ತಿರುವನಂತಪುರದ ಕೇರಳ ವಿಶ್ವವಿದ್ಯಾಲಯದಲ್ಲಿ ದಲಿತ ಸಂಶೋಧನಾ ವಿದ್ಯಾರ್ಥಿಗೆ ಜಾತಿ ತಾರತಮ್ಯ ಮಾಡಲಾಗಿದೆ ಎಂಬ ಆರೋಪದ ಕುರಿತ ತನಿಖೆಗೆ ಉನ್ನತ ಶಿಕ್ಷಣ ಸಚಿವೆ ಆರ್.ಬಿಂದು ಶನಿವಾರ (ನ.8) ಆದೇಶಿಸಿದ್ದಾರೆ.
ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದಾರೆ.
ಸಂಸ್ಕೃತ ವಿಭಾಗದ ಡೀನ್ ಡಾ. ಸಿ.ಎನ್ ವಿಜಯಕುಮಾರಿ ವಿರುದ್ಧ ಪಿಎಚ್‌ಡಿ ಸಂಶೋಧನಾ ವಿದ್ಯಾರ್ಥಿ ದಲಿತ ಸಮುದಾಯದ ವಿಪಿನ್ ವಿಜಯನ್ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಡೀನ್ ವಿಜಯಕುಮಾರಿ ಜಾತಿವಾದಿ ಹೇಳಿಕೆ ನೀಡಿದ್ದಾರೆ. ಅಂತಿಮ ಹಂತದಲ್ಲಿ ಜಾತಿಯ ಕಾರಣಕ್ಕೆ ತನ್ನ ಪಿಎಚ್‌ಡಿಗೆ ಅಡ್ಡಿಪಡಿಸಿದ್ದಾರೆ ಎಂದು ಹೇಳಿದ್ದಾರೆ.
“ನೀವು ಕೆಳ ಜಾತಿಯವರು ಸಂಸ್ಕೃತ ಅಧ್ಯಯನ ಮಾಡಬಾರದು. ಕೆಳಜಾತಿಯ ವಿದ್ಯಾರ್ಥಿಗಳ ಪ್ರವೇಶದಿಂದಾಗಿ ವಿಭಾಗದ ಪಾವಿತ್ರ್ಯತೆ ಹಾಳಾಗಿದೆ” ಎಂದು ಡೀನ್ ವಿಜಯಕುಮಾರಿ ಹೇಳಿದ್ದಾಗಿ ವಿಪಿನ್ ಆರೋಪಿಸಿದ್ದಾರೆ. ಈ ಬಗ್ಗೆ ವಿಶ್ವವಿದ್ಯಾಲಯದ ಉಪಕುಲಪತಿ ಮತ್ತು ಕಝಕೂಟಂ ಸಹಾಯಕ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ವಿಪಿನ್ ಶ್ರೀ ಶಂಕರಾಚಾರ್ಯ ಸಂಸ್ಕೃತ ವಿಶ್ವವಿದ್ಯಾಲಯದಿಂದ ಸಂಸ್ಕೃತದಲ್ಲಿ ಬಿಎ ಮತ್ತು ಎಂಎ ಪದವಿಗಳನ್ನು ಪೂರ್ಣಗೊಳಿಸಿ, ನಂತರ ಕೇರಳ ವಿಶ್ವವಿದ್ಯಾಲಯದಿಂದ ಬಿಎಡ್ ಮತ್ತು ಎಂಎಡ್ ಪದವಿಗಳನ್ನು ಪಡೆದಿದ್ದಾರೆ.
ತನ್ನ ವಿರುದ್ದದ ಆರೋಪಗಳ ಬಗ್ಗೆ ವಿಜಯಕುಮಾರಿ ಪ್ರತಿಕ್ರಿಯೆ ನೀಡಿದ್ದು, ವಿಪಿನ್ ಅವರ ಪಿಎಚ್‌ಡಿ ಶೈಕ್ಷಣಿಕ ಮಾನದಂಡಗಳನ್ನು ಪೂರೈಸಿಲ್ಲ. ಅವರು ಸಂಸ್ಕೃತ, ಇಂಗ್ಲಿಷ್ ಅಥವಾ ಮಲಯಾಳಂ ಭಾಷೆಗಳಲ್ಲಿನ ಪ್ರಶ್ನೆಗಳಿಗೆ ಉತ್ತರಿಸಲು ವಿಫಲರಾಗಿದ್ದಾರೆ ಎಂದು ಮಾಧ್ಯಮಗಳಿಗೆ ಹೇಳಿದ್ದಾರೆ. ಉಪಕುಲಪತಿಗಳಿಗೆ ಬರೆದ ಪತ್ರದಲ್ಲಿ, ವಿಪಿನ್ ಅವರ ಪ್ರಬಂಧವು ಸರಿಯಾದ ಸಂಶೋಧನಾ ವಿಧಾನವನ್ನು ಹೊಂದಿಲ್ಲ ಎಂದಿದ್ದಾರೆ.
ಇದಕ್ಕೆ ತಿರುಗೇಟು ಕೊಟ್ಟಿರುವ ವಿಪಿನ್, ವಿಜಯಕುಮಾರಿ ಅವರ ಮಾರ್ಗದರ್ಶನದಲ್ಲಿ ನಾನು ಸಂಸ್ಕೃತದಲ್ಲಿ ಎಂಫಿಲ್ ಪೂರ್ಣಗೊಳಿಸಿದ್ದೇನೆ. ನನಗೆ ಸಂಸ್ಕೃತ ಗೊತ್ತಿಲ್ಲದಿದ್ದರೆ, ಅವರು ಯಾವ ಆಧಾರದ ಮೇಲೆ ನನಗೆ ಮಾರ್ಗದರ್ಶನ ನೀಡಿದ್ದರು ಮತ್ತು ನನ್ನ ಎಂಫಿಲ್ ಪದವಿಯನ್ನು ಅನುಮೋದಿಸಿದ್ದರು ಎಂದು ಪ್ರಶ್ನಿಸಿದ್ದಾರೆ. ಇದು ವೈಯಕ್ತಿಕ ತಾರತಮ್ಯ ಮತ್ತು ನನ್ನ ಶೈಕ್ಷಣಿಕ ವೃತ್ತಿಜೀವನವನ್ನು ಹಾಳುಮಾಡುವ ಪ್ರಯತ್ನವಾಗಿದೆ ಎಂದು ಆರೋಪಿಸಿದ್ದಾರೆ.
ಈ ಘಟನೆಯು ವಿಶ್ವವಿದ್ಯಾಲಯ ಮತ್ತು ಉನ್ನತ ಶಿಕ್ಷಣ ಕ್ಷೇತ್ರ ಎರಡಕ್ಕೂ ಅಪಖ್ಯಾತಿ ತಂದಿದೆ. ತನ್ನನ್ನು ಅನಗತ್ಯ ವಿವಾದಕ್ಕೆ ಎಳೆದಿದೆ ಎಂದು ಸಚಿವೆ ಬಿಂದು ಹೇಳಿದ್ದಾರೆ. ತಪ್ಪಿತಸ್ಥರೆಂದು ಕಂಡುಬಂದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಉಪಕುಲಪತಿ ಮತ್ತು ಕುಲಸಚಿವರಿಗೆ ನಿರ್ದೇಶನ ನೀಡಿದ್ದಾರೆ.
‘ನೀವು ಬ್ರಾಹ್ಮಣರಂತೆ ಸಂಸ್ಕೃತ ಅಧ್ಯಯನ ಮಾಡಲು ಸಾಧ್ಯವಿಲ್ಲ..’ ಎಂದು ದಲಿತ ವಿದ್ಯಾರ್ಥಿಗೆ ಪಿಎಚ್‌ಡಿ ತಡೆಹಿಡಿದ ಡೀನ್


