ಇಸ್ರೇಲಿ ಪಡೆಗಳು ಆಕ್ರಮಿತ ಪಶ್ಚಿಮ ದಂಡೆಯಲ್ಲಿರುವ ಪಟ್ಟಣಗಳಿಗೆ ನುಗ್ಗಿ ಪ್ಯಾಲೆಸ್ತೀನಿಯರ ವಸತಿ ಕಟ್ಟಡಗಳನ್ನು ಕೆಡವಿ ಹಾಕಿದೆ ಎಂದು ಸುದ್ದಿ ಸಂಸ್ಥೆ ಅಲ್-ಜಝೀರಾ ವರದಿ ಮಾಡಿದೆ.
ಇದು ಗಾಝಾ ಕದನ ವಿರಾಮದ ಮೂಲಕ ಇಸ್ರೇಲ್ ಪ್ಯಾಲೆಸ್ತೀನಿಯರ ಮೇಲಿನ ಆಕ್ರಮಣ ನಿಲ್ಲಿಸಿಲ್ಲ ಎಂಬುವುದಕ್ಕೆ ಸಾಕ್ಷಿಯಾಗಿದೆ. ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಪ್ಯಾಲೆಸ್ತೀನಿಯರ ಮೇಲಿನ ನಿರಂತರ ದಾಳಿ ಮುಂದುವರಿದಿದೆ.
ಸೋಮವಾರ ಪೂರ್ವ ಜೆರುಸಲೆಮ್‌ನಲ್ಲಿ ಧ್ವಂಸ ಕಾರ್ಯವನ್ನು ನಡೆಸುತ್ತಿದ್ದಾಗ ಇಸ್ರೇಲಿ ಸೈನಿಕರು ಪ್ಯಾಲೆಸ್ತೀನಿಯರ ಮೇಲೆ ಸ್ಟನ್ ಗ್ರೆನೇಡ್ ಮತ್ತು ಅಶ್ರುವಾಯು ಸಿಡಿಸಿದ್ದಾರೆ ಎಂದು ಅಲ್-ಜಝೀರಾ ವರದಿ ಹೇಳಿದೆ.
ಜೆರುಸಲೆಂ ನಗರದಲ್ಲಿ ಇಸ್ರೇಲ್ ಬಲವಂತದ ಸ್ಥಳಾಂತರ ಕೈಗೊಂಡಿದೆ ಎಂದು ಪ್ಯಾಲೆಸ್ತೀನ್ ಅಧಿಕಾರಿಗಳು ಆರೋಪಿಸಿದ್ದು, ಈ ಕಾರ್ಯಾಚರಣೆಯು ಪ್ಯಾಲೆಸ್ತೀನಿಯರನ್ನು ಅವರ ಭೂಮಿಯಿಂದ ಜನಾಂಗೀಯವಾಗಿ ಶುದ್ಧೀಕರಿಸುವ ವ್ಯವಸ್ಥಿತ ಪ್ರಯತ್ನದ ಭಾಗವಾಗಿದೆ ಎಂದು ಹೇಳಿದ್ದಾರೆ.
ಸೋಮವಾರ ಇಸ್ರೇಲಿ ಬುಲ್ಡೋಜರ್‌ಗಳು ನಾಲ್ಕು ಅಂತಸ್ತಿನ ವಸತಿ ಕಟ್ಟಡವನ್ನು ಕೆಡವಿದ ಪರಿಣಾಮ ಪ್ಯಾಲೆಸ್ತೀನಿಯರು ಬಲವಂತವಾಗಿ ಸ್ಥಳಾಂತರಗೊಳ್ಳುವ ಸಂದರ್ಭ ಎದುರಾಯಿತು. ಹೋರಾಟಗಾರರು ಇದನ್ನು ಈ ವರ್ಷ ಪೂರ್ವ ಜೆರುಸಲೆಮ್ ಪ್ರದೇಶದಲ್ಲಿ ನಡೆದ ಅತಿದೊಡ್ಡ ಧ್ವಂಸ ಕಾರ್ಯಾಚರಣೆ ಎಂದು ತಿಳಿಸಿದ್ದಾರೆ.
ಜೆರುಸಲೆಮ್ ಓಲ್ಡ್ ಸಿಟಿಯ ದಕ್ಷಿಣದಲ್ಲಿರುವ ಸಿಲ್ವಾನ್ ಜಿಲ್ಲೆಯ ವಾಡಿ ಖದ್ದಮ್ ಸಮೀಪ 13 ಅಪಾರ್ಟ್‌ಮೆಂಟ್‌ಗಳಿಂದ ಮತ್ತೊಂದು ಕಟ್ಟಡ ಸಮೂಹವನ್ನು ಇಸ್ರೇಲಿ ಸೇನೆಯ ಮೂರು ಬುಲ್ಡೋಜರ್‌ಗಳು ನಾಶಪಡಿಸಿದವು ಎಂದು ಅಲ್ ಜಝೀರಾ ಅರೆಬಿಕ್ ವರದಿ ಮಾಡಿದೆ.
ಕಟ್ಟಡಗಳನ್ನು ಧ್ವಂಸಗೊಳಿಸುವ ವೇಳೆ ಇಸ್ರೇಲ್ ಪಡೆಗಳು ಇಡೀ ಪ್ರದೇಶವನ್ನು ಸುತ್ತುವರೆದಿದ್ದವು. ಪ್ರತಿಭಟಿಸಿದವರ ವಿರುದ್ದ ಹಿಂಸಾತ್ಮಕವಾಗಿ ಪ್ರತಿಕ್ರಿಯಿಸಿತು. ಧ್ವಂಸ ಕಾರ್ಯಾಚರಣೆಯನ್ನು ವಿರೋಧಿಸಿದ ಇಬ್ಬರನ್ನು ಬಂಧಿಸಿತು ಎಂದು ವರದಿ ಉಲ್ಲೇಖಿಸಿದೆ.
ಕಟ್ಟಡವನ್ನು ಪರವಾನಗಿ ಇಲ್ಲದೆ ನಿರ್ಮಿಸಲಾಗಿರುವುದರಿಂದ ಕೆಡವಲಾಗಿದೆ ಎಂದು ಇಸ್ರೇಲಿ ಸೇನೆ ನಿವಾಸಿಗಳಿಗೆ ಹೇಳಿದೆ ಎಂದು ವರದಿ ತಿಳಿಸಿದೆ.
ಇಸ್ರೇಲ್‌ನ ನಿರ್ಬಂಧಿತ ಯೋಜನಾ ನೀತಿಗಳಿಂದಾಗಿ ಕಟ್ಟಡ ಪರವಾನಗಿಗಳನ್ನು ಪಡೆಯುವಲ್ಲಿ ಪ್ಯಾಲೆಸ್ತೀನಿಯರು ತೀವ್ರ ಅಡೆತಡೆಗಳನ್ನು ಎದುರಿಸುತ್ತಿದ್ದಾರೆ ಎಂದು ಹೋರಾಟಗಾರರು ಹೇಳುತ್ತಾರೆ. ಇಸ್ರೇಲ್‌ನ ನೀತಿಯು ಪ್ಯಾಲೆಸ್ತೀನಿಯರನ್ನು ಅವರ ಭೂಮಿಯಿಂದ ಜನಾಂಗೀಯವಾಗಿ ನಿರ್ಮೂಲನೆ ಮಾಡುವ ವ್ಯವಸ್ಥಿತ ಪ್ರಯತ್ನದ ಭಾಗವಾಗಿದೆ ಎಂದಿದ್ದಾರೆ.
ಇಸ್ರೇಲ್‌ನ ಭದ್ರತಾ ಸಚಿವ ಸಂಪುಟವು ಇತ್ತೀಚೆಗೆ ಪಶ್ಚಿಮ ದಂಡೆಯಲ್ಲಿ 19 ಹೊಸ ವಸಾಹತುಗಳನ್ನು ಗುರುತಿಸಲು ಅನುಮೋದನೆ ನೀಡಿದೆ. ಸರ್ಕಾರವು ತನ್ನ ವಸಾಹತು ಪ್ರಯತ್ನವನ್ನು ಮುಂದುವರೆಸುತ್ತಿರುವುದರಿಂದ ಈ ವರ್ಷ ಅನುಮೋದಿಸಲಾದ ಒಟ್ಟು ಸಂಖ್ಯೆ 69ಕ್ಕೆ ಹೆಚ್ಚಳವಾಗಿದೆ.


