ಕಾವೇರಿ ನದಿಗೆ ಅಡ್ಡಲಾಗಿ ಕರ್ನಾಟಕ ಸರ್ಕಾರ ನಿರ್ಮಿಸಲು ಮುಂದಾಗಿರುವ ಮೇಕೆದಾಟು ಸಮತೋಲನ ಜಲಾಶಯ ಯೋಜನೆಯ ವಿರುದ್ಧ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ (ನ.13) ವಜಾಗೊಳಿಸಿದ್ದು, ಪ್ರಸ್ತುತ ಅರ್ಜಿಯು ‘ಅಕಾಲಿಕ’ವಾಗಿದೆ (ಮುಂಚಿತವಾಗಿ ಅಥವಾ ತುಂಬಾ ಬೇಗ ಸಲ್ಲಿಸಲಾಗಿದೆ) ಎಂದು ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ, ನ್ಯಾಯಮೂರ್ತಿಗಳಾದ ಕೆ. ವಿನೋದ್ ಚಂದ್ರನ್ ಮತ್ತು ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ಪೀಠವು, ತಮಿಳುನಾಡಿನ ಆಕ್ಷೇಪಣೆಗಳು ಹಾಗೂ ತಜ್ಞ ಸಂಸ್ಥೆಗಳು, ಕಾವೇರಿ ಜಲ ನಿಯಂತ್ರಣ ಸಮಿತಿ (ಸಿಡಬ್ಲ್ಯೂಆರ್‌ಸಿ) ಮತ್ತು ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರದ (ಸಿಡಬ್ಲ್ಯೂಎಂಎ) ಅಭಿಪ್ರಾಯಗಳನ್ನು ಪರಿಗಣಿಸಿದ ನಂತರವೇ ಯೋಜನೆಯನ್ನು ಅನುಮೋದಿಸಲಾಗುವುದು ಎಂದು ಹೇಳಿದೆ.
ಈ ಹಂತದಲ್ಲಿ, ಕೇಂದ್ರ ಜಲ ಆಯೋಗ (ಸಿಡಬ್ಲ್ಯೂಸಿ) ಹೊರಡಿಸಿದ ಆದೇಶದಿಂದ ಮಾಡುತ್ತಿರುವ ಕೆಲಸ ಕೇವಲ ವಿವರವಾದ ಯೋಜನಾ ವರದಿ (ಡಿಪಿಆರ್) ತಯಾರಿಕೆ ಮಾತ್ರ, ಅದೂ ಕೂಡ, ತಮಿಳುನಾಡು ಸರ್ಕಾರ ಸಲ್ಲಿಸಿರುವ ಆಕ್ಷೇಪಣೆಗಳು, ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯೂಎಂಎ), ಕಾವೇರಿ ಜಲ ನಿಯಂತ್ರಣ ಸಮಿತಿ (ಸಿಡಬ್ಲ್ಯೂಆರ್‌ಸಿ)ಯ ತಜ್ಞರ ಅಭಿಪ್ರಾಯಗಳನ್ನು ಪರಿಗಣಿಸಿ ಮಾಡಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ನ್ಯಾಯಾಲಯವು ತನ್ನ ಹಿಂದಿನ ಆದೇಶವನ್ನು (ಆಗಸ್ಟ್ 2023ರಲ್ಲಿ ಹೊರಡಿಸಿದ್ದು) ಸಹ ಉಲ್ಲೇಖಿಸಿದೆ. 2023ರ ಮುಂಗಾರು ಋತುವಿನ ಸಂಬಂಧಿತ ಸಮಸ್ಯೆಯನ್ನು ಪರಿಶೀಲಿಸಲು ನ್ಯಾಯಾಲಯ ನಿರಾಕರಿಸಿತ್ತು. ಪರಿಸ್ಥಿತಿಯನ್ನು ಮೌಲ್ಯಮಾಪನ ಮಾಡಲು ಸಿಡಬ್ಲ್ಯೂಎಂಎಗೆ ಸೂಚಿಸಿತ್ತು. ನ್ಯಾಯಾಲಯಕ್ಕೆ ಈ ವಿಷಯದಲ್ಲಿ ತಜ್ಞತೆ ಇಲ್ಲ ಎಂದು ಹೇಳಿತ್ತು.
25 ಆಗಸ್ಟ್ 2023ರ ಆದೇಶದಲ್ಲಿ ನಾವು ಹೇಳಿದ್ದನ್ನು ಮತ್ತೊಮ್ಮೆ ಪುನರುಚ್ಚರಿಸುತ್ತೇವೆ. ನಮಗೆ ಈ ವಿಷಯದಲ್ಲಿ ತಜ್ಞತೆ ಇಲ್ಲ. ತಜ್ಞರ ಕೆಲಸಕ್ಕೆ ನಾವು ಅಡ್ಡಿ ಬರಬಾರದು ಎಂದು ನ್ಯಾಯಾಲಯ ಮತ್ತೊಮ್ಮೆ ಸ್ಪಷ್ಟಪಡಿಸಿದೆ.
ಸಿಡಬ್ಲ್ಯೂಸಿಯ ನಿರ್ದೇಶನವು ತಜ್ಞ ಸಂಸ್ಥೆಗಳ ಸಲಹೆಗಳನ್ನು ಆಧರಿಸಿದೆ ಎಂದು ದಾಖಲೆಗಳು ತೋರಿಸುತ್ತವೆ. ಅಷ್ಟೇ ಅಲ್ಲ, ಸಿಡಬ್ಲ್ಯೂಎಂಎ ಅದನ್ನು ಅನುಮೋದಿಸಿದರೆ ಮಾತ್ರ ಯೋಜನೆಯನ್ನು ಸಿಡಬ್ಲ್ಯೂಸಿ ಪರಿಗಣಿಸುತ್ತದೆ. ಈ ದೃಷ್ಟಿಯಿಂದ ನೋಡಿದಾಗ, ತಜ್ಞ ಸಂಸ್ಥೆ (ಸಿಡಬ್ಲ್ಯೂಎಂಎ) ಈ ವಿಷಯವನ್ನು ಪರಿಶೀಲಿಸುತ್ತಿರುವಾಗ, ಪ್ರಸ್ತುತ ಅರ್ಜಿಯು ಅಕಾಲಿಕ (ಮುಂಚಿತವಾಗಿ ಸಲ್ಲಿಸಲಾಗಿದೆ) ಎಂದು ನಾವು ಕಂಡುಕೊಂಡಿದ್ದೇವೆ” ಎಂದು ನ್ಯಾಯಾಲಯ ತಿಳಿಸಿದೆ.
ನ್ಯಾಯಾಲಯ ಮತ್ತು ಅಧಿಕಾರಿಗಳ ನಿರ್ದೇಶನಗಳನ್ನು ಅನುಸರಿಸಿ ತಮಿಳುನಾಡಿಗೆ ನೀರು ಬಿಡಲು ಬದ್ದವಾಗಿರುವುದಾಗಿ ಕರ್ನಾಟಕ ಸರ್ಕಾರ ಹೇಳಿದೆ. ಈ ನ್ಯಾಯಾಲಯದ ನಿರ್ದೇಶನಗಳನ್ನು ಪಾಲಿಸಲು ಕರ್ನಾಟಕ ವಿಫಲವಾದರೆ, ಅದು ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಇದೇ ವೇಳೆ ಕೋರ್ಟ್ ಎಚ್ಚರಿಸಿದೆ.
ಒಂದು ವೇಳೆ ಡಿಪಿಆರ್ ಅನ್ನು ಸಿಡಬ್ಲ್ಯೂಸಿ ಅನುಮೋದಿಸಿದರೆ, ತಮಿಳುನಾಡು ರಾಜ್ಯಕ್ಕೆ ಕಾನೂನಿನಡಿ ಅನುಮತಿಸಲಾದ ಎಲ್ಲಾ ಕ್ರಮಗಳನ್ನು ತೆಗೆದುಕೊಂಡು ಅದನ್ನು ಪ್ರಶ್ನಿಸಲು ಸ್ವತಂತ್ರವಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ತಮಿಳುನಾಡು 2007ರಲ್ಲಿ ಕಾವೇರಿ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿತ್ತು. ಅದು 2018ರಲ್ಲಿ ಮುಗಿಯಿತು. ಈಗ ಈ ಹೊಸ ಅರ್ಜಿಯನ್ನು ಆ ಹಳೆಯ ಮೇಲ್ಮನವಿಯಲ್ಲಿಯೇ ‘ವಿವಿಧ ಅರ್ಜಿ’ (Miscellaneous Application)ಎಂದು ಸೇರಿಸಿ ಸಲ್ಲಿಸಲಾಗಿದೆ.
1956ರ ಅಂತರ ರಾಜ್ಯ ನದಿ ಜಲ ವಿವಾದಗಳ ಕಾಯ್ದೆಯ (Inter-State River Water Disputes Act)ಸೆಕ್ಷನ್ 6A ಯಡಿ ನೀಡಲಾಗಿರುವ ಅಧಿಕಾರಗಳನ್ನು ಬಳಸಿಕೊಂಡು, ಕೇಂದ್ರ ಸರ್ಕಾರವು 2018ರಲ್ಲಿ ‘ಕಾವೇರಿ ಜಲ ನಿರ್ವಹಣಾ ಯೋಜನೆ’ (Cauvery Water Management Scheme) ಅನ್ನು ಅಧಿಸೂಚಿಸಿದೆ.
ಇದರ ಮುಖ್ಯ ಉದ್ದೇಶ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ’ (Cauvery Water Management Authority – CWMA) ಅನ್ನು ಸ್ಥಾಪಿಸುವುದು. ಇದನ್ನು ಕಾವೇರಿ ಜಲ ವಿವಾದ ನ್ಯಾಯಮಂಡಳಿ (Tribunal) ಯ ತೀರ್ಪನ್ನು ಜಾರಿಗೆ ತರುವುದಕ್ಕಾಗಿ ಮಾಡಲಾಗಿದೆ. ಆ ತೀರ್ಪನ್ನು ಸುಪ್ರೀಂ ಕೋರ್ಟ್ 16.02.2018ರ ಆದೇಶದ ಮೂಲಕ ತಿದ್ದುಪಡಿ ಮಾಡಿದೆ.
ಬಂಧನಕ್ಕೊಳಗಾದ ಸಿಎಂ, ಸಚಿವರ ವಜಾ ಮಸೂದೆ ಪರಿಶೀಲನೆಗೆ ಜೆಪಿಸಿ ರಚನೆ : ವಿಪಕ್ಷಗಳಿಂದ ತೀವ್ರ ವಿರೋಧ


