ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಭಾಗಿಯಾಗಿದ್ದಾರೆ ಎನ್ನಲಾದ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ)ದ ಹಣ ಅಕ್ರಮ ವರ್ಗಾವಣೆ ದೂರನ್ನು ಪರಿಗಣಿಸಲು ದೆಹಲಿ ನ್ಯಾಯಾಲಯ ಮಂಗಳವಾರ (ಡಿಸೆಂಬರ್ 16) ನಿರಾಕರಿಸಿದೆ.
ರೋಸ್ ಅವೆನ್ಯೂ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ವಿಶಾಲ್ ಗೋಗ್ನೆ ಈ ಕುರಿತು ಆದೇಶ ಪ್ರಕಟಿಸಿದ್ದಾರೆ.
ಇಡಿ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ವಿರುದ್ದ ಸಲ್ಲಿಸಿರುವ ಪ್ರಾಸಿಕ್ಯೂಷನ್ ದೂರು ಕಾನೂನುಬದ್ಧವಾಗಿಲ್ಲ. ಏಕೆಂದರೆ, ಅದು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ನಿಗದಿತ ಅಪರಾಧಕ್ಕೆ ಸಂಬಂಧಿಸಿದ ಎಫ್‌ಐಆರ್ ಅನ್ನು ಆಧರಿಸಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಹಣ ಅಕ್ರಮ ವರ್ಗಾವಣೆ ಪ್ರಕರಣದ ಪ್ರಕ್ರಿಯೆಗಳು ಸಂಜ್ಞೇ ಪರಿಗಣಿಸಿ ನಡೆಸಲಾಗಿದೆ ಮತ್ತು ಸಮನ್ಸ್ ಆದೇಶವನ್ನು ಡಾ. ಸುಬ್ರಮಣಿಯನ್ ಸ್ವಾಮಿ ಅವರು ಸಿಆರ್‌ಪಿಸಿ ಸೆಕ್ಷನ್ 200 ಅಡಿಯಲ್ಲಿ ಸಲ್ಲಿಸಿದ ಖಾಸಗಿ ದೂರಿನ ಮೇರೆಗೆ ನೀಡಲಾಗಿದೆಯೇ ಹೊರತು, ಎಫ್‌ಐಆರ್ ಮೇಲೆ ಅಲ್ಲ ಎಂದು ನ್ಯಾಯಾಲಯ ಹೇಳಿದೆ.
ದೆಹಲಿ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗವು ಈ ಪ್ರಕರಣದಲ್ಲಿ ಈಗಾಗಲೇ ಎಫ್‌ಐಆರ್ ದಾಖಲಿಸಿದೆ. ಆದ್ದರಿಂದ ಅರ್ಹತೆಯ ಆಧಾರದ ಮೇಲೆ ಪ್ರಕರಣದಲ್ಲಿ ಇಡಿಯ ವಾದಗಳ ಮೇಲೆ ತೀರ್ಪು ನೀಡುವುದು ಅಕಾಲಿಕವಾಗಿರುತ್ತದೆ ಎಂದು ನ್ಯಾಯಾಧೀಶರು ಆದೇಶವನ್ನು ಪ್ರಕಟಿಸುವಾಗ ತಿಳಿಸಿದ್ದಾರೆ.
ಪ್ರಸ್ತುತ ದೂರಿನಲ್ಲಿ ಸಂಜ್ಞೇ ಪರಿಗಣಿಸುವ ಅವಕಾಶ ಕಾನೂನಿನಲ್ಲಿ ಇಲ್ಲ. ನಿಗದಿತ ಅಪರಾಧಕ್ಕೆ ಸಂಬಂಧಿಸಿದ ಎಫ್‌ಐಆರ್ ಇಲ್ಲದಿದ್ದಾಗ ಪಿಎಂಎಲ್‌ಎಯ ಸೆಕ್ಷನ್ 3 ಮತ್ತು 4ರ ಅಡಿಯಲ್ಲಿ ಹಣ ವರ್ಗಾವಣೆ ಅಪರಾಧಕ್ಕಾಗಿ ತನಿಖೆ ಮತ್ತು ಅದರ ಪರಿಣಾಮವಾಗಿ ಪ್ರಾಸಿಕ್ಯೂಷನ್ ದೂರನ್ನು ಉಳಿಸಿಕೊಳ್ಳಲಾಗುವುದಿಲ್ಲ ಎಂದು ನ್ಯಾಯಾಲಯ ತಿಳಿಸಿದೆ. ಇದು ಇಡಿಯ ದೂರನ್ನು ವಜಾಗೊಳಿಸಲು ಕಾರಣವಾಗುತ್ತದೆ ಎಂದಿದೆ.
2002ರ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ)ಯ ಸೆಕ್ಷನ್ 44 ಮತ್ತು 45 ರ ಅಡಿಯಲ್ಲಿ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ವಿರುದ್ಧ ಇಡಿ ಹೊಸ ಪ್ರಾಸಿಕ್ಯೂಷನ್ ದೂರು ದಾಖಲಿಸಿದ್ದು, ಸೆಕ್ಷನ್ 3ರ ಅಡಿಯಲ್ಲಿ ವ್ಯಾಖ್ಯಾನಿಸಲಾದ ಹಣ ವರ್ಗಾವಣೆ ಅಪರಾಧಕ್ಕಾಗಿ ಸೆಕ್ಷನ್ 70 ರೊಂದಿಗೆ ಓದಲಾಗಿದೆ ಮತ್ತು ಪಿಎಂಎಲ್‌ಎಯ ಸೆಕ್ಷನ್ 4ರ ಅಡಿಯಲ್ಲಿ ಶಿಕ್ಷಾರ್ಹವಾಗಿದೆ.
ಈ ಪ್ರಕರಣವು ಈಗ ಮುಚ್ಚಿಹೋಗಿರುವ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಪ್ರಕಾಶಕರಾದ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (Associated Journals Limited – AJL)ನ ಖರೀದಿ ಅಥವಾ ಸ್ವಾಧೀನಕ್ಕೆ ಸಂಬಂಧಿಸಿದೆ.
2010ರಲ್ಲಿ ಹೊಸದಾಗಿ ಸ್ಥಾಪಿತವಾದ ಕಂಪನಿಯಾದ ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್ (ವೈಐಎಲ್) ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ನಿಂದ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜಿಎಲ್) ಸುಮಾರು 90.21 ಕೋಟಿ ರೂಪಾಯಿ ಸಾಲದ ಹಕ್ಕನ್ನು ಕೇವಲ ರೂ. 50 ಲಕ್ಷಕ್ಕೆ ಖರೀದಿಸಿತ್ತು.
ತರುವಾಯ, ವೈಐಎಲ್ 2,000 ಕೋಟಿಗೂ ಹೆಚ್ಚು ಮೌಲ್ಯದ ಎಜಿಎಲ್‌ನ ಆಸ್ತಿಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತ್ತು. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವೈಐಎಲ್ ಬಹುಪಾಲು ಪಾಲನ್ನು ಹೊಂದಿದ್ದರು. ಇದರಿಂದಾಗಿ ಅವರು ಎಜಿಎಲ್ ಅಮೂಲ್ಯ ಆಸ್ತಿಗಳ ಮೇಲೆ ಹಿಡಿತ ಸಾಧಿಸಲು ಪಕ್ಷದ ನಿಧಿಯನ್ನು ಬಳಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
2014ರಲ್ಲಿ ಪ್ರಾರಂಭವಾದ ಇಡಿ ತನಿಖೆಯು ಕಾಂಗ್ರೆಸ್ ಪಕ್ಷ, ಎಜಿಎಲ್ ಮತ್ತು ವೈಐಎಲ್ ನಡುವಿನ ಹಣಕಾಸಿನ ವಹಿವಾಟುಗಳ ಮೇಲೆ ಕೇಂದ್ರೀಕರಿಸಿದೆ.
ಗಾಂಧಿ ಕುಟುಂಬ ಮತ್ತು ಇತರ ಕಾಂಗ್ರೆಸ್ ನಾಯಕರು ಎಜೆಎಲ್‌ನ ಆಸ್ತಿಗಳನ್ನು ವೈಯಕ್ತಿಕ ಲಾಭಕ್ಕಾಗಿ ದುರುಪಯೋಗಪಡಿಸಿಕೊಳ್ಳುವ ಯೋಜನೆಯಲ್ಲಿ ತೊಡಗಿದ್ದಾರೆ ಎಂದು ಇಡಿ ಆರೋಪಿಸಿದೆ.
ಇತ್ತೀಚೆಗೆ, ಇಡಿ ಎಜೆಎಲ್‌ಗೆ ಸಂಬಂಧಿಸಿದ ಸುಮಾರು 661 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ.


