ದಲಿತರು ಒಗ್ಗಟ್ಟಾಗದೆ ಇದ್ದರೆ ಮುನುವಾದಿಗಳ ವಿರುದ್ಧ ಶಕ್ತಿ ಪ್ರದರ್ಶನ ಸಾಧ್ಯವಿಲ್ಲ; ನಾವು ನೂರಿನ್ನೂರು ಜನ ಪ್ರತ್ಯೇಕ ಹೋರಾಟ ಮಾಡಿದರೆ ಪ್ರಯೋಜನವಿಲ್ಲ, ಒಂದು ಕರೆ ಕೊಟ್ಟರೆ ಲಕ್ಷಾಂತರ ಜನರು ಸೇರುವಂತಾಗಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಡಿಎಸ್‌ಎಸ್) ಬೆಂಗಳೂರಿನಲ್ಲಿ ಇಂದು ಆಯೋಜಿಸಿದ್ದ ‘ಸಂವಿಧಾನ ಸಂರಕ್ಷಿಸಿ ಮನುಸ್ಮೃತಿ ಹಿಮ್ಮೆಟ್ಟಿಸೋಣ’ ಜಾಗೃತಿ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
“ಸಂವಿಧಾನಕ್ಕೆ ಪರ್ಯಾಯವಾಗಿ ಮನುವಾದ ಜಾರಿಗೆ ತರುವ ಪ್ರಯತ್ನ ಹಲವು ವರ್ಷಗಳಿಂದ ನಡೆಯುತ್ತಿದೆ. ಅಂಬೇಡ್ಕರ್ ಮತ್ತು ಬುದ್ಧನ ಅನುಯಾಯಿಗಳಾದ ನಮ್ಮ ಮೇಲೆ ಬಹಳಷ್ಟು ಜವಾಬ್ದಾರಿ ಇದೆ. ಕಳೆದ 12 ವರ್ಷಗಳ ಬಿಜೆಪಿ ಆಡಳಿತದಲ್ಲಿ ದೇಶದ ವಾತಾವರಣ ಸಾಕಷ್ಟು ಬದಲಾಗಿದೆ, ಮನುವಾದಿಗಳು ಶರವೇಗದಲ್ಲಿ ಬೆಳೆಯುತ್ತಿದ್ದಾರೆ. ಏಕೆಂದರೆ, ನಮ್ಮ ನಡುವೆ ಸಾಕಷ್ಟು ಭಿನ್ನಾಭಿಪ್ರಾಯ ಇದೆ. ನಾವು ಒಂದಾಗದೇ ಅವರ ವಿರುದ್ಧ ಶಕ್ತಿ ಪ್ರದರ್ಶನ ಸಾಧ್ಯವಿಲ್ಲ. ನಮ್ಮ ನಡುವಿನ ಸಮಸ್ಯೆಗಳ ಬಗ್ಗೆಯೂ ಚರ್ಚೆ ಆಗಬೇಕು. ಆಗ ಮಾತ್ರ ಸಂವಿಧಾನ ರಕ್ಷಣೆ ಸಾಧ್ಯ” ಎಂದು ಕಿವಿಮಾತು ಹೇಳಿದರು.
“ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬಿಹಾರದ ಹಿಂದುಳಿದವರು ಏನು ಮಾಡಿದರು ಎಂಬುದು ನಮಗೆಲ್ಲಾ ಗೊತ್ತಿದೆ. ಕರ್ನಾಟಕದಲ್ಲೂ ಹೀಗೆ ಆದರೆ ಆಶ್ಚರ್ಯಪಡಬೇಕಿಲ್ಲ. ‘ಸಂವಿಧಾನ ನಮಗೆ ಬೇಕಿಲ್ಲ.. ಬೇರೆ ಸಂವಿಧಾನ ಬೇಕು’ ಎಂದು ಮನುವಾದಿಗಳು ಬಹಿರಂಗವಾಗಿ ಹೇಳುತ್ತಿದ್ದಾರೆ. ಬಸವಣ್ಣನ ಅಭಿಮಾನಿಗಳು ತಾಲಿಬಾನಿಗಳು ಎಂದು ಸ್ವಾಮೀಜಿಯೊಬ್ಬರು ಹೇಳಿದ್ದಾರೆ. ಏಕೆಂದರೆ. ಇಂದು ಅವರ ಶಕ್ತಿ, ಸದಸ್ಯರು ಮತ್ತು ಶಾಖೆಗಳು ಹೆಚ್ಚಾಗಿವೆ, ನಮ್ಮಲ್ಲಿ ಶಾಖೆಗಳು ಇಲ್ಲ. ನಾವು ಒಂದು ಕರೆ ಕೊಟ್ಟಾಗ ಲಕ್ಷಾಂತರ ಜನ ಸೇರಿದರೆ ಮಾತ್ರ ಸಂವಿಧಾನ ರಕ್ಷಣೆ ಸಾಧ್ಯ. ಹೀಗೆ ನೂರಿನ್ನೂರು ಜನ ಸೇರಿಕೊಂಡು ಕಾರ್ಯಕ್ರಮ ಮಾಡಿದರೆ ಪ್ರಯೋಜನವಿಲ್ಲ” ಎಂದರು.
“ಎಲ್ಲವನ್ನೂ ಮರೆತು ನಾವು ಒಂದಾದರೆ ಮಾತ್ರ ಸಂವಿಧಾನ ರಕ್ಷಣೆ ಸಾಧ್ಯ. ನಮ್ಮ ಭಿನ್ನಾಭಿಪ್ರಾಯಗಳನ್ನು ಮರೆತು ಒಗ್ಗಟಾಗಬೇಕು. ಬಿ.ಕೃಷ್ಣಪ್ಪ ದಲಿತ ಸಂಘರ್ಷ ಸಮಿತಿ (ದಸಂಸ) ಸ್ಥಾಪನೆ ಮಾಡಿದ ಬಳಿಕ ಸರ್ಕಾರಗಳು ಅವರ ಮಾತು ಕೇಳುತ್ತಿದ್ದವು. ಆದರೆ, ಇಂದು ನಮ್ಮಲ್ಲಿ ಒಡಕು ಹೆಚ್ಚಾಗಿದ್ದು ನಮ್ಮ ಮಾತು ಯಾರೂ ಕೇಳುತ್ತಿಲ್ಲ. ನಾವು ರಾಜಕೀಯ ಅಧಿಕಾರ ಹಿಡಿಯಬೇಕಾದರೆ ಒಗ್ಗಟಾಗಬೇಕು” ಎಂದರು.
“ಮನುಸ್ಮೃತಿ ಮತ್ತು ಸಂವಿಧಾನ ನಡುವಿನ ವ್ಯತ್ಯಾಸಗಳನ್ನು ನಾವು ನಮ್ಮವರಿಗೆ ಬಿಸಿಡಿ ಹೇಳಬೇಕು. ಇಲ್ಲದಿದ್ದರೆ ಅದನ್ನೂ ಒಂದು ಪುಸ್ತಕ ಎಂದುಕೊಳ್ಳುತ್ತಾರೆ. ಬದಲಾವಣೆ ನಮ್ಮ ಮನೆಯಿಂದಲೇ ಆರಂಭವಾಗಬೇಕು. ನಾವು ಮಾತ್ರ ಬದಲಾವಣೆಯಾಗುವುದು ಪರಿಹಾರವಲ್ಲ. ನಾವು ನಮ್ಮ ಮನೆಯನ್ನು ಬದಲಾವಣೆ ಮಾಡಿದರೆ ಮಾತ್ರ ಬಾಬಾ ಸಾಹೇಬರ ಕನಸು ನನಸು ಮಾಡಲು ಸಾಧ್ಯ” ಎಂದು ಹೇಳಿದರು.


