ತಮಿಳುನಾಡು ವಿದ್ಯಾರ್ಥಿಗಳಿಗೆ ನೀಟ್‌ನಿಂದ ವಿನಾಯಿತಿ ನೀಡುವಂತೆ ವಿಧಾನಸಭೆ ಅಂಗೀಕರಿಸಿದ್ದ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಒಪ್ಪಿಗೆ ಸೂಚಿಸದೆ ತಡೆಹಿಡಿದಿರುವುದನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಶನಿವಾರ (ನ.15) ಸುಪ್ರೀಂ ಕೋರ್ಟ್‌ಗೆ ಮೆಟ್ಟಿಲೇರಿದೆ.
ಕೇಂದ್ರ ಸರ್ಕಾರದ ಸಲಹೆಯ ಮೇರೆಗೆ ಯಾವುದೇ ಕಾರಣಗಳನ್ನು ನೀಡದೆ ಮಸೂದೆಗೆ ಒಪ್ಪಿಗೆಯನ್ನು ಯಾಂತ್ರಿಕವಾಗಿ ತಡೆಹಿಡಿಯಲಾಗಿದೆ ಎನ್ನುವುದನ್ನು ರಾಜ್ಯಪಾಲರ ಸಚಿವಾಲಯದ ಮಾ.4ರ ಸಂವಹನವು ತೋರಿಸಿದೆ ಎಂದು ತಮಿಳುನಾಡು ಸರ್ಕಾರ ಸಲ್ಲಿಸಿರುವ ಅರ್ಜಿಯಲ್ಲಿ ಹೇಳಿದೆ.
ಕೇಂದ್ರ ಸರ್ಕಾರ ಎತ್ತಿದ್ದ ಪ್ರತಿಯೊಂದು ಆಕ್ಷೇಪಕ್ಕೂ ವಿವರವಾದ ಉತ್ತರಗಳನ್ನು ಒದಗಿಸಲಾಗಿದೆ. ರಾಷ್ಟ್ರಪತಿಗಳ ಕ್ರಮವು ಸಾಂವಿಧಾನಿಕ ಬಿಕ್ಕಟ್ಟನ್ನು ಸೃಷ್ಟಿಸಿದೆ ಎಂದು ಸರ್ಕಾರ ಅರ್ಜಿಯಲ್ಲಿ ಹೇಳಿದೆ. ಒಕ್ಕೂಟವಾದ, ಶಾಸಕಾಂಗ ಸ್ವಾಯತ್ತತೆ ಹಾಗೂ ಸಂವಿಧಾನದ 201 ಮತ್ತು 254(2) ವಿಧಿಗಳ ವ್ಯಾಪ್ತಿಗೆ ಸಂಬಂಧಿಸಿದಂತೆ ಗಣನೀಯ ಪ್ರಶ್ನೆಗಳನ್ನು ಎತ್ತಿದೆ.
2021ರ ಮಸೂದೆಗೆ ಒಪ್ಪಿಗೆಯನ್ನು ತಡೆಹಿಡಿದಿರುವ ರಾಷ್ಟ್ರಪತಿಗಳ ಕ್ರಮವು ಅಸಾಂವಿಧಾನಿಕವಾಗಿದೆ ಮತ್ತು ರದ್ದುಗೊಳಿಸಲು ಅರ್ಹವಾಗಿದೆ ಎಂದು ಘೋಷಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ.
ಮಸೂದೆಯು ವಿಧಿ 254(2)ರಡಿ ರಾಷ್ಟ್ರಪತಿಗಳ ಒಪ್ಪಿಗೆಯನ್ನು ಪಡೆದಿದೆ ಎಂದು ಘೋಷಿಸಲು ಅಥವಾ ಪರ್ಯಾಯವಾಗಿ ಹೊಸದಾಗಿ ಪರಿಗಣನೆಗಾಗಿ ಮಸೂದೆಯನ್ನು ಮತ್ತೆ ರಾಷ್ಟ್ರಪತಿಗಳ ಮುಂದೆ ಮಂಡಿಸಲು ನಿರ್ದೇಶನ ನೀಡುವಂತೆಯೂ ಅರ್ಜಿಯಲ್ಲಿ ಕೋರಲಾಗಿದೆ.
ಬಿಹಾರ ಚುನಾವಣೆಯಲ್ಲಿ ವಿಶ್ವಬ್ಯಾಂಕ್‌ನ 14,000 ಕೋಟಿ ರೂಪಾಯಿಗಳ ನಿಧಿ ಬಳಕೆ: ಪ್ರಶಾಂತ್ ಕಿಶೋರ್ ಪಕ್ಷದ ಆರೋಪ


