ಹೊಸದಾಗಿ ಚಾಲನೆ ನೀಡಲಾದ ಎರ್ನಾಕುಲಂ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೊದಲ ಸಂಚಾರದ ವೇಳೆ ಶಾಲಾ ಮಕ್ಕಳು ಆರ್‌ಎಸ್‌ಎಸ್ ಗೀತೆ (ಗಾನ ಗೀತಂ) ಹಾಡಿದ ಬಗ್ಗೆ ತನಿಖೆಗೆ ಕೇರಳದ ಪ್ರಾಥಮಿಕ ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ ಆದೇಶಿಸಿದ್ದಾರೆ.
ಸೂಕ್ತ ತನಿಖೆ ನಡೆಸಿ ವರದಿ ಒಪ್ಪಿಸುವಂತೆ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ಸಚಿವರು ಸೂಚಿಸಿದ್ದಾರೆ.
“ಮಕ್ಕಳು ಆರ್‌ಎಸ್‌ಎಸ್ ಗೀತೆ ಹಾಡಿರುವುದು ಅತ್ಯಂತ ಗಂಭೀರ ವಿಷಯ” ಎಂದಿರುವ ಸಚಿವರು, “ಯಾವುದೇ ಸಂಘಟನೆಯ ಕೋಮು ಅಥವಾ ರಾಜಕೀಯ ಉದ್ದೇಶಗಳಿಗಾಗಿ ಮಕ್ಕಳನ್ನು ಬಳಸಿಕೊಳ್ಳುವುದು ಸಾಂವಿಧಾನಿಕ ತತ್ವಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಇದು ಬಲವಾದ ಖಂಡನೆಗೆ ಅರ್ಹವಾಗಿದೆ. ನಮ್ಮ ಮಕ್ಕಳಿಗೆ ಜಾತ್ಯತೀತ ಶಿಕ್ಷಣವನ್ನು ಖಾತ್ರಿಪಡಿಸಿಕೊಳ್ಳುವಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ” ಎಂದು ಹೇಳಿದ್ದಾರೆ.
Vande Bharat ceremony's political misuse of students is highly condemnable and unconstitutional. Directed DGE to urgently investigate the RSS Gana Geetham incident and submit a report. We will protect secular education.
— V. Sivankutty (@VSivankuttyCPIM) November 9, 2025
ಶನಿವಾರ ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ಮೂಲಕ ಚಾಲನೆ ನೀಡಿದ ರೈಲಿನ ಮೊದಲ ಸಂಚಾರದ ವೇಳೆ ಕೊಚ್ಚಿಯ ಸರಸ್ವತಿ ವಿದ್ಯಾನಿಕೇತನ ಪಬ್ಲಿಕ್ ಶಾಲೆಯ ಇಪ್ಪತ್ತು ವಿದ್ಯಾರ್ಥಿಗಳು ಮತ್ತು ಇಬ್ಬರು ಶಿಕ್ಷಕರು ‘ಪರಮಪವಿತ್ರಮಥಮೀ ಮನ್ನಿಲ್ ಭಾರತಾಂಬಾಯೆ ಪೂಜಿಕ್ಕಾನ್’ಎಂಬ ಆರ್‌ಎಸ್‌ಎಸ್ ಗೀತೆ ಹಾಡಿದ್ದಾರೆ. ಇದರ ವಿಡಿಯೋವನ್ನು ದಕ್ಷಿಣ ರೈಲ್ವೆ ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹಂಚಿಕೊಂಡಿದೆ.
ಸರಸ್ವತಿ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಗೆ ಸಂಯೋಜಿತವಾಗಿದೆ ಮತ್ತು ಆರ್‌ಎಸ್‌ಎಸ್‌ನ ಶಿಕ್ಷಣ ವಿಭಾಗವಾದ ವಿದ್ಯಾ ಭಾರತಿಯ ಕೇರಳ ಘಟಕ ಭಾರತೀಯ ವಿದ್ಯಾನಿಕೇತನ ಅಡಿಯಲ್ಲಿ ಬರುತ್ತದೆ.
ಮಕ್ಕಳು ಹಾಡಿರುವ ಆರ್‌ಎಸ್‌ಎಸ್ ಗೀತೆ ಸರಸ್ವತಿ ಶಾಲೆಯ ಗೀತೆ ಎಂದು ದಕ್ಷಿಣ ರೈಲ್ವೆ ತನ್ನ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಹೇಳಿದೆ.
ವಿವಾದದ ಕುರಿತು ಪ್ರತಿಕ್ರಿಯಿಸಿರುವ ಶಾಲೆಯ ಪ್ರಾಂಶುಪಾಲ ಕೆ.ಪಿ. ಡಿಂಟೊ, “ಹಾಡನ್ನು ಆಯ್ಕೆ ಮಾಡಿರುವುದರಲ್ಲಿ ರೈಲ್ವೆಯ ಪಾತ್ರವಿಲ್ಲ ಎಂಬುವುದಾಗಿ ಹೇಳಿದ್ದಾರೆ” ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
“ಟಿವಿ ಚಾನೆಲ್ ತಂಡದವರು ವಿದ್ಯಾರ್ಥಿಗಳೊಂದಿಗೆ ಹಾಡು ಹಾಡಲು ವಿನಂತಿಸಿದರು. ವಿದ್ಯಾರ್ಥಿಗಳು ವಂದೇ ಮಾತರಂ ಹಾಡಲು ಪ್ರಾರಂಭಿಸಿದಾಗ, ಟಿವಿ ಚಾನೆಲ್‌ನವರು ಮಲಯಾಳಂ ಹಾಡು ಹಾಡುವಂತೆ ಹೇಳಿದರು. ಟಿವಿ ತಂಡದ ಕೋರಿಕೆಯ ಮೇರೆಗೆ ಮಕ್ಕಳು ವಿವಿಧತೆಯಲ್ಲಿ ಏಕತೆಯನ್ನು ಆಚರಿಸುವ ಹಾಡನ್ನು ಹಾಡಿದ್ದಾರೆ” ಎಂದು ಡಿಂಟೊ ಹೇಳಿದ್ದಾಗಿ ಪತ್ರಿಕೆ ಉಲ್ಲೇಖಿಸಿದೆ.
ವಂದೇ ಭಾರತ್ ರೈಲಿನಲ್ಲಿ ಆರ್‌ಎಸ್‌ಎಸ್ ಗೀತೆ ಹಾಡಿದ ಮಕ್ಕಳು, ವಿಡಿಯೋ ಹಂಚಿಕೊಂಡ ರೈಲ್ವೆ : ತೀವ್ರ ವಿರೋಧ


