ಉತ್ತರ ಪ್ರದೇಶದ ಗಾಝಿಯಾಬಾದ್‌ನ ಶಾಲಿಮಾರ್ ಗಾರ್ಡನ್ ಕಾಲೋನಿಯಲ್ಲಿ ತಲವಾರು ವಿತರಿಸಿದ ಆರೋಪದ ಮೇಲೆ ಹಿಂದೂ ರಕ್ಷಾ ದಳದ ಹತ್ತು ದುಷ್ಕರ್ಮಿಗಳನ್ನು ಪೊಲೀಸರು ಸೋಮವಾರ (ಡಿ.29) ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಶಾಲಿಮಾರ್ ಗಾರ್ಡನ್ ಸಹಾಯಕ ಪೊಲೀಸ್ ಆಯುಕ್ತ ಅತುಲ್ ಕುಮಾರ್ ಸಿಂಗ್ ಮಾತನಾಡಿ, ಗುರುತಿಸಲಾದ 16 ಮಂದಿ ಮತ್ತು 25-30 ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದಿದ್ದಾರೆ.
ಹಿಂದೂ ರಕ್ಷಾ ದಳದ ರಾಷ್ಟ್ರೀಯ ಅಧ್ಯಕ್ಷ ಭೂಪೇಂದ್ರ ಚೌಧರಿ ಅಲಿಯಾಸ್ ಪಿಂಕಿ ಕೂಡ ಎಫ್‌ಐಆರ್‌ನಲ್ಲಿ ಹೆಸರಿಸಲಾದವರಲ್ಲಿ ಸೇರಿದ್ದಾರೆ ಎಂದು ಸಿಂಗ್ ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಹಿಂದುತ್ವ ಗುಂಪಿನ ಸದಸ್ಯರು ತಲವಾರು ಪ್ರದರ್ಶಿಸಿದ ಮತ್ತು ಹಂಚಿದ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ನಂತರ ಆರೋಪಿಗಳನ್ನು ಬಂಧಿಸಲಾಗಿದೆ.
“ಬಾಂಗ್ಲಾದೇಶದಲ್ಲಿ ನಮ್ಮ ಹಿಂದೂ ಸಹೋದರರನ್ನು ಕೊಲ್ಲಲಾಗಿರುವ ರೀತಿ… ಹಿಂದೂಗಳು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಕತ್ತಿಗಳನ್ನು ಇಟ್ಟುಕೊಳ್ಳಬೇಕು. ಪ್ರತಿಯೊಬ್ಬ ಜಿಹಾದಿಗೂ ಹಿಂದೂ ರಕ್ಷಾ ದಳವು ಅವರದೇ ಭಾಷೆಯಲ್ಲಿ ಪ್ರತಿಕ್ರಿಯಿಸುತ್ತದೆ” ಎಂದು ಚೌಧರಿ ಒಂದು ವಿಡಿಯೋದಲ್ಲಿ ಹೇಳುತ್ತಿರುವುದು ಇದೆ.
ಡಿಸೆಂಬರ್ 18ರಂದು ಬಾಂಗ್ಲಾದೇಶದ ಮೈಮೆನ್ಸಿಂಗ್ ಜಿಲ್ಲೆಯಲ್ಲಿ ದೇವದೂಷಣೆಯ ಆರೋಪದ ಮೇಲೆ ಗುಂಪೊಂದು ಥಳಿಸಿ ಕೊಂದ ಕಾರ್ಖಾನೆಯ ಕಾರ್ಮಿಕ ದೀಪು ಚಂದ್ರ ದಾಸ್ ಅವರ ಹತ್ಯೆಯನ್ನು ಚೌಧರಿ ಉಲ್ಲೇಖಿಸಿದ್ದಾರೆ.
ಎಫ್‌ಐಆರ್ ಪ್ರಕಾರ, ಹಿಂದೂ ರಕ್ಷಾ ದಳದ ಸದಸ್ಯರು ಆಯುಧಗಳೊಂದಿಗೆ ಪ್ರದೇಶದಲ್ಲಿ ರ‍್ಯಾಲಿ ನಡೆಸುವಾಗ ಕೋಮುವಾದಿ ಘೋಷಣೆಗಳನ್ನು ಕೂಗಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಗಲಭೆ, ಮಾರಕ ಆಯುಧಗಳಿಂದ ಗಲಭೆ ಸೇರಿದಂತೆ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಕಾಯ್ದೆಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ.
ಸಾಕ್ಷ್ಯಾಧಾರಗಳ ಆಧಾರದ ಮೇಲೆ ಹೆಚ್ಚಿನ ಆರೋಪಗಳನ್ನು ಸೇರಿಸಬಹುದು ಮತ್ತು ಉಳಿದ ಆರೋಪಿಗಳನ್ನು ಪತ್ತೆಹಚ್ಚಲು ಪ್ರಯತ್ನಗಳು ನಡೆಯುತ್ತಿವೆ ಎಂದು ಉಪ ಪೊಲೀಸ್ ಆಯುಕ್ತ ನಿಮಿಷ್ ಪಾಟೀಲ್ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
“ಯಾವುದೇ ಸಂಘಟನೆಯು ಸಾಮರಸ್ಯ ಮತ್ತು ಕಾನೂನು ಸುವ್ಯವಸ್ಥೆಯನ್ನು ಕದಡಲು ಪೊಲೀಸರು ಅನುಮತಿಸುವುದಿಲ್ಲ”ಎಂದು ಅವರು ತಿಳಿಸಿದ್ದಾರೆ.


