ಮದುವೆಯಾಗಿ ಎಂಟು ತಿಂಗಳಿಗೆ ಗಂಡ ಹೆಂಡತಿಯನ್ನು ಮನೆ ಅಂಗಳದಲ್ಲೇ ಹೊಡೆದು ಕೊಂದ ಹೃದಯವಿದ್ರಾವಕ ಘಟನೆ ತೆಲಂಗಾಣದ ವಿಕಾರಬಾದ್ ಜಿಲ್ಲೆಯ ತಂಡೂರ್‌ನಲ್ಲಿ ನಡೆದಿದೆ.
ಅನುಷಾ (22) ಕೊಲೆಯಾದ ಹೆಣ್ಣು ಮಗಳು. ಗಂಡ ಪರಮೇಶ್ (28) ವಿರುದ್ದ ಕೊಲೆ ಆರೋಪ ಕೇಳಿ ಬಂದಿದೆ. ಹತ್ಯೆಗೂ ಮುನ್ನ ವಾರಗಟ್ಟಲೆ ಪರಮೇಶ್ ಆಕೆಗೆ ಚಿತ್ರಹಿಂಸೆ ನೀಡಿದ್ದ ಎಂದು ವರದಿಗಳು ಹೇಳಿವೆ.
ವರದಕ್ಷಿಣೆ ತರುವಂತೆ ಅನುಷಾಳನ್ನು ಪೀಡಿಸಿದ ಪರಮೇಶ್, ಕೊನೆಗೆ ಹೊಡೆದು ಕೊಂದಿದ್ದಾನೆ ಎಂದು ಆರೋಪಿಸಲಾಗಿದೆ. ಮದುವೆಯಾಗಿ ಎರಡೇ ತಿಂಗಳಿಗೆ ಆತ ವರದಕ್ಷಿಣೆಗಾಗಿ ಆಕೆಗೆ ಕಿರುಕುಳ ನೀಡಲು ಆರಂಭಿಸಿದ್ದ ಎಂದು ವರದಿಯಾಗಿದೆ.
ಹೆಚ್ಚು ಅನ್ನ ಮಾಡಿದ ಕ್ಷುಲ್ಲಕ ವಿಚಾರ ಮುಂದಿಟ್ಟುಕೊಂಡು ಪರಮೇಶ್‌ನ ತಾಯಿ ಲಾಲಮ್ಮ ಡಿಸೆಂಬರ್ 15ರಂದು ಅನುಷಾಗೆ ಬೈದಿದ್ದರು. ಅಮ್ಮನ ಜೊತೆ ಪರಮೇಶ್ ಕೂಡ ಸೇರಿಕೊಂಡು ತನ್ನ ಹೆಂಡತಿಯನ್ನು ಹಿಂಸಿಸಲು ಪ್ರಾರಂಭಿಸಿದ್ದ. ಅಮ್ಮ-ಮಗ ಇಬ್ಬರು ಸೇರಿ ಅನುಷಾಗೆ ಥಳಿಸಿದ್ದರು. ಇದನ್ನು ನೋಡಿದ ಪರಮೇಶ್‌ನ ತಂದೆ ಮೊಗಿಲಯ್ಯ ಅನುಷಾಳನ್ನು ಆಕೆಯ ತವರು ಮನೆಗೆ ಬಿಟ್ಟು ಬಂದಿದ್ದರು ಎಂದು ತಂಡೂರ್ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿವೈಎಸ್ಪಿ) ನರಸಿಂಗ್ ಯಡಯ್ಯ ತಿಳಿಸಿದ್ದಾರೆ.
ಡಿಸೆಂಬರ್ 18ರಂದು ಅನುಷಾಳನ್ನು ಆಕೆಯ ತಾಯಿ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಅಡ್ಡಗಟ್ಟಿದ ಪರಮೇಶ್, “ನಾನು ಆಸ್ಪತ್ರೆಗೆ ಕರೆದೊಯ್ಯುತ್ತೇನೆ” ಎಂದು ಹೇಳಿದ್ದಾನೆ. ಇದಕ್ಕೆ ಅಮ್ಮ-ಮಗಳು ಒಪ್ಪದಿದ್ದಾಗ, ಪರಮೇಶ್ ಬಲವಂತವಾಗಿ ಅನುಷಾಳನ್ನು ಕರೆದೊಯ್ದಿದ್ದ.
ಪರಮೇಶ್ ಅನುಷಾಳನ್ನು ಎರಡು ಆಸ್ಪತ್ರೆಗಳಿಗೆ ಕರೆದೊಯ್ದಿದ್ದ. ಆದರೆ, ಆಸ್ಪತ್ರೆಯವರು ಇದು ವೈದ್ಯಕೀಯ-ಕಾನೂನು ಪ್ರಕರಣ, ಪೊಲೀಸರು ಮಧ್ಯಪ್ರವೇಶಿಸದೆ ಚಿಕಿತ್ಸೆ ನೀಡುವುದಿಲ್ಲ ಎಂದಿದ್ದಾರೆ.
ಹಾಗಾಗಿ, ಪರಮೇಶ್ ಅನುಷಾಳನ್ನು ವಾಪಸ್ ಆತನ ಮನೆಗೆ ಕರೆದೊಯ್ದಿದ್ದ. ಮನೆ ತಲುಪಿದಾಗ, ಬಾಗಿಲು ತೆರೆಯುವಂತೆ ಅನುಷಾಳಿಗೆ ಸೂಚಿಸಿದ್ದ. ಇದಕ್ಕೆ ಅನುಷಾ ನಿರಾಕರಿಸಿದಾಗ, ಇಬ್ಬರ ನಡುವೆ ವಾಗ್ವಾದ ನಡೆದಿದೆ. ಅದು ತಾರಕಕ್ಕೇರಿ ಪರಮೇಶ್ ಅನುಷಾಳಿಗೆ ಥಳಿಸಿದ್ದಾನೆ. ನಂತರ ಆಕೆಯನ್ನು ಒದ್ದು ಮನೆಯ ಅಂಗಳಕ್ಕೆ ತಳ್ಳಿದ್ದಾನೆ. ಬಳಿಕ ಕಟ್ಟಿಗೆ ತಂದು ಅನುಷಾಳಿಗೆ ಹೊಡೆಯಲು ಶುರು ಮಾಡಿದ್ದಾನೆ. ಆಕೆ ನೆಲಕ್ಕೆ ಬೀಳುವವರೆಗೆ ಸುಮಾರು 6 ಬಾರಿ ತಲೆಗೆ ಬಲವಾಗಿ ಹೊಡೆದಿದ್ದಾನೆ ಎಂದು ಡಿವೈಎಸ್ಪಿ ವಿವರಿಸಿದ್ದಾರೆ.
ಆಸ್ಪತ್ರೆಯಿಂದ ಬೈಕ್‌ನಲ್ಲಿ ಪರಮೇಶ್‌ನ ಮನೆ ತಲುಪಿದಾಗ, ಅನುಷಾ ಅಲ್ಲಿಂದ ಓಡಿ ಹೋಗಲು ನೋಡಿದ್ದಳು. ಆದರೆ, ಪರಮೇಶ್ ಆಕೆಯನ್ನು ವರಾಂಡಕ್ಕೆ ಎಳೆದೊಯ್ದಿದ್ದ. ನಂತರ ಆಕೆಯ ತಲೆಯನ್ನು ಬಾಗಿಲಿಗೆ ಬಡಿಯುವುದು, ಕಪಾಳಮೋಕ್ಷ ಮಾಡುವುದು ಸೇರಿದಂತೆ ವಿವಿಧ ರೀತಿಯಲ್ಲಿ ಹಿಂಸಿಸಿದ್ದಾನೆ. ಕೊನೆಗೆ ಕಟ್ಟಿಗೆಯಿಂದ ಆಕೆಗೆ ಹೊಡೆಯಲು ಪ್ರಾರಂಭಿಸಿದ್ದಾನೆ. ಇದನ್ನು ನೋಡಿದ ದಾರಿ ಹೋಕ ಮಹಿಳೆಯೊಬ್ಬರು ತಡೆಯಲು ಪ್ರಯತ್ನಿಸಿದ್ದರು. ಆದರೆ, ಅನುಷಾ ಕುಸಿದು ಬೀಳುವವರೆಗೆ ಪರಮೇಶ್ ಹೊಡೆಯುವುದನ್ನು ನಿಲ್ಲಿಸಿಲ್ಲ ಎಂದು ಡಿವೈಎಸ್ಪಿ ಹೇಳಿದ್ದಾರೆ.
ಘಟನೆಯ ದೃಶ್ಯಗಳು ಪರಮೇಶ್‌ನ ಮನೆಯ ಸಿಸಿಟಿವಿಯಲ್ಲಿ ದಾಖಲಾಗಿದೆ ಎಂದು ಹೇಳಿದ್ದಾರೆ.
ಮದುವೆಗೂ ಮುಂಚೆ ಕೆಲ ಸಮಯದಿಂದ ಅನುಷಾ ಮತ್ತು ಪರಮೇಶ್ ಪರಸ್ಪರ ಪ್ರೀತಿಸುತ್ತಿದ್ದರು. ಕಳೆದ ಮಾರ್ಚ್‌ನಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಇಬ್ಬರ ಮದುವೆ ನಡೆದಿತ್ತು. ಮದುವೆ ಸಂದರ್ಭದಲ್ಲಿ 1.11 ಲಕ್ಷ ರೂಪಾಯಿ ಹಣ ಮತ್ತು ಇತರ ಕೆಲ ವಸ್ತುಗಳನ್ನು ವರದಕ್ಷಿಣೆಯಾಗಿ ಅನುಷಾಳ ಪೋಷಕರು ನೀಡಿದ್ದರು ಎಂದು ಡಿವೈಎಸ್ಪಿ ಮಾಹಿತಿ ನೀಡಿದ್ದಾರೆ.
ಮದುವೆಯಾಗಿ ಎರಡೇ ತಿಂಗಳಿಗೆ ಹೆಚ್ಚಿನ ವರದಕ್ಷಿಣೆ ತರುವಂತೆ ಪರಮೇಶ್ ಅನುಷಾಳಿಗೆ ಕಿರುಕುಳ ನೀಡಲು ಶುರು ಮಾಡಿದ್ದ. ಆತನ ಕುಟುಂಬಕ್ಕೆ 10 ಎಕರೆ ಭೂಮಿ ಇದ್ದು, ಆರ್ಥಿಕ ವಿಚಾರದಲ್ಲಿ ಚೆನ್ನಾಗಿದ್ದಾರೆ. ಪರಮೇಶ್‌ನ ತಾಯಿ ಆಗಾಗ, “ಅನುಷಾಳ ಬದಲು ಬೇರೆ ಹುಡುಗಿಯನ್ನು ಮದುವೆಯಾಗಿದ್ದರೆ ಇನ್ನೂ ಹೆಚ್ಚಿನ ವರದಕ್ಷಿಣೆ ಸಿಗುತ್ತಿತ್ತು” ಎಂದು ಹೇಳುತ್ತಿದ್ದರು.
ಅನುಷಾಳ ಮೇಲೆ ಡಿಸೆಂಬರ್ 15ರಂದು ಹಲ್ಲೆ ನಡೆದಾಗ, ಆಸ್ಪತ್ರೆಯ ಅಧಿಕಾರಿಗಳು ಪೊಲೀಸ್ ದೂರು ನೀಡುವಂತೆ ಸಲಹೆ ಕೊಟ್ಟಿದ್ದರು. ಆದರೆ, ತನ್ನ ವೈವಾಹಿಕ ಜೀವನಕ್ಕೆ ಹೆಚ್ಚಿನ ಸಮಸ್ಯೆ ಆಗಬಹುದು ಎಂದು ಅನುಷಾ ದೂರು ನೀಡಲು ನಿರಾಕರಿಸಿದ್ದಳು ಎಂದು ಆಕೆಯ ತಾಯಿ ಮಾಧ್ಯಮಗಳಿಗೆ ಹೇಳಿದ್ದಾರೆ.
ವಿಕಾರಾಬಾದ್ ಪೊಲೀಸರು ಪರಮೇಶ್ ಮತ್ತು ಆತನ ಪೋಷಕರನ್ನು ಬಂಧಿಸಿದ್ದಾರೆ. ಪರಮೇಶ್ ವಿರುದ್ಧ ಕೊಲೆ, ವರದಕ್ಷಿಣೆ ಹತ್ಯೆ ಮತ್ತು ಮಹಿಳೆಯರ ಮೇಲಿನ ಕ್ರೌರ್ಯಕ್ಕೆ ಸಂಬಂಧಿಸಿದ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿದ್ದಾರೆ.


