ಭಾರತದಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಪ್ರಜೆಯ ಹೊಸ ಪೌರತ್ವ ಅರ್ಜಿಯನ್ನು ಸಕ್ರಿಯವಾಗಿ ಪರಿಗಣಿಸುವ ಜೊತೆಗೆ ಅವರ ದೀರ್ಘಾವಧಿಯ ವೀಸಾ ಅವಧಿ ಮುಗಿಯುವ ಮೊದಲೇ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು, ವಿದೇಶಾಂಗ ಸಚಿವಾಲಯ, ಗೃಹ ಸಚಿವಾಲಯ ಮತ್ತು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (ಎಫ್‌ಆರ್‌ಆರ್‌ಒ)ಗೆ ಕರ್ನಾಟಕ ಹೈಕೋರ್ಟ್ ನಿರ್ದೇಶಿಸಿದೆ.
ಭಾರತೀಯ ಪ್ರಜೆ ಮೊಹಮ್ಮದ್ ಯೂನಸ್ ಅವರನ್ನು ವಿವಾಹವಾಗಿರುವ, ಭಾರತೀಯ ಪ್ರಜೆಗಳಾಗಿರುವ ಇಬ್ಬರು ಮಕ್ಕಳ ತಾಯಿ ಅರ್ಜಿದಾರರಾದ ನಿಘತ್ ಯಾಸ್ಮೀನ್ ಅವರು ಪೌರತ್ವಕ್ಕಾಗಿ ತನ್ನ ಹಿಂದಿನ ವಿನಂತಿಗಳನ್ನು ಅಧಿಕಾರಿಗಳು ಕೈಗೆತ್ತಿಕೊಂಡಿಲ್ಲ ಎಂದು ಆರೋಪಿಸಿ ನ್ಯಾಯಾಲಯವನ್ನು ಸಂಪರ್ಕಿಸಿದರು.
ಗುರುವಾರ (ಡಿ.18) ವಿಚಾರಣೆ ನಡೆಸಿದ ಕೋರ್ಟ್, ಭಾರತ-ಪಾಕಿಸ್ತಾನ ಸಂಘರ್ಷದ ನಂತರ ವೀಸಾ ನೀತಿಯಲ್ಲಿನ ಇತ್ತೀಚಿನ ಬದಲಾವಣೆಗಳು ಪಾಕಿಸ್ತಾನಿ ಪ್ರಜೆಗಳ ಅರ್ಜಿಗಳನ್ನು ಹೇಗೆ ಪ್ರಕ್ರಿಯೆಗೊಳಿಸಲಾಗುತ್ತದೆ ಎಂಬುದರ ಮೇಲೆ ಪರಿಣಾಮ ಬೀರಿವೆ ಎಂಬುದನ್ನು ನ್ಯಾಯಾಲಯವು ಒಪ್ಪಿಕೊಂಡಿತು.
ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್, ಯಾಸ್ಮೀನ್ ಎಲ್ಲ ನಿಯಮಗಳನ್ನು ಪಾಲಿಸಿದ್ದಾರೆ ಎಂದು ಗಮನಿಸಿದರು.
ಪಾಕಿಸ್ತಾನಿ ಪ್ರಜೆಗಳಿಗೆ ವೀಸಾ ಸೇವೆಗಳನ್ನು ಸ್ಥಗಿತಗೊಳಿಸಲು ಸರ್ಕಾರಿ ಆದೇಶವಿದ್ದರೂ, ಮಾನ್ಯ ದೀರ್ಘಾವಧಿಯ ವೀಸಾಗಳನ್ನು ಹೊಂದಿರುವವರು ವಿಚಾರಣೆಯ ಸಮಯದಲ್ಲಿ ಗಡೀಪಾರು ಅಥವಾ ಬಲವಂತದ ಕ್ರಮಗಳಿಂದ ರಕ್ಷಿಸಲ್ಪಡುತ್ತಾರೆ ಎಂದು ನ್ಯಾಯಾಧೀಶರು ಸ್ಪಷ್ಟಪಡಿಸಿದರು.
ನ್ಯಾಯಾಲಯವು ಯಾಸ್ಮೀನ್‌ಗೆ ಹಲವು ದಿನಗಳಿಂದ ಬಾಕಿ ಇರುವ ಅರ್ಜಿಗಳನ್ನು ಹಿಂಪಡೆಯಲು ಮತ್ತು ಏಕೀಕೃತವಾಗಿ ಒಂದೇ ಅರ್ಜಿ ಸಲ್ಲಿಸಲು ಅನುಮತಿ ನೀಡಿತು. ಆದರೆ, ಅರ್ಜಿ ಸಲ್ಲಿಸಿದ ನಂತರ ನಿಗದಿತ ಸಮಯದೊಳಗೆ ಅದನ್ನು ಪ್ರಕ್ರಿಯೆಗೊಳಿಸಲು ಅಧಿಕಾರಿಗಳಿಗೆ ನಿರ್ದೇಶಿಸಿತು.
ಭಾರತದಲ್ಲಿನ ಅವರ ಕುಟುಂಬ ಸಂಬಂಧಗಳನ್ನು ಗಣನೆಗೆ ತೆಗೆದುಕೊಂಡು, ಅಸ್ತಿತ್ವದಲ್ಲಿರುವ ಕಾನೂನುಗಳು ಮತ್ತು ಸಮಯದ ಅಡಿಯಲ್ಲಿ ಅವರ ಅರ್ಜಿಯನ್ನು ನಿರ್ವಹಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳುವುದು ಕೋರ್ಟ್ ನಿರ್ದೇಶನದ ಗುರಿಯಾಗಿದೆ.


