ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು ಬುಧವಾರ (ಡಿ.17) ನಿರ್ಧರಿಸಿದ್ದಾರೆ.
ವರದಿಗಳ ಪ್ರಕಾರ, ವಿರೋಧ ಪಕ್ಷಗಳ ಸಂಸದರು ಮಸೂದೆಯ ಚರ್ಚೆಗೆ ಹಾಜರಾಗಲಿದ್ದಾರೆ. ಆದರೆ, ಅಂಗೀಕಾರದ ಸಮಯದಲ್ಲಿ ಸಭಾತ್ಯಾಗ ಮಾಡಲಿದ್ದಾರೆ. ಬುಧವಾರ ನಡೆದ ಇಂಡಿಯಾದ ಒಕ್ಕೂಟದ ನಾಯಕರ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಹೊರತುಪಡಿಸಿ, ಇಂಡಿಯಾದ ಮೈತ್ರಿಕೂಟದ ಎಲ್ಲಾ ಪಕ್ಷಗಳ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ಬಿಗಿಯಾಗಿ ನಿಯಂತ್ರಿಸಲ್ಪಡುವ ನಾಗರಿಕ ಪರಮಾಣು ವಲಯವನ್ನು ಖಾಸಗಿ ಭಾಗವಹಿಸುವಿಕೆಗೆ ಮುಕ್ತಗೊಳಿಸಲು ಅವಕಾಶ ನೀಡುವ ಸಸ್ಟೈನೇಬಲ್ ಹಾರ್ನೆಸ್ಸಿಂಗ್ ಅಂಡ್ ಅಡ್ವಾನ್ಸ್‌ಮೆಂಟ್ ಆಫ್ ನ್ಯೂಕ್ಲಿಯರ್ ಎನರ್ಜಿ ಫಾರ್ ಟ್ರಾನ್ಸ್‌ಫಾರ್ಮಿಂಗ್ ಇಂಡಿಯಾ (ಎಸ್‌ಹೆಚ್‌ಎಎನ್‌ಟಿಐ-ಶಾಂತಿ) ಮಸೂದೆಯ ಚರ್ಚೆಯಲ್ಲೂ ಭಾಗವಹಿಸಿ, ತಮ್ಮ ಭಿನ್ನಾಭಿಪ್ರಾಯ ವ್ಯಕ್ತಪಡಿಸಲು ವಿರೋಧ ಪಕ್ಷಗಳು ತೀರ್ಮಾನಿಸಿವೆ.
ಈ ಮಸೂದೆಗಳು ದೂರಗಾಮಿ ಪರಿಣಾಮಗಳನ್ನು ಬೀರಬಹುದು, ಗ್ರಾಮೀಣ ಜೀವನೋಪಾಯವನ್ನು ದುರ್ಬಲಗೊಳಿಸುವ ಮತ್ತು ಕಾರ್ಯತಂತ್ರದ ವಲಯಗಳನ್ನು ಕಾರ್ಪೊರೇಟ್ ಹಿತಾಸಕ್ತಿಗಳಿಗೆ ಹಸ್ತಾಂತರಿಸುವ ಸಾಧ್ಯತೆ ಇದೆ ಎಂದು ವಿರೋಧ ಪಕ್ಷಗಳ ನಾಯಕರು ಎಚ್ಚರಿಸಿದ್ದಾರೆ.
ಮಂಗಳವಾರ ಸರ್ಕಾರ ವಿಬಿ–ಜಿ ರಾಮ್ ಜಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದ್ದು, ವಿರೋಧ ಪಕ್ಷಗಳು ತೀವ್ರ ಪ್ರತಿಭಟನೆ ವ್ಯಕ್ತಪಡಿಸಿವೆ.
ಕೇಂದ್ರವು ಹಕ್ಕು ಆಧಾರಿತ ಕಲ್ಯಾಣ ಯೋಜನೆಯನ್ನು ರದ್ದುಗೊಳಿಸುತ್ತಿದೆ ಮತ್ತು ಮಹಾತ್ಮ ಗಾಂಧಿಯವರ ಪರಂಪರೆಯನ್ನು ದುರ್ಬಲಗೊಳಿಸುತ್ತಿದೆ ಎಂದು ಹಲವಾರು ಸಂಸದರು ಆರೋಪಿಸಿದ್ದಾರೆ. ಎರಡು ದಶಕಗಳಷ್ಟು ಹಳೆಯದಾದ ನರೇಗಾ (ಎಂಜಿಎನ್‌ಆರ್‌ಇಜಿಎ) ಕಾಯ್ದೆಯನ್ನು ಬದಲಿಸಲು ಪ್ರಯತ್ನಿಸುವ ಮಸೂದೆಯನ್ನು ಸ್ಥಾಯಿ ಸಮಿತಿಗೆ ಕಳಿಸಬೇಕೆಂದು ವಿಪಕ್ಷ ಸಂಸದರು ಒತ್ತಾಯಿಸಿದ್ದಾರೆ.
ವಿಪಕ್ಷಗಳ ತಂಡದ ನೇತೃತ್ವದ ವಹಿಸಿದ್ದ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಮಾತನಾಡಿ, ಪ್ರಸ್ತಾವಿತ ಕಾನೂನು ಉದ್ಯೋಗದ ಕಾನೂನು ಖಾತರಿಯನ್ನು ದುರ್ಬಲಗೊಳಿಸುತ್ತದೆ ಮತ್ತು ರಾಜ್ಯಗಳ ಮೇಲೆ ಹೆಚ್ಚಿನ ಆರ್ಥಿಕ ಹೊರೆಯನ್ನು ಹೇರುತ್ತದೆ ಎಂದು ಹೇಳಿದ್ದಾರೆ.
ಈ ಮಸೂದೆಯು ಕೇಂದ್ರಕ್ಕೆ ನಿಧಿ ಹಂಚಿಕೆಯನ್ನು ಮೊದಲೇ ನಿರ್ಧರಿಸುವ ಅಧಿಕಾರವನ್ನು ನೀಡುತ್ತದೆ. ಇದು ಯೋಜನೆಯ ಬೇಡಿಕೆ ಆಧಾರಿತ ಸ್ವರೂಪವನ್ನು ಪರಿಣಾಮಕಾರಿಯಾಗಿ ಕೊನೆಗೊಳಿಸುತ್ತದೆ ಮತ್ತು 73ನೇ ಸಾಂವಿಧಾನಿಕ ತಿದ್ದುಪಡಿಯ ಉದ್ದೇಶವನ್ನು ಉಲ್ಲಂಘಿಸುತ್ತದೆ ಎಂದು ಪ್ರಿಯಾಂಕಾ ಗಾಂಧಿ ತಿಳಿಸಿದ್ದಾರೆ.
ಟಿಎಂಸಿ ಮತ್ತು ಡಿಎಂಕೆ ಸಂಸದರೂ ಕೂಡ ಪ್ರಿಯಾಂಕಾ ಗಾಂಧಿಯ ಹೇಳಿಕೆಗೆ ಧನಿಗೂಡಿಸಿದ್ದಾರೆ. ಯೋಜನೆಯಿಂದ ಮಹಾತ್ಮ ಗಾಂಧಿಯ ಹೆಸರು ಕೈಬಿಟ್ಟಿರುವುದಕ್ಕೆ ಮತ್ತು ಮತ್ತು ಬೇಡಿಕೆ-ಚಾಲಿತ ವ್ಯವಸ್ಥೆಯಿಂದ ಪೂರೈಕೆ-ಚಾಲಿತ ವ್ಯವಸ್ಥೆಗೆ ಬದಲಾಯಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸಭಾತ್ಯಾಗ ಮಾಡಿದ ನಂತರ, ಪ್ರಿಯಾಂಕಾ ಗಾಂಧಿ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಡಿಎಂಕೆ ಸಂಸದ ಟಿ.ಆರ್. ಬಾಲು ಸೇರಿದಂತೆ ವಿರೋಧ ಪಕ್ಷದ ನಾಯಕರು ಸಂಸತ್ತಿನ ಸಂಕೀರ್ಣದಲ್ಲಿರುವ ಮಹಾತ್ಮ ಗಾಂಧಿಯವರ ಪ್ರತಿಮೆಯ ಬಳಿ ಪ್ರತಿಭಟನೆ ನಡೆಸಿದ್ದರು. “ಮಹಾತ್ಮ ಗಾಂಧಿಯವರಿಗೆ ಮಾಡುವ ಈ ಅವಮಾನವನ್ನು ದೇಶ ಸಹಿಸುವುದಿಲ್ಲ” ಎಂಬ ಘೋಷಣೆಗಳನ್ನು ಕೂಗಿದ್ದರು.


