ಮಾದಿಗ ಸಮುದಾಯದ ಯುವಕನನ್ನು ಮದುವೆಯಾಗಿದ್ದಕ್ಕೆ ತಂದೆಯಿಂದಲೇ ಭೀಕರವಾಗಿ ಹತ್ಯೆಗೀಡಾದ ಗರ್ಭಿಣಿ ಯುವತಿ ಮಾನ್ಯ ಪಾಟೀಲ್ ಅವರ ಪತಿ ವಿವೇಕಾನಂದ ಮತ್ತು ಹಲ್ಲೆಗೆ ಒಳಗಾದ ಕುಟುಂಬದ ಸದಸ್ಯರನ್ನು ಹಿರಿಯ ದಲಿತ ನಾಯಕ ಮಾವಳ್ಳಿ ಶಂಕರ್ ಭೇಟಿಯಾಗಿ ಸಾಂತ್ವನ ಹೇಳಿದರು.
ಹುಬ್ಬಳ್ಳಿಯ ತಾಲ್ಲೂಕಿನ ಇನಾಮ್ ಇರಾಪುರ ಗ್ರಾಮಕ್ಕೆ ಸೋಮವಾರ (29-12-2026) ರಂದು ಭೇಟಿ ನೀಡಿದ ದಲಿತ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಪ್ರಧಾನ ಸಂಚಾಲಕರಾದ ಮಾವಳ್ಳಿ ಶಂಕರ್, “ಈ ಘಟನೆಯನ್ನು ನಾವೆಲ್ಲರೂ ಖಂಡಿಸುತ್ತೇವೆ. ತಂದೆಯಿಂದಲೇ ಕೊಲೆಯಾದ ಮಹಿಳೆಗೆ ನ್ಯಾಯ ಸಿಗಬೇಕು. ಕೊಂದವರಿಗೆ ಗಲ್ಲು ಶಿಕ್ಷೆ ಯಾಗಗುವಂತೆ, ಅವರು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳದಂತೆ ಪೊಲೀಸ್ ಇಲಾಖೆ ನೋಡಿಕೊಳ್ಳಬೇಕು. ಅನ್ಯಾಯಕ್ಕೆ ಒಳಗಾದ ಕುಟುಂಬಕ್ಕೆ ರಕ್ಷಣೆ ಕೊಡುವ ಜೊತೆಗೆ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಬೇಕು” ಎಂದು ಆಗ್ರಹಿಸಿದರು.
“ಲಿಂಗಾಯಿತ ಸಮುದಾಯದ ಯುವತಿ ಮಾನ್ಯ ಎಂಬಾಕೆ ದಲಿತ ಯುವಕ ವಿವೇಕಾನಂದನನ್ನು ವಿವಾಹವಾಗಿದ್ದ ಕಾರಣಕ್ಕೆ ಆಕೆ ಗರ್ಭಿಣಿಯಿದ್ದಾಗಲೇ ತಂದೆ ಪ್ರಕಾಶಗೌಡ ಪಾಟೀಲ್ ಬರ್ಬರವಾಗಿ ಕೊಲೆ ಮಾಡಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತದ್ದು. ಮರ್ಯಾದೆಗೇಡು ಹತ್ಯೆಗಳ ನಿಗ್ರಹಕ್ಕಾಗಿ ಸರ್ಕಾರ ಕೂಡಲೇ ಪ್ರತ್ಯೇಕ ಮತ್ತು ಕಟ್ಟುನಿಟ್ಟಿನ ಕಾಯ್ದೆ ರೂಪಿಸಬೇಕು” ಎಂದು ಅವರು ಈ ಸಂದರ್ಭದಲ್ಲಿ ಒತ್ತಾಯಿಸಿದರು.
“ಮರ್ಯಾದೆ ಹೆಸರಿನಲ್ಲಿ ನಡೆಯುತ್ತಿರುವ ಇಂತಹ ಹತ್ಯೆಗಳಲ್ಲಿ ಯಾವುದೇ ಗೌರವ ಅಡಗಿಲ್ಲ, ಇದೊಂದು ಜಾತಿಗ್ರಸ್ತ ಸಮಾಜ ಎಸಗುವ ಕ್ರೂರ ಕೊಲೆಯಷ್ಟೇ. ಜಾತಿ ಮತ್ತು ಪಿತೃಪ್ರಭುತ್ವದ ಅಹಂನಿಂದ ಮಹಿಳೆಯರ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಸ್ವಂತ ಮಗಳ ಜೀವ ತೆಗೆಯುವುದು ಜಾತಿ ವ್ಯವಸ್ಥೆಯ ಕ್ರೌರ್ಯದ ಪರಮಾವಧಿಯಾಗಿದ್ದು, ಇಂತಹ ಕೃತ್ಯಗಳು ಸಂವಿಧಾನದ ಆಶಯಗಳಾದ ಸಮಾನತೆ ಮತ್ತು ಭ್ರಾತೃತ್ವಕ್ಕೆ ದೊಡ್ಡ ಹೊಡೆತ ನೀಡುತ್ತಿವೆ” ಎಂದು ಅವರು ವಿಷಾದ ವ್ಯಕ್ತಪಡಿಸಿದರು.

“ಸುಪ್ರೀಂ ಕೋರ್ಟ್ ಮರ್ಯಾದೆ ಹತ್ಯೆಗಳನ್ನು ಅನಾಗರಿಕ ಕೃತ್ಯ ಎಂದು ಕರೆದಿದ್ದರೂ, ಜಾತಿ ರಾಜಕಾರಣದಲ್ಲಿ ಮುಳುಗಿರುವ ಸರ್ಕಾರಗಳು ಇಂತಹ ವ್ಯವಸ್ಥೆಯನ್ನು ಪೋಷಿಸುತ್ತಿವೆ. ಅಂತರ್ಜಾತಿ ವಿವಾಹಗಳು ರಾಷ್ಟ್ರೀಯ ಹಿತಾಸಕ್ತಿಯನ್ನು ಬಲಪಡಿಸುತ್ತವೆ ಎಂದು ನ್ಯಾಯಾಲಯ ಹೇಳಿದ್ದರೂ, ಇಂತಹ ಹೇಯ ಕೃತ್ಯಗಳು ಮರುಕಳಿಸುತ್ತಿರುವುದು ಸರ್ಕಾರದ ವೈಫಲ್ಯಕ್ಕೆ ಸಾಕ್ಷಿಯಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಹತ್ಯೆಯಾದ ಮಾನ್ಯ ಪತಿ ವಿವೇಕಾನಂದ ದೊಡ್ಡಮನಿ, ದಸಂಸ ರಾಜ್ಯ ಸಂಘಟನಾ ಸಂಚಾಲಕರಾದ ರಾಮಣ್ಣ ಕಲ್ಲದೇವನಹಳ್ಳಿ, ರಾಜ್ಯ ಸಮಿತಿ ಸದಸ್ಯರಾದ ನಾಗಣ್ಣ ಬಡಿಗೇರ, ದಸಂಸ ಧಾರವಾಡ ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ ಶರೇವಾಡ, ಲಕ್ಷ್ಮಣ ದೊಡ್ಡಮನಿ, ಭರತರಾಜ ಅರವೇಡ ಸೇರಿದಂತೆ ಸಂಘಟನೆಯ ಹಲವು ಪದಾಧಿಕಾರಿಗಳು ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.


