ಬಿಹಾರದಲ್ಲಿ ನವೆಂಬರ್ 6ರಂದು ನಡೆದ ಮೊದಲ ಹಂತದ ಮತದಾನದ ವೇಳೆ ಎನ್‌ಡಿಎ ಭಾಗವಾಗಿರುವ ಲೋಕಜನಶಕ್ತಿ ಪಕ್ಷ (ಎಲ್‌ಜೆಪಿ) ಸಂಸದೆ ಶಾಂಭವಿ ಚೌಧರಿ ಅವರ ಎರಡೂ ಕೈಗಳಲ್ಲಿ ಮತದಾನದ ಗುರುತಿನ ಶಾಯಿ ಕಂಡುಬಂದಿದೆ. ಈ ಮೂಲಕ ಅವರು ‘ಮತಗಳ್ಳತನ’ ನಡೆಸಿದ್ದಾರೆ ವಿಪಕ್ಷಗಳು ಆರೋಪಿಸಿವೆ.
ಸಾಮಾಜಿಕ ಜಾಲತಾಣಗಳಲ್ಲಿ ಶಾಂಭವಿ ಅವರ ವಿಡಿಯೋವೊಂದು ವೈರಲ್ ಆಗಿದೆ. ಅದರಲ್ಲಿ, ಬಂಕೀಪುರ ವಿಧಾನಸಭಾ ಕ್ಷೇತ್ರದ ಬುದ್ಧ ಕಾಲೊನಿಯ ಮತಗಟ್ಟೆಯಲ್ಲಿ ಮತದಾನ ಮಾಡಿ ಬಳಿಕ, ಶಾಂಭವಿ ತನ್ನ ಬಲಗೈ ಬೆರಳಿಗೆ ಶಾಯಿ ಹಾಕಿದ್ದನ್ನು ಮೊದಲು ತೋರಿಸುವುದು, ಬಳಿಕ ಎಡಗೈ ಬೆರಳಿಗೆ ಶಾಯಿ ಹಾಕಿದ್ದನ್ನು ತೋರಿಸುವುದನ್ನು ನೋಡಬಹುದು.
ಶಾಂಭವಿ ಅವರ ಎರಡೂ ಕೈ ಬೆರಳುಗಳಲ್ಲಿ ಶಾಯಿ ಗುರುತು ಕಂಡು ಬಂದಿರುವುದು ರಾಹುಲ್ ಗಾಂಧಿ ಮಾಡುತ್ತಿರುವ ಮತಗಳ್ಳತನ ಆರೋಪಕ್ಕೆ ಸ್ಪಷ್ಟ ಪುರಾವೆ. ಶಾಂಭವಿ ಎರಡೆರಡು ಬಾರಿ ಮತದಾನ ಮಾಡಿ ಅಕ್ರಮವೆಸಗಿದ್ದಾರೆ ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.
ಶಾಂಭವಿ ಅವರ ವೈರಲ್ ವಿಡಿಯೋವನ್ನು ಹಂಚಿಕೊಂಡಿರುವ ಆರ್‌ಜೆಡಿಯ ರಾಷ್ಟ್ರೀಯ ವಕ್ತಾರೆ ಕಾಂಚನಾ ಯಾದವ್, “ಇದು ಸಂಪೂರ್ಣ ಹೊಸ ಮಟ್ಟದ ವಂಚನೆ. ಇದು ಎಲ್‌ಜೆಪಿ ಸಂಸದೆ ಶಾಂಭವಿ ಚೌಧರಿ. ಅವರ ಎರಡೂ ಕೈಗಳಲ್ಲಿ ಶಾಯಿ ಇದೆ, ಅಂದರೆ ಅವರು ಎರಡು ಬಾರಿ ಮತ ಚಲಾಯಿಸಿದ್ದಾರೆ. ಇದು ಬೆಳಕಿಗೆ ಬಂದಾಗ, ಅವರ ತಂದೆ ಅಶೋಕ್ ಚೌಧರಿ ಅವರು ತಮ್ಮ ಕಣ್ಣುಗಳಿಂದ ಅವರಿಗೆ ಸಿಗ್ನಲ್ ನೀಡುತ್ತಿರುವುದು ಕಂಡುಬಂದಿದೆ. ಚುನಾವಣಾ ಆಯೋಗ, ಇದು ಹೇಗೆ ನಡೆಯುತ್ತಿದೆ? ಇದನ್ನು ಯಾರು ತನಿಖೆ ಮಾಡುತ್ತಾರೆ?” ಎಂದು ಪ್ರಶ್ನಿಸಿದ್ದಾರೆ.
यह तो एक अलग ही स्तर का फ़्रॉड चल रहा है।
ये हैं LJP सांसद शांभवी चौधरी चौधरी। दोनों हाथों पर स्याही लगी हुई है। मतलब इन्होंने 2 बार वोट किया। जब यह बात सामने आ गई तो इनके पिता अशोक चौधरी इन्हें आँखों के इशारे से संकेत कर रहे हैं।
चुनाव आयोग, यह सब कैसे हो रहा है?
इसकी जाँच कौन… pic.twitter.com/SWs0vg4sYw— Kanchana Yadav (@Kanchanyadav000) November 7, 2025
ಕಾಂಗ್ರೆಸ್ ಕೂಡ ತನ್ನ ಎಕ್ಸ್ ಖಾತೆಯಲ್ಲಿ ಶಾಂಭವಿ ಅವರು ಎರಡು ಬೆರಳುಗಳನ್ನು ತೋರಿಸಿದ ಫೋಟೋ ಹಂಚಿಕೊಂಡಿದ್ದು, “ಎರಡು ಕೈಗಳ್ಳಲ್ಲಿ ಮತಗಳ್ಳತನ’ ಎಂದು ಬರೆದುಕೊಂಡಿದೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಪಾಟ್ನಾ ಜಿಲ್ಲಾಡಳಿತ, “ಮತಗಟ್ಟೆಯ ಸಿಬ್ಬಂದಿ ತಪ್ಪಾಗಿ ಶಾಂಭವಿ ಅವರ ಬಲಗೈಗೆ ಶಾಯಿ ಹಚ್ಚಿದ್ದರು. ಆನಂತರ ಅವರ ಎಡಗೈಗೆ ಶಾಯಿ ಹಚ್ಚಿ ತಪ್ಪನ್ನು ಸರಿಪಡಿಸಿದ್ದಾರೆ” ಎಂದು ಹೇಳಿದೆ.


