ಮೂರು ವರ್ಷಗಳ ಹಿಂದೆ ಜಾರ್ಖಂಡ್ ಪೊಲೀಸರು ವಾಹನವೊಂದನ್ನು ತಡೆದು, ಅದರಿಂದ ಭಾರೀ ಪ್ರಮಾಣದ ಮಾದಕ ವಸ್ತು ಗಾಂಜಾ ವಶಪಡಿಸಿಕೊಂಡಿದ್ದರು. 2024ರಲ್ಲಿ ಈ ಪ್ರಕರಣದ ವಿಚಾರಣೆ ನಡೆಯುವಾಗ, ವಶಪಡಿಸಿಕೊಂಡ ಗಾಂಜಾವನ್ನು ಹಾಜರುಪಡಿಸುವಂತೆ ನ್ಯಾಯಾಲಯ ಸೂಚಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಪೊಲೀಸರು, ಅದನ್ನು ಮಲ್ಖಾನಾದಲ್ಲಿ ಸಂಗ್ರಹಿಸಿಟ್ಟಿದ್ದಾಗ ಇಲಿಗಳು ತಿಂದಿವೆ ಎಂದು ಸಬೂಬು ಹೇಳಿದ್ದರು.
ಹಾಗಾಗಿ, ಪ್ರಕರಣದ ಏಕೈಕ ಆರೋಪಿಯನ್ನು ರಾಂಚಿಯ ವಿಶೇಷ ಎನ್‌ಡಿಪಿಎಸ್ ನ್ಯಾಯಾಲಯವು ಖುಲಾಸೆಗೊಳಿಸಿದೆ. ಬರೋಬ್ಬರಿ 200 ಕೆ.ಜಿ ಗಾಂಜಾವನ್ನು ಇಲಿಗಳು ತಿಂದಿವೆ ಎಂಬ ತನಿಖಾಧಿಕಾರಿಯ ಬೇಜವ್ದಾರಿ ಹೇಳಿಕೆ ಸೇರಿದಂತೆ, ತನಿಖೆಯಲ್ಲಿ ದೊಡ್ಡಮಟ್ಟದ ಲೋಪವಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಪ್ರಾಸಿಕ್ಯೂಷನ್ ಪ್ರಕಾರ, ರಾಂಚಿಯಿಂದ ರಾಮಗಢಕ್ಕೆ ಗಾಂಜಾ ಸಾಗಿಸಲಾಗುತ್ತಿದೆ ಎಂಬ ಮಾಹಿತಿಯ ಮೇರೆಗೆ, ರಾಂಚಿ ಜಿಲ್ಲೆಯ ಓರ್ಮಾಂಜಿ ಪೊಲೀಸರು ಜನವರಿ 17, 2022ರಂದು ರಾಷ್ಟ್ರೀಯ ಹೆದ್ದಾರಿ-20ರಲ್ಲಿ ಬಿಳಿ ಬಣ್ಣದ ಬೊಲೆರೊ ವಾಹನವನ್ನು ತಡೆದಿದ್ದರು.
ಪೊಲೀಸರು ವಾಹನವನ್ನು ತಡೆದ ನಂತರ, ಮೂವರು ವ್ಯಕ್ತಿಗಳು ಅದರಿಂದ ಹಾರಿ ಪರಾರಿಯಾಗಲು ಪ್ರಯತ್ನಿಸಿದ್ದರು. ಅವರಲ್ಲಿ ಇಂದ್ರಜೀತ್ ರೈ ಅಲಿಯಾಸ್ ಅನರ್ಜಿತ್ ರೈ ಎಂಬಾತ ಸಿಕ್ಕಿಬಿದ್ದರೆ, ವಿಕಾಸ್ ಚೌರಾಸಿಯಾ ಮತ್ತು ಕುಂದನ್ ರೈ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.
ಪೊಲೀಸರು ವಾಹನವನ್ನು ಶೋಧಿಸಿದಾಗ, ವಿಶೇಷವಾಗಿ ರಚಿಸಲಾದ ಕಂಪಾರ್ಟ್‌ಮೆಂಟ್‌ಗಳಲ್ಲಿ ಸುಮಾರು 170 ಪ್ಯಾಕೆಟ್‌ಗಳಲ್ಲಿ ಪ್ಯಾಕ್ ಮಾಡಲಾದ 200 ಕೆಜಿ ಗಾಂಜಾ ಸಿಕ್ಕಿತ್ತು. ಅದನ್ನು ಪೊಲೀಸರು ವಶಪಡಿಸಿಕೊಂಡಿದ್ದರು.
ಈ ಸಂಬಂಧ ಮಾದಕ ದ್ರವ್ಯಗಳು ಮತ್ತು ಮನೋವಿಕೃತ ವಸ್ತುಗಳ (ಎನ್‌ಡಿಪಿಎಸ್) ಕಾಯ್ದೆಯ ಸೆಕ್ಷನ್ 20(b)(ii)(c) ಮತ್ತು 22(c) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಬಂಧಿತ ಆರೋಪಿ ರೈ ವಿಚಾರಣೆ ಸಮಯದಲ್ಲಿ ಕಸ್ಟಡಿಯಲ್ಲಿದ್ದರು.
ಡಿಸೆಂಬರ್ 19, 2025ರಂದು ರಾಂಚಿಯ ಹೆಚ್ಚುವರಿ ನ್ಯಾಯಾಂಗ ಆಯುಕ್ತ-III-ಹಾಗೂ-ವಿಶೇಷ ನ್ಯಾಯಾಧೀಶ ಆನಂದ್ ಪ್ರಕಾಶ್ ಅವರು ಇಂದ್ರಜೀತ್ ರೈಯನ್ನು ಖುಲಾಸೆಗೊಳಿಸಿದ್ದಾರೆ. ಪ್ರಾಸಿಕ್ಯೂಷನ್ ಆರೋಪಗಳನ್ನು ಅನುಮಾನ ಮೀರಿ ಸಾಬೀತುಪಡಿಸಲು ವಿಫಲವಾಗಿದೆ ಎಂದು ನ್ಯಾಯಾಲಯ ಹೇಳಿದೆ. ಮಾದಕ ದ್ರವ್ಯದ ವಶಪಡಿಸಿಕೊಳ್ಳುವಿಕೆ ಮತ್ತು ನಿರ್ವಹಣೆಯ ಬಗ್ಗೆಯೂ ನ್ಯಾಯಾಲಯ ಅನುಮಾನಗಳನ್ನು ಎತ್ತಿದೆ.
ವಶಪಡಿಸಿಕೊಂಡ ಗಾಂಜಾವನ್ನು ಇಲಿಗಳು ನಾಶಪಡಿಸಿವೆ ಎಂದು ಹೇಳುವ ಠಾಣೆಯ ಡೈರಿ ನಮೂದನ್ನು ಉಲ್ಲೇಖಿಸಿ, ನ್ಯಾಯಾಲಯವು ತನ್ನ ತೀರ್ಪಿನಲ್ಲಿ, “ಇದು ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳುವ ಮತ್ತು ಪೊಲೀಸರು ಅದನ್ನು ನಿರ್ವಹಿಸುತ್ತಿರುವ ರೀತಿಯ ಮೇಲೆ ಅನುಮಾನವನ್ನು ಮೂಡಿಸುತ್ತದೆ” ಎಂದು ಹೇಳಿದೆ.
ನ್ಯಾಯಾಲಯದ ಆದೇಶದ ಪ್ರಕಾರ, ಗಾಂಜಾ ಪ್ಯಾಕೆಟ್‌ಗಳು ವಿಕಾಶ್ ಚೌರಾಸಿಯಾ ಮತ್ತು ಕುಂದನ್ ರೈ ಅವರಿಗೆ ಸೇರಿದ್ದು ಎಂದು ರೈ ಪೊಲೀಸರಿಗೆ ತಿಳಿಸಿದ್ದು, ಅವರು ಓಡಿ ಹೋಗಿದ್ದಾರೆ. ಅವರ ನಿರ್ದೇಶನದ ಮೇರೆಗೆ ರೈ ಗಾಂಜಾವನ್ನು ಬಿಹಾರದ ಭಕ್ತಿಯಾರ್‌ಪುರಕ್ಕೆ ಸಾಗಿಸುತ್ತಿದ್ದರು.
ಆದಾಗ್ಯೂ, ಏಳು ಪ್ರಾಸಿಕ್ಯೂಷನ್ ಸಾಕ್ಷಿಗಳನ್ನು (ಎಲ್ಲರೂ ಪೊಲೀಸ್ ಸಿಬ್ಬಂದಿ) ವಿಚಾರಣೆ ನಡೆಸಿದಾಗ ವಾಹನವನ್ನು ತಡೆಹಿಡಿದ ಸಮಯ, ಮಾದಕವಸ್ತು ವಶಪಡಿಸಿಕೊಂಡ ನಿಖರವಾದ ಸ್ಥಳ, ಆರೋಪಿಯನ್ನು ಯಾರು ಬಂಧಿಸಿದರು ಮತ್ತು ಇತರ ಇಬ್ಬರು ಆರೋಪಿಗಳು ಯಾವ ದಿಕ್ಕಿನಲ್ಲಿ ಪರಾರಿಯಾಗಿದ್ದಾರೆ ಎಂಬಂತಹ ಪ್ರಮುಖ ಅಂಶಗಳ ಕುರಿತು ಅವರ ಸಾಕ್ಷ್ಯಗಳಲ್ಲಿ ಹಲವಾರು ವಿರೋಧಾಭಾಸಗಳು ಕಂಡುಬಂದಿವೆ.
“ಅವರ ಹೇಳಿಕೆಗಳಲ್ಲಿ ಹಲವಾರು ವಿರೋಧಾಭಾಸಗಳಿವೆ… ಇದು ಆಪಾದಿತ ಆರೋಪಿಯನ್ನು ಪ್ರಾಸಿಕ್ಯೂಷನ್ ಹೇಳಿದಂತೆ ಸ್ಥಳದಲ್ಲಿಯೇ ಹಿಡಿಯಲಾಗಿದೆಯೇ ಅಥವಾ ಬೇರೆಡೆಯಿಂದ ಹಿಡಿಯಲಾಗಿದೆಯೇ ಎಂಬ ಅನುಮಾನವನ್ನು ಹುಟ್ಟುಹಾಕುತ್ತದೆ” ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.
ಜನನಿಬಿಡ ರಾಷ್ಟ್ರೀಯ ಹೆದ್ದಾರಿಯಲ್ಲಿ ವಸತಿ ಪ್ರದೇಶದಲ್ಲಿ ಮಾದಕ ವಸ್ತು ವಶಪಡಿಸಿಕೊಂಡರೂ ,ಯಾವುದೇ ಸ್ವತಂತ್ರ ಸಾರ್ವಜನಿಕ ಸಾಕ್ಷಿಯನ್ನು ವಿಚಾರಣೆ ನಡೆಸಲಾಗಿಲ್ಲ ಎಂಬ ಅಂಶವನ್ನು ನ್ಯಾಯಾಲಯವು ಗಮನಿಸಿದೆ.
ಆರೋಪಿ ಮತ್ತು ವಶಪಡಿಸಿಕೊಂಡ ವಾಹನದ ನಡುವೆ ಯಾವುದೇ ಸಂಬಂಧವನ್ನು ಸ್ಥಾಪಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. “ವಾಹನವು ಆರೋಪಿಯೊಂದಿಗೆ ಯಾವುದೇ ರೀತಿಯಲ್ಲಿ ಸಂಬಂಧ ಹೊಂದಿದೆ ಎಂದು ತೋರಿಸುವ ಯಾವುದೇ ಇತರ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಸಲ್ಲಿಸಲಾಗಿಲ್ಲ” ಎಂದು ತೀರ್ಪಿನಲ್ಲಿ ಹೇಳಲಾಗಿದೆ.
ಪ್ರಕರಣದ ತನಿಖಾಧಿಕಾರಿ (ಐಒ) ವಿಚಾರಣೆಯ ಸಮಯದಲ್ಲಿ ವಶಪಡಿಸಿಕೊಂಡಿದ್ದಾರೆ ಎನ್ನಲಾದ ವಾಹನದಲ್ಲಿ ಇಂಜಿನ್ ಅಥವಾ ಚಾಸಿಸ್ ಸಂಖ್ಯೆ ಇರಲಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಈ ಸಂಗತಿಯನ್ನು ಪ್ರಕರಣದ ಡೈರಿಯಲ್ಲಿ ಸರಿಯಾಗಿ ದಾಖಲಿಸಲಾಗಿಲ್ಲ ಅಥವಾ ಸಾರಿಗೆ ಅಧಿಕಾರಿಗಳಿಗೆ ವರದಿ ಮಾಡಲಾಗಿಲ್ಲ, ಇದು ಪ್ರಾಸಿಕ್ಯೂಷನ್ ಪ್ರಕರಣವನ್ನು ಮತ್ತಷ್ಟು ದುರ್ಬಲಗೊಳಿಸಿದೆ ಎಂದು ನ್ಯಾಯಾಲಯ ಹೇಳಿದೆ.
ಪೊಲೀಸ್ ಮಲ್ಖಾನಾದಲ್ಲಿ ಸಂಗ್ರಹಿಸಲಾಗಿದ್ದ ಮಾದಕ ವಸ್ತುಗಳನ್ನು ಇಲಿಗಳು ತಿಂದು ಹಾಕಿವೆ ಎಂದು ಪ್ರಾಸಿಕ್ಯೂಷನ್ ಸ್ವತಃ ಒಪ್ಪಿಕೊಂಡಿದ್ದು, ಇದು ಪ್ರಕರಣಕ್ಕೆ ಪ್ರಮುಖ ಹೊಡೆತವಾಗಿದೆ. ವಿಚಾರಣೆಯ ಸಮಯದಲ್ಲಿ ಈ ವಸ್ತುಗಳನ್ನು ಹಾಜರುಪಡಿಸುವ ಮೊದಲು, ಫೆಬ್ರವರಿ 2024ರಲ್ಲಿ ನ್ಯಾಯಾಲಯದಲ್ಲಿ ಈ ಕುರಿತು ಠಾಣೆಯ ಡೈರಿ ನಮೂದನ್ನು ಸಲ್ಲಿಸಲಾಗಿದೆ.
ಮಾದರಿಗಳನ್ನು ಯಾವಾಗ ತೆಗೆದುಕೊಳ್ಳಲಾಗಿದೆ ಅಥವಾ ಅವುಗಳನ್ನು ಹೇಗೆ ಗುರುತಿಸಲಾಗಿದೆ ಎಂಬುದನ್ನು ಹಲವಾರು ಸಾಕ್ಷಿಗಳು ಸ್ಪಷ್ಟವಾಗಿ ಹೇಳಲು ಸಾಧ್ಯವಾಗದ ಕಾರಣ, ಮಾದರಿ ಸಂಗ್ರಹಣೆ, ಸೀಲಿಂಗ್ ಮತ್ತು ಸಾಕ್ಷ್ಯಗಳನ್ನು ಸಂರಕ್ಷಿಸುವಲ್ಲಿ ಗಂಭೀರ ಅಂತರವನ್ನು ನ್ಯಾಯಾಲಯವು ಎತ್ತಿ ತೋರಿಸಿದೆ.
ಪ್ರಾಸಿಕ್ಯೂಷನ್ ಅನುಮಾನ ಮೀರಿ ತಪ್ಪಿತಸ್ಥರೆಂದು ಸಾಬೀತುಪಡಿಸಲು ವಿಫಲವಾಗಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯವು, ಇಂದ್ರಜೀತ್ ರೈ ಅವರನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿದೆ. “ಆರೋಪಿಯನ್ನು ವಶಪಡಿಸಿಕೊಂಡ ವಾಹನದೊಂದಿಗೆ ಪರಸ್ಪರ ಸಂಬಂಧಿಸಲು ಮತ್ತು ಆರೋಪಿಯನ್ನು ಅದೇ ಸ್ಥಳದಲ್ಲಿ ಬಂಧಿಸಲಾಗಿದೆ ಎಂಬ ಅನುಮಾನವನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ. ಬೇರೆ ಯಾವುದೇ ಪ್ರಕರಣದಲ್ಲಿ ಆರೋಪಿ ಬಂಧಿತರಾಗಿರದಿದ್ದರೆ, ಅವರನ್ನು ಬಿಡುಗಡೆ ಮಾಡುವಂತೆ ಸೂಚಿಸಿದೆ.


