ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಆರ್‌ಎಸ್‌ಎಸ್‌ನ ಸಂಘಟನಾ ಶಕ್ತಿಯನ್ನು ಶ್ಲಾಘಿಸಿ ಹೇಳಿಕೆ ನೀಡಿರುವುದು ಪಕ್ಷದೊಳಗೆ ಮುಜುಗರ, ಅಸಮಾಧಾನ ಮತ್ತು ಅಪಸ್ವರಕ್ಕೆ ಕಾರಣವಾಗಿದೆ ಎಂಬ ಚರ್ಚೆಗಳು ನಡೆಯುತ್ತಿವೆ. ಆದರೆ, ಸಿಂಗ್ ಹೇಳಿಕೆಯನ್ನು ಕಾಂಗ್ರೆಸ್ ಹಿರಿಯ ನಾಯಕ ಹಾಗೂ ತಿರುವನಂತಪುರಂ ಸಂಸದ ಶಶಿ ತರೂರ್ ಭಾನುವಾರ (ಡಿ.28) ಬೆಂಬಲಿಸಿದ್ದಾರೆ. ಕಾಂಗ್ರೆಸ್‌ನೊಳಗೆ ಶಿಸ್ತು ಮತ್ತು ಆಂತರಿಕ ಸುಧಾರಣೆಗಳ ಅಗತ್ಯವಿದೆ ಎಂದಿದ್ದಾರೆ.
ಯಾವುದೇ ರಾಜಕೀಯ ಪಕ್ಷಕ್ಕೆ ಶಿಸ್ತು ಅತ್ಯಗತ್ಯ. ದೀರ್ಘ ಇತಿಹಾಸ ಹೊಂದಿರುವ ಕಾಂಗ್ರೆಸ್ ತನ್ನದೇ ಆದ ಈ ಹಿಂದಿನ ಅನುಭವದಿಂದ ಕಲಿಯಬೇಕಾದದ್ದು ಬಹಳಷ್ಟಿದೆ ಎಂದು ತರೂರ್ ಹೇಳಿದ್ದಾರೆ.
“ನಮಗೆ 140 ವರ್ಷಗಳ ಇತಿಹಾಸವಿದೆ, ನಾವು ಅದರಿಂದ ಬಹಳಷ್ಟು ಕಲಿಯಬಹುದು. ನಾವು ನಮ್ಮಿಂದಲೂ ಕಲಿಯಬಹುದು. ಯಾವುದೇ ಪಕ್ಷದಲ್ಲಿ ಶಿಸ್ತು ಬಹಳ ಮುಖ್ಯ. ನಮ್ಮ ಸಂಘಟನೆ ಬಲಗೊಳ್ಳಬೇಕೆಂದು ನಾನು ಬಯಸುತ್ತೇನೆ. ನಮ್ಮ ಸಂಘಟನೆಯಲ್ಲಿ ಶಿಸ್ತು ಇರಬೇಕು. ದಿಗ್ವಿಜಯ ಸಿಂಗ್ ಸ್ವತಃ ಮಾತನಾಡಬಲ್ಲರು” ಎಂದು ಶಶಿ ತರೂರ್ ಹೇಳಿಕೆ ನೀಡಿದ್ದಾರೆ.
“ರಾಜಕೀಯ ಸವಾಲುಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಎದುರಿಸಲು ಕಾಂಗ್ರೆಸ್ ಆಂತರಿಕ ಶಿಸ್ತು ಮತ್ತು ಸಂಘಟನಾತ್ಮಕ ಬಲವನ್ನು ಸುಧಾರಿಸುವತ್ತ ಗಮನಹರಿಸಬೇಕು” ಎಂದು ತಿಳಿಸಿದ್ದಾರೆ.
ಹೇಳಿಕೆ ವಿವಾದ ಸ್ವರೂಪ ಪಡೆದ ಬಳಿಕ ದಿಗ್ವಿಜಯ ಸಿಂಗ್ ಜೊತೆ ಮಾತನಾಡಿದ್ದೀರಾ? ಎಂದು ಕೇಳಿದ್ದಕ್ಕೆ, “ನಮ್ಮ ನಡುವಿನ ಮಾತುಕತೆಗಳು ಸ್ವಾಭಾವಿಕ. ನಾವು ಸ್ನೇಹಿತರು, ಪರಸ್ಪರ ಮಾತುಕತೆ ನಡೆಸುವುದು ಸಹಜ. ಸಂಘಟನೆಯನ್ನು ಬಲಪಡಿಸಬೇಕು, ಅದರ ಬಗ್ಗೆ ಯಾವುದೇ ಸಂದೇಹವಿಲ್ಲ” ಎಂದು ಹೇಳಿದ್ದಾರೆ.
ದಿಗ್ವಿಜಯ ಸಿಂಗ್ ಅವರು “1995ರಲ್ಲಿ ಪ್ರಧಾನಿ ನರೇಂದ್ರ ಮೋದಿ ಬಿಜೆಪಿಯ ಹಿರಿಯ ನಾಯಕ ಎಲ್.ಕೆ ಅಡ್ವಾಣಿ ಬಳಿ ನೆಲದ ಮೇಲೆ ಕುಳಿತಿದ್ದ ಫೋಟೋವನ್ನು ಶನಿವಾರ ಹಂಚಿಕೊಂಡಿದ್ದರು. ಆರ್‌ಎಸ್‌ಎಸ್ ಮತ್ತು ಬಿಜೆಪಿಯಲ್ಲಿನ ತಳಮಟ್ಟದ ಕಾರ್ಯಕರ್ತರು ಉನ್ನತ ಸ್ಥಾನಗಳಿಗೆ ಹೇಗೆ ಏರಬಹುದು ಎಂಬುದನ್ನು ಈ ಫೋಟೋ ಪ್ರತಿಬಿಂಬಿಸುತ್ತದೆ ಎಂದು ಸಿಂಗ್ ತಮ್ಮ ಪೋಸ್ಟ್‌ನಲ್ಲಿ ಹೇಳಿದ್ದರು. ಇದನ್ನು ‘ಸಂಘಟನೆಯ ಶಕ್ತಿ’ ಎಂದು ಬಣ್ಣಿಸಿದ್ದರು. ಸಿಂಗ್ ಅವರ ಈ ಪೋಸ್ಟ್ ಕಾಂಗ್ರೆಸ್‌ಗೆ ಮುಜುಗರ ಉಂಟು ಮಾಡಿದೆ. ಪಕ್ಷದೊಳಗೆ ಅಸಮಾಧನಕ್ಕೆ ಕಾರಣವಾಗಿದೆ.
ತರೂರ್ ಹೇಳಿಕೆಗೆ ತಿರುಗೇಟು ಕೊಟ್ಟಿರುವ ಕಾಂಗ್ರೆಸ್ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಅಧ್ಯಕ್ಷ ಪವನ್ ಖೇರಾ ಸಿಂಗ್, ಆರ್‌ಎಸ್‌ಎಸ್‌ನಿಂದ ಕಲಿಯಲು ಏನೂ ಇಲ್ಲ ಎಂದಿದ್ದಾರೆ. ಖೇರಾ ಅವರು ಗಾಂಧಿ ಹಂತಹ ನಾತೂರಾಮ್ ಗೋಡ್ಸೆ ಮತ್ತು ಆರ್‌ಎಸ್‌ಸ್ ನಡುವಿನ ಸಂಬಂಧವನ್ನು ಉಲ್ಲೇಖಿಸಿದ್ದಾರೆ.
“ಆರ್‌ಎಸ್‌ಎಸ್‌ನಿಂದ ಕಲಿಯಲು ಏನೂ ಇಲ್ಲ. ಗೋಡ್ಸೆಗೆ ಹೆಸರುವಾಸಿಯಾದ ಸಂಘಟನೆಯು ಗಾಂಧಿ ಸ್ಥಾಪಿಸಿದ ಸಂಘಟನೆಗೆ ಏನು ಕಲಿಸಲು ಸಾಧ್ಯ?” ಎಂದು ಖೇರಾ ಪ್ರಶ್ನಿಸಿದ್ದಾರೆ.
ದಿಗ್ವಿಜಯ್ ಸಿಂಗ್ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್, ವಿರೋಧ ಪಕ್ಷವು ಒಗ್ಗಟ್ಟಾಗಿದೆ. ಆದರೆ, ಪ್ರತಿಯೊಬ್ಬರಿಗೂ ತಮ್ಮದೇ ಆದ ಅಭಿಪ್ರಾಯವನ್ನು ಹೊಂದುವ, ವ್ಯಕ್ತಪಡಿಸುವ ಹಕ್ಕಿದೆ ಎಂದು ಹೇಳಿದ್ದಾರೆ.


