ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣವನ್ನು ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ.
ಈ ಮೂಲಕ ನ್ಯಾಯಮೂರ್ತಿ ಎಂ.ಐ ಅರುಣ್ ಅವರು, ವಿಚಾರಣಾ ನ್ಯಾಯಾಲಯ ಸಂಜ್ಞೇ (cognisance)ಪರಿಗಣಿಸಿ ಯಡಿಯೂರಪ್ಪ ಅವರಿಗೆ ಸಮನ್ಸ್ ಜಾರಿ ಮಾಡಿದ್ದ ಫೆಬ್ರವರಿ 28ರ ಆದೇಶವನ್ನು ಎತ್ತಿ ಹಿಡಿದಿದ್ದಾರೆ.
ಆದಾಗ್ಯೂ, ಅಗತ್ಯವಿಲ್ಲದೆ ಯಡಿಯೂರಪ್ಪ ಅವರನ್ನು ವಿಚಾರಣೆಗೆ ಕರೆಯಬೇಡಿ ಎಂದು ವಿಚಾರಣಾ ನ್ಯಾಯಾಲಯಕ್ಕೆ ಹೈಕೋರ್ಟ್ ಸೂಚಿಸಿದೆ. ಅಗತ್ಯವಿಲ್ಲದಿದ್ದರೆ ಎ -1 (ಯಡಿಯೂರಪ್ಪ) ಪರವಾಗಿ ಸಲ್ಲಿಸಲಾದ ವಿನಾಯಿತಿ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ಪರಿಗಣಿಸುತ್ತದೆ ಎಂದು ತಿಳಿಸಿದೆ.
ವಿಚಾರಣಾ ನ್ಯಾಯಾಲಯದಲ್ಲಿ ದೋಷಮುಕ್ತರಾಗಲು ಯಡಿಯೂರಪ್ಪ ಅವರಿಗೆ ಸ್ವಾತಂತ್ರ್ಯವಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಗಮನಾರ್ಹವಾಗಿ, ಈ ಹಿಂದೆ, ಫೆಬ್ರವರಿ 7ರಂದು ವಿಚಾರಣಾ ನ್ಯಾಯಾಲಯ ಸಂಜ್ಞೇ ಪರಿಗಣಿಸಿರುವ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿತ್ತು. ಸಿಐಡಿ ಮಾಡಿರುವ ತನಿಖೆ ಮತ್ತು ಅಂತಿಮ ವರದಿ ಹಾಗೆಯೇ ಉಳಿಯಲಿದೆ ಎಂದಿತ್ತು. ವಿಷಯವನ್ನು ವಿಚಾರಣಾ ನ್ಯಾಯಾಲಯಕ್ಕೆ ಹಿಂದಿರುಗಿಸಿತ್ತು.
ಮೊದಲ ಬಾರಿಗೆ ಸಂಜ್ಞೇ ಪರಿಗಣಿಸಿದ್ದನ್ನು ಪ್ರಶ್ನಿಸಿದ್ದ ಅರ್ಜಿಯನ್ನು ಭಾಗಶಃ ಪುರಸ್ಕರಿಸಿದ್ದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಹೊಸದಾಗಿ ಸಂಜ್ಞೇ ಪರಿಗಣಿಸುವಂತೆ ವಿಚಾರಣಾಧೀನ ನ್ಯಾಯಾಲಯಕ್ಕೆ ನಿರ್ದೇಶಿಸಿತ್ತು. ಎರಡನೇ ಬಾರಿ ಸಂಜ್ಞೇ ಪರಿಗಣಿಸಿದ್ದನ್ನು ಪ್ರಶ್ನಿಸಿ ಯಡಿಯೂರಪ್ಪ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು ಹೈಕೋರ್ಟ್ ರದ್ದುಗೊಳಿಸಿದೆ.
ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಸಂಬಂಧ ಸಂತ್ರಸ್ತೆಯ ತಾಯಿ 2024ರ ಮಾರ್ಚ್ 14ರಂದು ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಆ ದೂರು ಆಧರಿಸಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ನಂತರ ಪ್ರಕರಣ ಸಿಐಡಿಗೆ ತನಿಖೆ ವರ್ಗಾವಣೆಯಾಗಿತ್ತು. ಸಿಐಡಿ ಪೊಲೀಸರು ಯಡಿಯೂರಪ್ಪ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದರು.
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆ: ರಾಷ್ಟ್ರಪತಿ, ಪ್ರಧಾನಿಗೆ ರಾಜು ಕಾಗೆ ಪತ್ರ


