ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಏಳು ವರ್ಷದ ಬಾಲಕಿ ಅತ್ಯಾಚಾರ ಹಾಗೂ ಗಂಭೀರ ಹಲ್ಲೆ ಪ್ರಕರಣಕ್ಕೆ ಸಂಬಧಿಸಿದಂತೆ ಆಕ್ರೋಶ ಹೊರಹಾಕಿರುವ ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೇವಾನಿ; ಆರೋಪಿಯನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಘಟನೆ ಕುರಿತು ವಿಡಿಯೋ ಬಿಡುಗಡೆ ಮಾಡಿರುವ ಅವರು, “ರಾಜ್‌ಕೋಟ್‌ನಲ್ಲಿ ನಡೆದ ಭೀಕರ ಘಟನೆಯಿಂದ ಹೃದಯ ವಿದ್ರಾವಕವಾಗಿದ್ದು, ಕೋಪ ಹುಟ್ಟುಹಾಕಿದೆ. 7 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಕಬ್ಬಿಣದ ರಾಡ್‌ನಿಂದ ಕ್ರೂರವಾಗಿ ಹಲ್ಲೆ ಮಾಡಲಾಗಿದೆ. ಆರೋಪಿಗೆ ಕಾನೂನಿನಡಿಯಲ್ಲಿ ಅತ್ಯಂತ ಕಠಿಣ ಶಿಕ್ಷೆ ವಿಧಿಸಬೇಕು” ಎಂದು ಒತ್ತಾಯಿಸಿದ್ದಾರೆ.
“ಇಂತಹ ಅಪರಾಧಗಳನ್ನು ತಡೆಯುವ ವಿಷಯದಲ್ಲಿ ಗುಜರಾತ್ ಸರ್ಕಾರ ಮತ್ತು ಪೊಲೀಸರು ಎಲ್ಲಿದ್ದರು? ಇದು ಮತ್ತೆ ಮತ್ತೆ ಸಂಭವಿಸಲು ಯಾವ ರೀತಿಯ ವ್ಯವಸ್ಥೆ ಅವಕಾಶ ನೀಡುತ್ತದೆ? ಇದನ್ನು ನಾವು ಮರೆಯಬಾರದು: ಬಿಲ್ಕಿಸ್ ಬಾನೋ ಅತ್ಯಾಚಾರಿಗಳಿಗೆ ಹಾರ ಹಾಕಿದ ಅದೇ ಬಿಜೆಪಿಯ ಇದೇ ಜನರು ಪ್ರತಿದಿನ ‘ವಂದೇ ಮಾತರಂ’ ಎಂದು ಕೂಗುತ್ತಾರೆ. ಆದರೆ, ಈ ನೈಜ ವಿಷಯಗಳ ಬಗ್ಗೆ ಬಾಯಿ ಮುಚ್ಚಿರುತ್ತಾರೆ” ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
“ನಮ್ಮ ‘ಮಾ’ ಮಾತೃಭೂಮಿಯಾಗಿದ್ದರೆ, ನಿಜವಾದ ಮಾತೆ ನಮ್ಮ ಸಮಾಜದ ಮಹಿಳೆಯರು. ಹುಡುಗಿಯರು ಕೂಡ. ಅವರು ಗುಜರಾತ್‌ನಲ್ಲಿ ಸುರಕ್ಷಿತವಾಗಿಲ್ಲ, ಅದು ವಂದೇ ಮಾತರಂಗೆ ಮಾಡಿದ ದೊಡ್ಡ ಅವಮಾನ” ಎಂದು ಅವರು ಹೇಳಿದ್ದಾರೆ.
ಘಟನೆ ಹಿನ್ನಲೆ:
ಏಳು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ನಂತರ ಆಕೆಯ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿರುವ ಘಟನೆ ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಎರಡು ದಿನಗಳ ಹಿಂದೆ ನಡೆದಿತ್ತು. ಈ ಪ್ರಕರಣ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, 35 ವರ್ಷದ ಕೃಷಿ ಕಾರ್ಮಿಕನನ್ನು ಬಂಧಿಸುವ ಮೂಲಕ ಪೊಲೀಸರು ಆರೋಪಿಯನ್ನು ಅಲ್ಪಸಮಯದಲ್ಲೇ ಪತ್ತೆಹಚ್ಚಿದ್ದಾರೆ.
ದಾಹೋದ್ ಜಿಲ್ಲೆಯಲ್ಲಿ ಕುಟುಂಬವೊಂದು ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಿತ್ತು. ಡಿಸೆಂಬರ್ 4 ರಂದು ಮಗು ಹೊಲದ ಬಳಿ ಆಟವಾಡುತ್ತಿದ್ದಾಗ ಆಕೆಯ ಪೋಷಕರು ಹತ್ತಿರದಲ್ಲಿ ಕೆಲಸ ಮಾಡುತ್ತಿದ್ದರು. ಅಪರಿಚಿತ ವ್ಯಕ್ತಿಯೊಬ್ಬರು ಆಕೆಯನ್ನು ಅಪಹರಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಗು ಕಿರುಚಿದಾಗ, ದಾಳಿಕೋರ ಆಕೆಯ ಖಾಸಗಿ ಭಾಗಕ್ಕೆ ಲೋಹದ ರಾಡ್ ಅನ್ನು ತುರುಕಿ ತೀವ್ರ ರಕ್ತಸ್ರಾವವಾಗುವಂತೆ ಗಾಯಗೊಳಿಸಿದ ಬಳಿಕ ಸ್ಥಳದಿಂದ ಪರಾರಿಯಾಗಿದ್ದ.
ಕುಟುಂಬವು ಆಕೆಯನ್ನು ಹುಡುಕಲು ಪ್ರಾರಂಭಿಸಿತು, ಆಕೆ ಹೊಲದ ಬಳಿ ಗಾಯಗೊಂಡಿರುವುದು ಕಂಡುಬಂದಿದೆ. ಕೂಡಲೇ ಮಗುವನ್ನು ರಾಜ್‌ಕೋಟ್‌ನ ಜನ್ನಾ ಆಸ್ಪತ್ರೆಗೆ ಸಾಗಿಸಲಾಯಿತು. ಆಸ್ಪತ್ರೆ ಮೂಲಗಳ ಪ್ರಕಾರ, ಆಕೆಯ ಸ್ಥಿತಿ ಪ್ರಸ್ತುತ ಸ್ಥಿರವಾಗಿದ್ದು, ಮುಂದಿನ ಎರಡು ಮೂರು ದಿನಗಳಲ್ಲಿ ಆಕೆಯನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ.


