ತಮಿಳುನಾಡಿನ ಆಡಳಿತರೂಢ ಡಿಎಂಕೆ ಸೇರಿದಂತೆ ವಿವಿಧ ಪಕ್ಷಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ನಡುವೆಯೇ ಮಂಗಳವಾರದಿಂದ (ನ.4, 2025) ಎರಡನೇ ಹಂತದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಪ್ರಾರಂಭಿಸಲು ಭಾರತೀಯ ಚುನಾವಣಾ ಆಯೋಗ (ಇಸಿಐ) ಮುಂದಾಗಿದೆ.
ವರದಿಗಳ ಪ್ರಕಾರ, 9 ರಾಜ್ಯಗಳಾದ ಛತ್ತೀಸ್‌ಗಢ, ಗೋವಾ, ಗುಜರಾತ್, ಕೇರಳ, ಮಧ್ಯಪ್ರದೇಶ, ರಾಜಸ್ಥಾನ, ತಮಿಳುನಾಡು, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ಹಾಗೂ 3 ಕೇಂದ್ರಾಡಳಿತ ಪ್ರದೇಶಗಳಾದ ಅಂಡಮಾನ್-ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ ಮತ್ತು ಪುದುಚ್ಚೇರಿಗಳಲ್ಲಿ ಇಂದಿನಿಂದ ಮನೆ ಮನೆ ಗಣತಿ ಪ್ರಾರಂಭಗೊಳ್ಳಲಿದೆ.
ಸುಮಾರು 51 ಕೋಟಿ ಮತದಾರರು ಈ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಒಳಗೊಳ್ಳಲಿದ್ದಾರೆ. ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮತದಾರರ ಕರಡು ಪಟ್ಟಿಯನ್ನು ಡಿಸೆಂಬರ್ 9, 2025ರಂದು ಮತ್ತು ಅಂತಿಮ ಪಟ್ಟಿಯನ್ನು ಫೆಬ್ರವರಿ 7, 2026 ರಂದು ಪ್ರಕಟಿಸಲು ಚುನಾವಣಾ ಆಯೋಗ ನಿರ್ಧರಿಸಿದೆ.
ತಮಿಳುನಾಡು, ಕೇರಳ ಮತ್ತು ಪಶ್ಚಿಮ ಬಂಗಾಳದ ಆಡಳಿತ ಪಕ್ಷಗಳು ಮತ್ತು ಅದರ ಮಿತ್ರ ಪಕ್ಷಗಳು ಎಸ್‌ಐಆರ್ ಅನ್ನು ತೀವ್ರವಾಗಿ ವಿರೋಧಿಸಿವೆ. ತಮಿಳುನಾಡಿನ ಆಡಳಿತರೂಢ ಡಿಎಂಕೆ ಸಿಎಂ ಎಂ.ಕೆ ಸ್ಟಾಲಿನ್ ನೇತೃತ್ವದಲ್ಲಿ ನವೆಂಬರ್ 2,2025ರಂದು ಎಸ್‌ಐಆರ್ ವಿರುದ್ದ ಸರ್ವಪಕ್ಷ ಸಭೆ ನಡೆಸಿದೆ. ಈ ಸಭೆಯಲ್ಲಿ 49 ಪಕ್ಷಗಳು ಭಾಗವಹಿಸಿತ್ತು.
ಡಿಎಂಕೆ ಈಗಾಗಲೇ ಎಸ್‌ಐಆರ್ ವಿರುದ್ದ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಕೇರಳ ಮತ್ತು ಪಶ್ಚಿಮ ಬಂಗಾಳದ ಆಡಳಿತ ಪಕ್ಷಗಳು ಕೋರ್ಟ್ ಮೊರೆ ಹೋಗಲು ನಿರ್ಧರಿಸಿವೆ.
ಗಮನಾರ್ಹವಾಗಿ, ತಮಿಳುನಾಡು, ಪುದುಚೇರಿ, ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ 2026ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.
ಮುಂದಿನ ವರ್ಷ ಅಸ್ಸಾಂನಲ್ಲೂ ವಿಧಾನಸಭೆ ಚುನಾವಣೆ ನಡೆಯಲಿದೆ. ಅಲ್ಲಿ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಪೌರತ್ವ ಪರಿಶೀಲನಾ ಕಾರ್ಯವು ಈಗಾಗಲೇ ನಡೆಯುತ್ತಿರುವುದರಿಂದ, ಪ್ರತ್ಯೇಕವಾಗಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲಾಗುವುದು ಎಂದು ಚುನಾವಣಾ ಆಯೋಗ ಹೇಳಿದೆ. ಅಸ್ಸಾಂ ರಾಜ್ಯವು ಪೌರತ್ವ ಕಾಯ್ದೆಯ ಒಂದು ವಿಶಿಷ್ಟ ನಿಬಂಧನೆಯ ಅಡಿಯಲ್ಲಿ ಬರುತ್ತದೆ.
“ಪೌರತ್ವ ಕಾಯ್ದೆಯಡಿಯಲ್ಲಿ, ಅಸ್ಸಾಂನಲ್ಲಿ ಪೌರತ್ವಕ್ಕಾಗಿ ಪ್ರತ್ಯೇಕ ನಿಬಂಧನೆಗಳಿವೆ. ಸುಪ್ರೀಂ ಕೋರ್ಟ್‌ನ ಮೇಲ್ವಿಚಾರಣೆಯಲ್ಲಿ ಪೌರತ್ವವನ್ನು ಪರಿಶೀಲಿಸುವ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಜೂನ್ 24ರ ಎಸ್‌ಐಆರ್ ಆದೇಶವು ಇಡೀ ದೇಶಕ್ಕೆ ಅನ್ವಯಿಸುತ್ತದೆ. ಆದರೂ, ಅದು ಅಸ್ಸಾಂಗೆ ಅನ್ವಯಿಸುವುದಿಲ್ಲ” ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅಕ್ಟೋಬರ್ 27ರಂದು ಎಸ್‌ಐಆರ್‌ನ ಎರಡನೇ ಹಂತವನ್ನು ಘೋಷಿಸುವಾಗ ಹೇಳಿದ್ದಾರೆ.
ಈಗ ನಡೆಯುತ್ತಿರುವುದು ಸ್ವಾತಂತ್ರ್ಯ ನಂತರದ 9ನೇ ಎಸ್‌ಐಆರ್ ಪ್ರಕ್ರಿಯೆಯಾಗಿದೆ. ಕೊನೆಯದಾಗಿ 2002-04 ರಲ್ಲಿ ಎಸ್‌ಐಆರ್ ನಡೆಸಲಾಗಿತ್ತು. ಈಗ ಎಸ್‌ಐಆರ್ ಘೋಷಣೆಯಾಗಿರುವ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 2002-04ರ ಮತದಾರರ ಪಟ್ಟಿಯನ್ನು ಮಾನದಂಡವಾಗಿ (ಕಟ್ ಆಫ್ ಆಗಿ) ಪರಿಗಣಿಸುವ ಸಾಧ್ಯತೆ ಇದೆ. ಏಕೆಂದರೆ, ಈ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಆ ವರ್ಷದಲ್ಲಿ ಕೊನೆಯ ಎಸ್‌ಐಆರ್ ನಡೆದಿತ್ತು. ಬಿಹಾರದ ಎಸ್‌ಐಆರ್ ವೇಳೆ 2003ರ ಪಟ್ಟಿಯನ್ನು ಪರಿಗಣಿಸಲಾಗಿತ್ತು.
ಬಿಹಾರದಲ್ಲಿ ಎಸ್‌ಐಆರ್ ವೇಳೆ ಮತದಾರರು ದಾಖಲೆಗಳನ್ನು ಸಲ್ಲಿಸಿ ತಮ್ಮ ಗುರುತನ್ನು ಸಾಬೀತುಪಡಿಸಬೇಕಿತ್ತು. ಆದರೆ, ಎರಡನೇ ಹಂತದ ಎಸ್‌ಐಆರ್‌ನಲ್ಲಿ ಗಣತಿ ಸಮಯದಲ್ಲಿ ದಾಖಲೆ ಸಲ್ಲಿಸುವ ಅಗತ್ಯ ಇಲ್ಲ. ಮತದಾರರ ನೋಂದಣಿ ಅಧಿಕಾರಿ (ಇಆರ್‌ಒ) ನೋಟಿಸ್ ಕಳುಹಿಸಿದರೆ ಮಾತ್ರ ದಾಖಲೆಗಳನ್ನು ಸಲ್ಲಿಸಬೇಕು ಎಂದು ವರದಿಗಳು ಹೇಳಿವೆ.
ಬಿಹಾರದ ಎಸ್‌ಐಆರ್‌ನಲ್ಲಿ ಮರಣ ಹೊಂದಿದವರು, ಶಾಶ್ವತವಾಗಿ ಸ್ಥಳಾಂತರಗೊಂಡವರು ಮತ್ತು ಎರಡೆರಡು ಬಾರಿ ನೋಂದಣಿಯಾದವರು ಎಂಬ ಕಾರಣಗಳನ್ನು ನೀಡಿ ಸುಮಾರು 68 ಲಕ್ಷ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಇದನ್ನು ವಿರೋಧ ಪಕ್ಷಗಳು ತೀವ್ರವಾಗಿ ಖಂಡಿಸಿವೆ. ಚುನಾವಣಾ ಆಯೋಗ ಮತದಾರರ ಪಟ್ಟಿ ಪರಿಷ್ಕರಣೆ ಹೆಸರಿನಲ್ಲಿ ಪರೋಕ್ಷವಾಗಿ ಎನ್‌ಆರ್‌ಸಿ ಮಾಡುತ್ತಿದೆ ಎಂದು ಆರೋಪಿಸಿವೆ.
ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ ಜಾಮೀನು ಅರ್ಜಿ : ನ.6ಕ್ಕೆ ವಿಚಾರಣೆ ಮುಂದೂಡಿಕೆ


