾಂಸ್ಕೃತಿಕ ಗುರುತು ಮತ್ತು ವಸಾಹತುಶಾಹಿ ವಿರೋಧಿ ಪ್ರತಿರೋಧದ ಸಂಕೇತವಾದ ಈ ಗೀತೆಯನ್ನು ಭಾರತದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಬಂಗಾಳದಾದ್ಯಂತ ಶಾಲೆಗಳು, ಪ್ರತಿಭಟನಾ ಸಭೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹಾಡಲಾಗಿತ್ತು.
ಬಾಂಗ್ಲಾದೇಶ ರಾಷ್ಟ್ರಗೀತೆ-1971
ಮಾರ್ಚ್–ಡಿಸೆಂಬರ್ 1971ರಲ್ಲಿ ಪೂರ್ವ ಪಾಕಿಸ್ತಾನ ಪಶ್ಚಿಮ ಪಾಕಿಸ್ತಾನದಿಂದ ಬಾಂಗ್ಲಾದೇಶವನ್ನು ಸ್ವತಂತ್ರಗೊಳಿಸಲು ‘ಬಾಂಗ್ಲಾದೇಶ ವಿಮೋಚನಾ’ ಹೋರಾಟ ನಡೆಯಿತು.
ಬಾಂಗ್ಲಾದೇಶ ಸ್ವತಂತ್ರ ರಾಷ್ಟ್ರವಾಗಿ ಪಾಕಿಸ್ತಾನದಿಂದ ವಿಮೋಚನೆಗೊಂಡ ಬಳಿಕ, ಅಂದರೆ 13 ಜನವರಿ 1972ರಲ್ಲಿ ಬಾಂಗ್ಲಾದೇಶದ ಮೊದಲ ಗಣರಾಜ್ಯೋತ್ಸವ ಸಮಾರಂಭದಲ್ಲಿ ‘ಅಮರ್ ಸೋನಾರ್ ಬಾಂಗ್ಲಾ’ ಗೀತೆಯನ್ನು ಮೊದಲ ಬಾರಿಗೆ ಕೇಳಿಸಲಾಗಿತ್ತು. ಬಳಿಕ 1972ರಲ್ಲಿ ಗೀತೆಯ ಮೊದಲ ಹತ್ತು ಸಾಲುಗಳು ಅಧಿಕೃತವಾಗಿ ಬಾಂಗ್ಲಾದೇಶದ ರಾಷ್ಟ್ರಗೀತೆಯ ಭಾಗವಾದವು.
‘ಥರ್ಡ್ ಕ್ಲಾಸ್ ವಂಚಕನಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ’: ಅಸ್ಸಾಂ ಸಿಎಂಗೆ ಪ್ರಿಯಾಂಕ್ ಖರ್ಗೆ ತಿರುಗೇಟು


