ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ರೈತರ ಭೂ ಹೋರಾಟ ಕೊನೆಗೂ ಸುಖಾಂತ್ಯವಾಗಿದೆ. ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಜೊತೆಗೆ ರಾಜ್ಯದ ಹತ್ತಾರು ಜನಪರ ಸಂಘಟನೆಗಳು ನಡೆಸಿದ ಸುದೀರ್ಘ ಹೋರಾಟ ಮತ್ತು ಒಗ್ಗಟ್ಟಿನ ಫಲವಾಗಿ, ಸುಮಾರು ನಾಲ್ಕು ವರ್ಷಗಳ ಕಾಲ ನಡೆದ ಹೋರಾಟಕ್ಕೆ ಅಂತಿಮ ಜಯ ಲಭಿಸಿದೆ.
ಸಂಪೂರ್ಣ ಭೂಸ್ವಾಧೀನ ಪ್ರಕ್ರಿಯೆಯನ್ನೇ ಕೈಬಿಡುವವುದಾಗಿ ಜುಲೈ 15 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಐತಿಹಾಸಿಕ ಘೋಷಣೆ ಮಾಡಿದರು. ಆದರೆ, ಅದರ ನಂತರವೂ ಕೆಲವು ನಕಾರಾತ್ಮಕ ಬೆಳವಣಿಗೆಗಳು ನಡೆದು ರೈತರು ಆತಂಕಗೊಂಡಿದ್ದರು. ಮುಖ್ಯಮಂತ್ರಿಗಳ ಘೋಷಣೆಗೆ ವಿರುದ್ಧವಾಗಿ, 13 ಹಳ್ಳಿಗಳ ಪೈಕಿ ಎರಡು ಹಳ್ಳಿಗಳ ಭೂಮಿಗೆ ಬೆಲೆ ನಿಗದಿ ಸಭೆಯನ್ನು ಕರೆಯಲಾಗಿತ್ತು. ಈ ಸಭೆಗೆ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸಭೆಯನ್ನು ಮುಂದೂಡಲಾಯಿತು. ಅವರ ಲೆಕ್ಕಾಚಾರ ಫಲ ಕೊಡದಿದ್ದಾಗ, ಶಾಶ್ವತ ವಿಶೇಷ ಕೃಷಿ ವಲಯ ಘೋಷಣೆಯ ವದಂತಿಯನ್ನೂ ತೇಲಿಬಿಡಲಾಗಿತ್ತು.
ಈ ಎಲ್ಲ ಬೆಳವಣಿಗೆಗಳ ನಡುವೆಯೇ, ನವೆಂಬರ್ 26 ರ ಬೃಹತ್ ‘ಬೆಂಗಳೂರು ಚಲೋ’ ಸಂದರ್ಭದಲ್ಲಿ, ಸಂಯುಕ್ತ ಹೋರಾಟದ ಮುಖಂಡರ ಜೊತೆಗೆ ಮುಖ್ಯಮಂತ್ರಿಗಳ ಜೊತೆ ನಡೆದ ಮಾತುಕತೆಯಂತೆ, ಡಿ. 4 ರ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಡಿನೋಟಿಫಿಕೇಶನ್‌ಗೆ (ಭೂಸ್ವಾಧೀನ ಕೈಬಿಡಲು) ಸಮ್ಮತಿ ಸೂಚಿಸಿದೆ.
ಸುಮಾರು ನಾಲ್ಕು ವರ್ಷಗಳ ಕಾಲ ನಡೆದ ಈ ಸುದೀರ್ಘ ಹೋರಾಟದ ದಾರಿ ಸುಲಭವಾಗಿರಲಿಲ್ಲ. ಹೆಜ್ಜೆ ಹೆಜ್ಜೆಗೂ ಎದುರಾದ ತಿರುವುಗಳು, ಸರ್ಕಾರಗಳ ನಿರ್ಲಕ್ಷ್ಯ, ಕುತಂತ್ರಗಳು, ವಿರೋಧಿಗಳ ಬೆದರಿಕೆಗಳನ್ನೆಲ್ಲಾ ಮೀರಿ ಕೊನೆಗೂ ರೈತರು ಗೆದ್ದಿದ್ದಾರೆ.
ರೈತರ ಜೊತೆ ನಿಂತ ಜನಸಮುದಾಯಗಳಿಗೆ ಧನ್ಯವಾದ ತಿಳಿಸಿದ ಹೋರಾಟ ಸಮಿತಿ
ರೈತರ ಹೋರಾಟದ ಕೊನೆಯ ದಿನಗಳಲ್ಲಿ ಇಡೀ ರಾಜ್ಯದ ಜನತೆ ದೇವನಹಳ್ಳಿ ರೈತರ ಜೊತೆಗೆ ನಿಂತರು. ದೇವನಹಳ್ಳಿ ಚಲೋ ನಂತರ, ಎಲ್ಲ ರೈತ, ಕಾರ್ಮಿಕ, ದಲಿತ, ಮಹಿಳಾ ಸಂಘಟನೆಗಳು ಸೇರಿದಂತೆ ರಾಜ್ಯದ ಜನಪರ ಸಂಘಟನೆಗಳು, ಪ್ರಗತಿಪರ ಚಿಂತಕರು, ಸಾಹಿತಿಗಳು, ಕಲಾವಿದರು, ಮಠಾಧೀಶರು, ಪ್ರಜ್ಞಾವಂತ ನಾಗರಿಕರು ಒಟ್ಟಾಗಿ ಬಂದು, ರೈತರ ಉಳಿವಿಗಾಗಿ ಜೊತೆ ನಿಂತಿದ್ದನ್ನು ಇಲ್ಲಿ ಸ್ಮರಿಸುತ್ತೇವೆ ಎಂದು ರೈತರು ಅಭಿಪ್ರಾಯಪಟ್ಟರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹೋರಾಟಗಾರರಾದ ಕಾರಳ್ಳಿ ಶ್ರೀನಿವಾಸ್, “ಭೂಸ್ವಾಧೀನ ಕೈಬಿಟ್ಟಿರುವ ಮುಖ್ಯಮಂತ್ರಿಗಳ ನೇತೃತ್ವದ ಸರ್ಕಾರಕ್ಕೆ ಅಭಿನಂದನೆಗಳು. ಈ ರೈತಪರ ನಿಲುವನ್ನು ಸಮಿತಿಯು ಸ್ವಾಗತಿಸುತ್ತದೆ. ಈ ಗೆಲುವಿನ ಹಿಂದೆ ಒಟ್ಟಾಗಿ ಹಗಲಿರುಳೆನ್ನದೆ ದುಡಿದ ರೈತರ ಶ್ರಮವಿದೆ. ಜೊತೆಗೆ ವಿವಿಧ ಜನಪರ ಸಂಘಟನೆಗಳು, ಪ್ರಗತಿಪರರು, ಸಾಹಿತಿಗಳು, ನಟರು ಸೇರಿದಂತೆ ಎಲ್ಲ ಜನಸಮುದಾಯಗಳ ಬೆಂಬಲ ದೊರೆತದ್ದು ಮತ್ತಷ್ಟು ಗೆಲುವಾಗಲು ಕಾರಣವಾಗಿದೆ. ಆದ್ದರಿಂದ ಅವರೆಲ್ಲರಿಗೂ ನಮ್ಮ ಸಮಿತಿಯು ಕೃತಜ್ಞತೆಗಳನ್ನು ಸಲ್ಲಿಸುತ್ತದೆ. ಇಲ್ಲಿ ಮಾತ್ರವಲ್ಲ, ತಮ್ಮ ಭೂಮಿಯನ್ನು ಪ್ರೀತಿಸುವ, ಭೂತಾಯಿಯನ್ನು ನಂಬಿ ಬದುಕಲು ಬಯಸುವ ಎಲ್ಲರಿಗೂ ಭೂಮಿ ಸಿಗಬೇಕು. ಈ ಎಲ್ಲ ಜನಸಮುದಾಯಗಳ ಜೊತೆ ನಾವಿರುತ್ತೇವೆ” ಎಂದರು.
ಮುಖಂಡರಾದ ಮಾರೇಗೌಡ ಮಾತನಾಡಿ, “ನಮ್ಮ ಭೂಮಿ ಉಳಿದಿರುವ ಈ ಸಂತೋಷವನ್ನು, ನಮಗೆ ಬೆಂಬಲಿಸಿದ ಎಲ್ಲರಿಗೂ, ಜೊತೆಗೆ ನಿಂತ ಸಂಘಟನೆಗಳು, ಹೋರಾಟದ ಸಹಚರರು ಹಾಗೂ ನಾಡಿನ ಜನರೊಂದಿಗೆ ಹಂಚಿಕೊಳ್ಳಲು ಮತ್ತು ಅವರನ್ನು ಅಭಿನಂದಿಸಲು ನಾವು ಬಯಸುತ್ತೇವೆ. ಇದರ ಜೊತೆಗೆ ಈ ರೈತಪರ ನಿರ್ಣಯಕ್ಕೆ ಪರೋಕ್ಷವಾಗಿ ಮತ್ತು ಪ್ರತ್ಯಕ್ಷವಾಗಿ ಕಾರಣರಾದ ಜನಪ್ರತಿನಿಧಿಗಳು, ಅಧಿಕಾರಿಗಳು ಎಲ್ಲರಿಗೂ ಧನ್ಯವಾದಗಳು” ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ, ನಲ್ಲಪ್ಪನಹಳ್ಳಿ ನಂಜಪ್ಪ, ಅಶ್ವತ್ಥಪ್ಪ, ತಿಮ್ಮರಾಯಪ್ಪ, ವೆಂಕಟರಮಣಪ್ಪ, ಪಿಳ್ಳಣ್ಣ, ಮುನಿಕೃಷ್ಣಪ್ಪ, ನಂದೀಶ್, ಕೃಷ್ಣಪ್ಪ, ಮರಿಯಣ್ಣ, ಮೋಹನ್, ವೆಂಕಟೇಶ್, ಪಿಳ್ಳರಾಜು, ಗೋಪಿನಾಥ್, ಲಗುಮಣ್ಣ, ಮಂಜುನಾಥ್ ಮುಂತಾದವರು ಇದ್ದರು.


