ಬಸ್ ಕಣಿವೆಗೆ ಉರುಳಿ ಬಿದ್ದು, 9 ಮಂದಿ ಸಾವನ್ನಪ್ಪಿ, 22 ಜನರಿಗೆ ಗಂಭೀರ ಗಾಯಗಳಾಗಿರುವ ಘಟನೆ ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮರಾಜು ಜಿಲ್ಲೆಯಲ್ಲಿ ನಡೆದಿದೆ.
ಶುಕ್ರವಾರ ಚಿತ್ತೂರಿನಿಂದ ನೆರೆಯ ತೆಲಂಗಾಣಕ್ಕೆ ತೆರಳುತ್ತಿದ್ದ ಬಸ್‌ನಲ್ಲಿ ಚಾಲಕ ಮತ್ತು ಕ್ಲೀನರ್ ಸೇರಿದಂತೆ 37 ಜನರು ಪ್ರಯಾಣಿಸುತ್ತಿದ್ದರು. ಅವರಲ್ಲಿ ಆರು ಮಂದಿ ಸುರಕ್ಷಿತವಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಚಿಂತೂರು-ಮರೇಡುಮಿಲ್ಲಿ ಘಾಟ್ ರಸ್ತೆಯಲ್ಲಿ ದುರ್ಗಾ ದೇವಸ್ಥಾನದ ಬಳಿ ಬೆಳಗಿನ ಜಾವ 4:30 ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅಮಿತ್ ಬರ್ದಾರ್ ತಿಳಿಸಿದ್ದಾರೆ.
ಘಾಟ್ ನಲ್ಲಿ ಬಸ್ ಉರುಳಿದ್ದು, ಅದು ಉಲ್ಟಾ ಪಲ್ಟಿಯಾದ ಕಾರಣ ಬಸ್ ಕಂದಕದಲ್ಲಿ ಸಿಲುಕಿಕೊಂಡಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಗಾಯಗೊಂಡವರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಅಧಿಕಾರಿಯೊಬ್ಬರ ಪ್ರಕಾರ, ಮೋತುಗುಡೆಮ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಅಪಘಾತ ಸ್ಥಳದಲ್ಲಿ ಬಸ್ ಚಾಲಕನಿಗೆ ತಿರುವು ಕಾಣಿಸದಿರಬಹುದು, ಏಕೆಂದರೆ ಆ ಸ್ಥಳದಲ್ಲಿ ಭಾರೀ ಮಂಜು ಇತ್ತು. ಬಸ್ ಪ್ರಯಾಣಿಕರು ಚಿತ್ತೂರಿನಿಂದ ತೆಲಂಗಾಣದ ಭದ್ರಾಚಲಂನಲ್ಲಿರುವ ಶ್ರೀರಾಮ ದೇವಸ್ಥಾನಕ್ಕೆ ಹೋಗುತ್ತಿದ್ದರು ಎಂದು ಎಸ್.ಪಿ. ಅಮಿತ್ ಬರ್ದಾರ್ ಹೇಳಿದ್ದಾರೆ.
ಎರಡು ತಿಂಗಳ ಹಿಂದಷ್ಟೇ ಹೈದರಾಬಾದ್‌ನಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಸಂಸ್ಥೆಗೆ ಸೇರಿದ ಸ್ಲೀಪರ್ ಬಸ್ ಕರ್ನೂಲ್ ಸಮೀಪ ಹೊತ್ತಿ ಉರಿದಿದ್ದು, 20 ಮಂದಿ ಸಜೀವ ದಹನವಾಗಿದ್ದರು. ಆ ಘಟನೆಯ ಕಹಿ ಮಾಸುವ ಮುನ್ನವೇ ಇಂತಾದ್ದೊಂದು ಅಪಘಾತ ಸಂಭವಿಸಿದೆ


