ಗುರುವಾರ (ಅ.30) ನಡೆದ ಜನ ಸುರಾಜ್ ಕಾರ್ಯಕರ್ತ ದುಲಾರ್‌ಚಂದ್ ಯಾದವ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಟ್ನಾ ಪೊಲೀಸರು ಭಾನುವಾರ (ನ.2) ಮುಂಜಾನೆ ವಿವಾದಾತ್ಮಕ ಮಾಜಿ ಶಾಸಕ, ಮೊಕಾಮಾದ ಜೆಡಿಯು ಅಭ್ಯರ್ಥಿ ಅನಂತ್ ಸಿಂಗ್ ಅವರನ್ನು ಬಂಧಿಸಿದ್ದಾರೆ.
ಪಾಟ್ನಾ ಎಸ್‌ಎಸ್‌ಪಿ ನೇತೃತ್ವದಲ್ಲಿ ಬರ್ಹ್‌ನಲ್ಲಿರುವ ಸಿಂಗ್ ಅವರ ಮನೆಗೆ ತೆರಳಿದ ಪೊಲೀಸರು, ಅವರನ್ನು ಬಂಧಿಸಿದ್ದಾರೆ. ಯಾದವ್ ಹತ್ಯೆಯ ನಂತರ ಸಿಂಗ್ ಮೇಲೆ ಪೊಲೀಸರು ಕಣ್ಣಿಟ್ಟಿದ್ದರು. ಬಂಧನದ ಬಳಿಕ ವಿಚಾರಣೆಗಾಗಿ ಅವರನ್ನು ಪಾಟ್ನಾಕ್ಕೆ ಕರೆತರಲಾಗಿದೆ.
ಮಣಿಕಾಂತ್ ಠಾಕೂರ್ ಮತ್ತು ರಂಜೀತ್ ರಾಮ್ ಎಂಬ ಇನ್ನಿಬ್ಬರು ವ್ಯಕ್ತಿಗಳನ್ನೂ ಪೊಲೀಸರು ಬಂಧಿಸಿದ್ದಾರೆ. ಮೂವರನ್ನೂ ಶೀಘ್ರದಲ್ಲೇ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗುವುದು ಎಂದು ತಿಳಿಸಿದ್ದಾರೆ.
ಪಾಟ್ನಾ ಬಳಿಯ ಮೊಕಾಮಾದಲ್ಲಿ ಚುನಾವಣಾ ಪ್ರಚಾರದ ವೇಳೆ ಶ್ವಾಸಕೋಶಕ್ಕೆ ಗಂಭೀರ ಹಾನಿ ಮತ್ತು ಪಕ್ಕೆಲುಬು ಮುರಿತಕ್ಕೊಳಗಾಗಿ ಯಾದವ್ ನಿಧನರಾಗಿದ್ದರು. ಗುರುವಾರ ಜನ ಸುರಾಜ್ ಪಕ್ಷದ ಅಭ್ಯರ್ಥಿ ಪಿಯೂಷ್ ಪ್ರಿಯದರ್ಶಿ ಪರ ಪ್ರಚಾರ ನಡೆಸುತ್ತಿದ್ದಾಗ ಈ ಘಟನೆ ನಡೆದಿತ್ತು.
ಪಾಟ್ನಾ ಜಿಲ್ಲಾ ಮ್ಯಾಜಿಸ್ಟ್ರೇಟ್ ತ್ಯಾಗರಾಜನ್ ಎಸ್.ಎಂ ಅವರೊಂದಿಗೆ ತಡರಾತ್ರಿ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪಾಟ್ನಾ ಎಸ್‌ಎಸ್‌ಪಿ ಕಾರ್ತಿಕೇಯ ಶರ್ಮಾ, “ದುಲಾರ್ ಚಂದ್ ಯಾದವ್ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಅನಂತ್ ಸಿಂಗ್, ಮಣಿಕಾಂತ್ ಠಾಕೂರ್ ಮತ್ತು ರಂಜೀತ್ ರಾಮ್ ಎಂಬ ಮೂವರು ವ್ಯಕ್ತಿಗಳನ್ನು ಬಂಧಿಸಿದ್ದಾರೆ” ಎಂದು ಹೇಳಿದ್ದಾರೆ.
“ಮರಣೋತ್ತರ ವರದಿ ಮತ್ತು ಪ್ರಾಥಮಿಕ ತನಿಖೆಯು ಯಾದವ್ ಅವರದ್ದು ಕೊಲೆ ಎಂಬುವುದನ್ನು ದೃಢಪಡಿಸಿದೆ” ಎಂದು ತಿಳಿಸಿದ್ದಾರೆ.
“ಮೊಕಾಮಾದಲ್ಲಿ ಜನ ಸುರಾಜ್ ಪಕ್ಷದ ಅಭ್ಯರ್ಥಿ ಪಿಯೂಷ್ ಪ್ರಿಯದರ್ಶಿ ಮತ್ತು ಜೆಡಿಯು ಅಭ್ಯರ್ಥಿ ಅನಂತ್ ಸಿಂಗ್ ಅವರ ಬೆಂಬಲಿಗರ ನಡುವೆ ಘರ್ಷಣೆ ನಡೆದಿತ್ತು. ನಂತರ ಯಾದವ್ ಅವರ ಮೃತದೇಹ ಪತ್ತೆಯಾಗಿದೆ. ಘಟನೆ ಸಂಬಂಧ ಎರಡೂ ಕಡೆಯಿಂದ ಎಫ್‌ಐಆರ್‌ಗಳು ದಾಖಲಾಗಿದ್ದು, ತನಿಖೆಯ ಸಮಯದಲ್ಲಿ, ಘಟನೆ ನಡೆದಾಗ ಸಿಂಗ್ ಮತ್ತು ಅವರ ಸಹಚರರು ಸ್ಥಳದಲ್ಲಿದ್ದರು ಎಂಬುವುದು ಗೊತ್ತಾಗಿದೆ” ಎಂದು ಎಸ್‌ಎಸ್‌ಪಿ ಕಾರ್ತಿಕೇಯ ಶರ್ಮಾ ವಿವರಿಸಿದ್ದಾರೆ.
ಬಿಹಾರ ರಾಜಕೀಯದಲ್ಲಿ ಪ್ರಬಲ ವ್ಯಕ್ತಿ ಎಂದೇ ಗುರುತಿಸಿಕೊಂಡಿರುವ ಸಿಂಗ್‍ನನ್ನು ಇದೀಗ ಪೊಲೀಸರು ವಿಚಾರಣೆಗಾಗಿ ಕಸ್ಟಡಿಯಲ್ಲಿ ಇರಿಸಿಕೊಂಡಿದ್ದಾರೆ. ಭಾನುವಾರ ಮಧ್ಯಾಹ್ನ ನಡೆಯುವ ಪತ್ರಿಕಾಗೋಷ್ಠಿಯಲ್ಲಿ ಹೆಚ್ಚಿನ ವಿವರಗಳನ್ನು ನೀಡಲಾಗುವುದು ಎಂದು ಅವರು ಹೇಳಿದ್ದಾರೆ.
ಹಲವು ಬಾರಿ ಶಾಸಕರಾಗಿರುವ ಸಿಂಗ್ ಅವರ ಪತ್ನಿ ನೀಲಂ ದೇವಿ ಪ್ರಸ್ತುತ ಮೊಕಾಮಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಅವರ ವಿರುದ್ಧವೂ ಮಾದರಿ ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣ ದಾಖಲಿಸಲಾಗಿದೆ. ದೊಡ್ಡ ತಂಡಗಳಲ್ಲಿ ಅವರು ಓಡಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.
ಮತಗಳ್ಳತನದ ವಿರುದ್ಧ ‘ಮಹಾ’ರ‍್ಯಾಲಿ : 4,500 ಮಂದಿ ಎರಡು ಬಾರಿ ಮತ ಚಲಾಯಿಸಿದ್ದಾರೆ ಎಂದ ರಾಜ್ ಠಾಕ್ರೆ


