ಉನ್ನಾವೋ ಅತ್ಯಾಚಾರ ಪ್ರಕರಣದ ಅಪರಾಧಿ, ಬಿಜೆಪಿ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್‌ನ ಜೀವಾವಧಿ ಶಿಕ್ಷೆ ಅಮಾನತ್ತಿನಲ್ಲಿಟ್ಟಿರುವುದನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿರುವ ಅರ್ಜಿಯ ವಿಚಾರಣೆ ಇಂದು (ಡಿ.29) ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಮತ್ತು ಆಗಸ್ಟೀನ್ ಜಾರ್ಜ್ ಮಸಿಹ್ ಅವರನ್ನೊಳಗೊಂಡ ಮೂವರು ನ್ಯಾಯಾಧೀಶರ ರಜಾ ಕಾಲದ ಪೀಠವು ಅರ್ಜಿ ವಿಚಾರಣೆ ನಡೆಸುವ ಸಾಧ್ಯತೆಯಿದೆ ಎಂದು ಪಿಟಿಐ ವರದಿ ಮಾಡಿದೆ.
ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ, ಅದಕ್ಕೆ ತಡೆ ನೀಡುವಂತೆ ಕೋರಿ ವಕೀಲರಾದ ಅಂಜಲೆ ಪಟೇಲ್ ಮತ್ತು ಪೂಜಾ ಶಿಲ್ಪಕರ್ ಸಲ್ಲಿಸಿರುವ ಪ್ರತ್ಯೇಕ ಅರ್ಜಿಯನ್ನೂ ಸುಪ್ರೀಂ ಕೋರ್ಟ್ ಇಂದು ವಿಚಾರಣೆ ನಡೆಸಲಿದೆ.
ಸಿಬಿಐ ತನ್ನ ಮೇಲ್ಮನವಿಯಲ್ಲಿ, ಎಲ್.ಕೆ ಅಡ್ವಾಣಿ ಪ್ರಕರಣದ ತೀರ್ಪನ್ನು ಉಲ್ಲೇಖಿಸಿದೆ. ಸಂಸದರು ಅಥವಾ ಶಾಸಕರಂತಹ ಸಾರ್ವಜನಿಕ ಹುದ್ದೆಯನ್ನು ಹೊಂದಿರುವವರನ್ನು ಸಾರ್ವಜನಿಕ ಸೇವಕರೆಂದು ಪರಿಗಣಿಸಲಾಗುತ್ತದೆ. ಅಪರಾಧ ನಡೆದ ಸಮಯದಲ್ಲಿ ಶಾಸಕರಾಗಿದ್ದ ಕುಲದೀಪ್ ಸಿಂಗ್ ಸೆಂಗಾರ್ ಅವರನ್ನು ಪೋಕ್ಸೊ ಅಡಿಯಲ್ಲಿ ವಿಚಾರಣೆಗೆ ಒಳಪಡಿಸಲು ಸಾರ್ವಜನಿಕ ಸೇವಕರಲ್ಲ ಎಂದು ಘೋಷಿಸುವ ಮೂಲಕ ಹೈಕೋರ್ಟ್ ತಪ್ಪು ಮಾಡಿದೆ ಮತ್ತು ಅವರಿಗೆ ಜಾಮೀನು ನೀಡಿದೆ ಎಂದು ವಾದಿಸಿದೆ.
ಸಾಂವಿಧಾನಿಕ ಹುದ್ದೆಯನ್ನು ಹೊಂದುವ ಮೂಲಕ ಹಾಲಿ ಶಾಸಕರೊಬ್ಬರು ಮತದಾರರ ಮೇಲೆ ಸಾರ್ವಜನಿಕ ನಂಬಿಕೆ ಮತ್ತು ಅಧಿಕಾರವನ್ನು ಹೊಂದಿದ್ದಾರೆ ಮತ್ತು ಅಂತಹ ಸ್ಥಾನವು ರಾಜ್ಯ ಮತ್ತು ಸಮಾಜಕ್ಕೆ ನೀಡಬೇಕಾದ ಕರ್ತವ್ಯಗಳಿಂದ ಉಂಟಾಗುವ ಹೆಚ್ಚಿನ ಜವಾಬ್ದಾರಿಯನ್ನು ಹೊಂದಿದೆ ಎಂಬುದನ್ನು ಪರಿಗಣಿಸಲು ಹೈಕೋರ್ಟ್ ವಿಫಲವಾಗಿದೆ” ಎಂದು ಸಿಬಿಐ ಮೇಲ್ಮನವಿಯಲ್ಲಿ ತಿಳಿಸಿದೆ.
ಒಬ್ಬ ಶಾಸಕನಾಗಿರುವ ವ್ಯಕ್ತಿ ಸಾಂವಿಧಾನಿಕ ಪದವಿಯನ್ನು ಹೊಂದಿರುವುದರಿಂದ ಜನತೆಯ ಮೇಲೆ ವಿಶೇಷ ನಂಬಿಕೆ ಮತ್ತು ಅಧಿಕಾರ ಇರುತ್ತದೆ. ಆದ್ದರಿಂದ ಆತ ರಾಜ್ಯ ಮತ್ತು ಸಮಾಜದ ಮೇಲೆ ಹೆಚ್ಚಿನ ಜವಾಬ್ದಾರಿ ಹೊಂದಿರುತ್ತಾನೆ. ಆದರೆ ಹೈಕೋರ್ಟ್ ಈ ಅಂಶವನ್ನು ಗಮನಿಸದೆ ಜಾಮೀನು ನೀಡಿದೆ ಎಂದು ಸಿಬಿಐ ಹೇಳಿದೆ.
ಮಕ್ಕಳಿಗೆ ಲೈಂಗಿಕ ದೌರ್ಜನ್ಯದಿಂದ ರಕ್ಷಣೆ ನೀಡುವುದು ಮತ್ತು ಅಧಿಕಾರದ ಸ್ಥಾನದಲ್ಲಿರುವವರು ದುರ್ಬಳಕೆ ಮಾಡಿದರೆ ಕಠಿಣ ಶಿಕ್ಷೆ ವಿಧಿಸುವುದು ಪೋಕ್ಸೋ ಕಾಯ್ದೆಯ ಮುಖ್ಯ ಉದ್ದೇಶ. ಆದರೆ, ಹೈಕೋರ್ಟ್ ಈ ಕಾಯ್ದೆಯನ್ನು ಅಕ್ಷರಶಃ ಉದ್ದೇಶಪೂರ್ವಕವಾಗಿ ವ್ಯಾಖ್ಯಾನಿಸದೆ ತಪ್ಪು ನಿರ್ಧಾರ ಕೈಗೊಂಡಿದೆ ಎಂದು ಸಿಬಿಐ ಆಕ್ಷೇಪಿಸಿದೆ.


