ಈಶಾನ್ಯ ರಾಜ್ಯಗಳು ಮತ್ತು ಇತರ ಗಡಿ ಪ್ರದೇಶಗಳ ನಾಗರಿಕರ ಮೇಲಿನ ಜನಾಂಗೀಯ ತಾರತಮ್ಯ ಮತ್ತು ಹಿಂಸಾಚಾರವನ್ನು ತಡೆಗಟ್ಟುವಲ್ಲಿ, ಪ್ರತಿಕ್ರಿಯಿಸುವಲ್ಲಿ ನಿರಂತರ ಸಾಂವಿಧಾನಿಕ ವೈಫಲ್ಯವನ್ನು ಪರಿಹರಿಸಲು ನ್ಯಾಯಾಂಗ ಹಸ್ತಕ್ಷೇಪವನ್ನು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಕೆಯಾಗಿದೆ.
ಡಿಸೆಂಬರ್ 27 ರಂದು ಡೆಹ್ರಾಡೂನ್‌ನ ಸೆಲಾಕಿ ಪ್ರದೇಶದಲ್ಲಿ ಜನಾಂಗೀಯ ಪ್ರೇರಿತ ದಾಳಿಯಲ್ಲಿ ತೀವ್ರ ಗಾಯಗೊಂಡು ಸಾವನ್ನಪ್ಪಿದ ತ್ರಿಪುರಾದ 24 ವರ್ಷದ ಎಂಬಿಎ ವಿದ್ಯಾರ್ಥಿ ಅಂಜೆಲ್ ಚಕ್ಮಾ ಅವರ ಕ್ರೂರ ಹತ್ಯೆಯ ನಂತರ ಡಿಸೆಂಬರ್ 28 ರಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವ ಸುದ್ದಿ ಬಂದಿದೆ.
ಉನಕೋಟಿ ಜಿಲ್ಲೆಯ ಮಚ್ಮಾರಾ ನಿವಾಸಿ ಅಂಜೆಲ್, ಅಗರ್ತಲಾದ ಹೋಲಿ ಕ್ರಾಸ್ ಶಾಲೆಯಲ್ಲಿ ಪದವಿ ಮುಗಿಸಿದ ನಂತರ ಎಂಬಿಎ ಓದಲು ಡೆಹ್ರಾಡೂನ್‌ಗೆ ತೆರಳಿದ್ದರು. ಅವರ ಕಿರಿಯ ಸಹೋದರ ಮೈಕೆಲ್ ಇದ್ದಾಗಲೇ ಅವರನ್ನು ಇರಿದು ಕೊಲ್ಲಲಾಯಿತು. ಘಟನೆಯಲ್ಲಿ ಭಾಗಿಯಾಗಿರುವ ಎಲ್ಲಾ ಆರೋಪಿಗಳಿಗೆ ಮರಣದಂಡನೆ ಅಥವಾ ಕನಿಷ್ಠ ಜೀವಾವಧಿ ಶಿಕ್ಷೆ ವಿಧಿಸಬೇಕೆಂದು ಚಕ್ಮಾ ಕುಟುಂಬ ಒತ್ತಾಯಿಸಿದೆ.
ದೆಹಲಿ ಮೂಲದ ವಕೀಲ ಅನೂಪ್ ಪ್ರಕಾಶ್ ಅವಸ್ಥಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಕೇಂದ್ರ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಈ ಅರ್ಜಿಯಲ್ಲಿ ಕಕ್ಷಿದಾರರನ್ನಾಗಿ ಮಾಡಿದೆ.
“ಸಂವಿಧಾನದ 32 ನೇ ವಿಧಿಯ ಅಡಿಯಲ್ಲಿ ಈ ರಿಟ್ ಅರ್ಜಿಯನ್ನು ಸಲ್ಲಿಸಲಾಗುತ್ತಿದೆ, ಇದು ಆರ್ಟಿಕಲ್ 14, 19(1)(ಎ) ಮತ್ತು (ಜಿ), ಮತ್ತು 21 ರ ಅಡಿಯಲ್ಲಿ ಮೂಲಭೂತ ಹಕ್ಕುಗಳ ಉಲ್ಲಂಘನೆಗಾಗಿ ರಿಟ್, ನಿರ್ದೇಶನಗಳು ಅಥವಾ ಆದೇಶಗಳನ್ನು ಹೊರಡಿಸಲು ಕೋರುತ್ತದೆ. ಇದರಿಂದಾಗಿ ಈಶಾನ್ಯ ರಾಜ್ಯಗಳು ಮತ್ತು ಇತರ ಗಡಿ ಪ್ರದೇಶಗಳ ಭಾರತೀಯ ನಾಗರಿಕರ ವಿರುದ್ಧ ಜನಾಂಗೀಯ ತಾರತಮ್ಯ ಮತ್ತು ಹಿಂಸಾಚಾರವನ್ನು ಪರಿಹರಿಸಲು ನ್ಯಾಯಾಂಗ ಹಸ್ತಕ್ಷೇಪವನ್ನು ಕೋರುತ್ತದೆ” ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಅರ್ಜಿಯಲ್ಲಿ ಅಂಜೆಲ್ ಚಕ್ಮಾ ಅವರ ಕೊನೆಯ ಮಾತುಗಳು: “ನಾವು ಭಾರತೀಯರು… ಅದನ್ನು ಸಾಬೀತುಪಡಿಸಲು ನಾವು ಯಾವ ಪ್ರಮಾಣಪತ್ರವನ್ನು ತೋರಿಸಬೇಕು” ಎಂಬ ಹೇಳಿಕೆಯನ್ನು ಹೈಲೈಟ್ ಮಾಡಲಾಗಿದೆ. ಘರ್ಷಣೆಯು ಮಾರಕ ಹಿಂಸಾಚಾರಕ್ಕೆ ಕಾರಣವಾಗುವ ಮೊದಲು ಅವರ ಸಾಂವಿಧಾನಿಕ ಸಂಬಂಧವನ್ನು ದುರಂತವಾಗಿ ಪ್ರತಿಬಿಂಬಿಸುವ ಹೇಳಿಕೆ ಇದಾಗಿದೆ.
ಅರ್ಜಿಯ ಪ್ರಕಾರ, ದಾಳಿಕೋರರು ಇಬ್ಬರೂ ಸಹೋದರರ ಮೇಲೆ ಹಲ್ಲೆ ನಡೆಸಿ ಇರಿದಿದ್ದಾರೆ ಎಂದು ಆರೋಪಿಸಲಾಗಿದೆ. ಅಂಜೆಲ್ ಅವರ ಕುತ್ತಿಗೆ ಮತ್ತು ಬೆನ್ನುಮೂಳೆಗೆ ತೀವ್ರ ಗಾಯಗಳಾಗಿದ್ದವು, ಚಿಕಿತ್ಸೆಯ ಸಮಯದಲ್ಲಿ ಪ್ರಜ್ಞಾಹೀನರಾಗಿದ್ದರು. ತೀವ್ರ ನಿಗಾದಲ್ಲಿ ಹದಿನಾಲ್ಕು ದಿನಗಳಿಗೂ ಹೆಚ್ಚು ಕಾಲ ಕಳೆದ ನಂತರ ನಿಧನರಾದರು. ಅವರ ಸಾವು ದೇಶಾದ್ಯಂತ ವ್ಯಾಪಕ ಪ್ರತಿಭಟನೆಗಳು ಮತ್ತು ನ್ಯಾಯದ ಬೇಡಿಕೆಗಳನ್ನು ಹುಟ್ಟುಹಾಕಿತು.
ಕಾನೂನು ರೂಪಿಸುವವರೆಗೆ ಕನಿಷ್ಠ ಮಧ್ಯಂತರವಾಗಿ ಸೂಕ್ತ ರಿಟ್ ಹೊರಡಿಸುವಂತೆ, ಸಮಗ್ರ ಮಾರ್ಗಸೂಚಿಗಳನ್ನು ರೂಪಿಸಲು, ಜನಾಂಗೀಯ ನಿಂದನೆಯನ್ನು ದ್ವೇಷ ಅಪರಾಧಗಳ ಪ್ರತ್ಯೇಕ ವರ್ಗವೆಂದು ಗುರುತಿಸಲು ಮತ್ತು ಅದಕ್ಕೆ ಅನುಗುಣವಾದ ಶಿಕ್ಷೆ ಪ್ರಮಾಣ ನಿರ್ಧರಿಸಬೇಕು ಎಂದು ನ್ಯಾಯಾಲಯವನ್ನು ಒತ್ತಾಯಿಸಲಾಗಿದೆ.
ಜನಾಂಗೀಯ ಅಪರಾಧಗಳನ್ನು ವರದಿ ಮಾಡಲು, ಅದನ್ನು ಪರಿಹರಿಸಲು ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ನೋಡಲ್ ಏಜೆನ್ಸಿ, ಶಾಶ್ವತ ಸಂಸ್ಥೆ, ಆಯೋಗ ಅಥವಾ ನಿರ್ದೇಶನಾಲಯವನ್ನು ರಚಿಸಬೇಕು. ಅಂತಹ ಅಪರಾಧಗಳನ್ನು ಪರಿಹರಿಸಲು ಪ್ರತಿ ಜಿಲ್ಲೆ ಮತ್ತು ಮಹಾನಗರ ಪ್ರದೇಶದಲ್ಲಿ ಮೀಸಲಾದ ವಿಶೇಷ ಪೊಲೀಸ್ ಘಟಕಗಳನ್ನು ಸ್ಥಾಪಿಸಲು ಕೇಂದ್ರ ಮತ್ತು ರಾಜ್ಯಗಳಿಗೆ ನಿರ್ದೇಶನಗಳನ್ನು ನೀಡುವಂತೆಯೂ ಅರ್ಜಿಯಲ್ಲಿ ಕೋರಿದೆ.
ಇದಲ್ಲದೆ, ಜನಾಂಗೀಯ ತಾರತಮ್ಯ ಮತ್ತು ಅದರ ಪರಿಹಾರದ ಕುರಿತು ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯಾಗಾರಗಳು, ಚರ್ಚೆಗಳನ್ನು ಆಯೋಜಿಸಲು ಮನವಿಯಲ್ಲಿ ಕರೆ ನೀಡಲಾಗಿದೆ.
ಭಾರತದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯು ಪ್ರಸ್ತುತ ತನಿಖೆಯ ಆರಂಭಿಕ ಹಂತದಲ್ಲಿ ಜನಾಂಗೀಯ ಪಕ್ಷಪಾತವನ್ನು ಗುರುತಿಸಲು ಅಥವಾ ದಾಖಲಿಸಲು ಕಾರ್ಯವಿಧಾನವನ್ನು ಹೊಂದಿಲ್ಲ, ಇದರ ಪರಿಣಾಮವಾಗಿ ಅಂತಹ ಅಪರಾಧಗಳನ್ನು ಸಾಮಾನ್ಯ ಅಪರಾಧಗಳೆಂದು ಪರಿಗಣಿಸಲಾಗುತ್ತದೆ.
ಅಂಜೆಲ್ ಚಕ್ಮಾ ಅವರ ಹತ್ಯೆ ಪ್ರತ್ಯೇಕ ಘಟನೆಯಲ್ಲ, ಬದಲಾಗಿ ಈಶಾನ್ಯ ರಾಜ್ಯಗಳ ನಾಗರಿಕರ ವಿರುದ್ಧದ ಜನಾಂಗೀಯ ನಿಂದನೆ ಮತ್ತು ಹಿಂಸಾಚಾರದ ದೀರ್ಘಕಾಲೀನ ಮಾದರಿಯ ಭಾಗವಾಗಿದೆ ಎಂದು ಅರ್ಜಿಯಲ್ಲಿ ಒತ್ತಿ ಹೇಳಲಾಗಿದೆ. 2014 ರಲ್ಲಿ ನೀಡೋ ತಾನಿಯಮ್ ಸಾವು, ಮಹಾನಗರಗಳಲ್ಲಿ ವಿದ್ಯಾರ್ಥಿಗಳು ಮತ್ತು ಕಾರ್ಮಿಕರ ಮೇಲೆ ನಡೆದ ಅನೇಕ ಹಲ್ಲೆಗಳು, ಸಂಸತ್ತಿನ ಉತ್ತರಗಳಲ್ಲಿ ಕೇಂದ್ರವು ಒಪ್ಪಿಕೊಂಡ ಘಟನೆಗಳು ಸೇರಿದಂತೆ ಹಿಂದಿನ ಪ್ರಕರಣಗಳನ್ನು ಇದು ಉಲ್ಲೇಖಿಸಿದೆ.


