ಮಂಗಳವಾರ (ಡಿ.30) ನಿಧನರಾದ ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿ ಖಾಲಿದಾ ಝಿಯಾ ಅವರ ಅಂತ್ಯಕ್ರಿಯೆ ಬುಧವಾರ (ಡಿ.31) ಢಾಕಾದಲ್ಲಿ ನಡೆಯಿತು. ಭಾರತದಿಂದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಪಾಲ್ಗೊಂಡು ಪ್ರಧಾನಿ ಮೋದಿ ನೀಡಿದ ಪತ್ರವನ್ನು ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‌ಪಿ) ನಾಯಕ ತಾರೀಖ್ ರಹ್ಮಾನ್ ಅವರಿಗೆ ಹಸ್ತಾಂತರಿಸಿದರು.
ಢಾಕಾದ ಪ್ರಸಿದ್ದ ಮಾನಿಕ್ ಮಿಯಾ ಅವೆನ್ಯೂದಲ್ಲಿ ಮಧ್ಯಾಹ್ನದ ನಂತರ ಅಂತಿಮ ಪ್ರಾರ್ಥನೆ (ಜನಾಝಾ ನಮಾಝ್) ನಡೆಯಿತು. ಬೈತುಲ್ ಮುಕರ್ರಮ್ ನ್ಯಾಷನಲ್ ಮಸೀದಿಯ ಖತೀಬ್ (ಧರ್ಮಗುರು) ಮುಫ್ತಿ ಮುಹಮ್ಮದ್ ಅಬ್ದುಲ್ ಮಲಿಕ್ ಪ್ರಾರ್ಥನೆಗೆ ನೇತೃತ್ವ ನೀಡಿದರು. ಬಿಎನ್‌ಪಿ ಸ್ಥಾಯಿ ಸಮಿತಿ ಸದಸ್ಯ ನಝ್ರುಲ್ ಇಸ್ಲಾಂ ಖಾನ್ ಖಾಲಿದಾ ಝಿಯಾ ಅವರ ಸಂಕ್ಷಿಪ್ತ ಜೀವನ ಚರಿತ್ರೆಯನ್ನು ಓದಿದರು.
ಢಾಕಾದಲ್ಲಿ ಬಂದಿಳಿದ ಸ್ವಲ್ಪ ಸಮಯದ ನಂತರ, ಜೈಶಂಕರ್ ಅವರು ಬಿಎನ್‌ಪಿಯ ಹಂಗಾಮಿ ಅಧ್ಯಕ್ಷ ಮತ್ತು ಖಾಲಿದಾ ಅವರ ಹಿರಿಯ ಮಗ ತಾರೀಖ್ ರಹ್ಮಾನ್ ಅವರನ್ನು ಭೇಟಿಯಾದರು ಮತ್ತು ಮೂರು ದಶಕಗಳಿಗೂ ಹೆಚ್ಚು ಕಾಲ ದೇಶದ ರಾಜಕೀಯದಲ್ಲಿ ಪ್ರಾಬಲ್ಯ ಹೊಂದಿದ್ದ ಅಪ್ರತಿಮ ನಾಯಕಿಯ ನಿಧನಕ್ಕೆ ಭಾರತದ ಆಳವಾದ ಸಂತಾಪವನ್ನು ವ್ಯಕ್ತಪಡಿಸಿದರು.
“ಪ್ರಧಾನಿ ನರೇಂದ್ರ ಮೋದಿ ಅವರಿಂದ ಬಂದ ವೈಯಕ್ತಿಕ ಪತ್ರವನ್ನು ರಹ್ಮಾನ್ ಅವರಿಗೆ ಹಸ್ತಾಂತರಿಸಲಾಗಿದೆ. ಭಾರತ ಸರ್ಕಾರ ಮತ್ತು ಜನರ ಪರವಾಗಿ ನಾನು ತೀವ್ರ ಸಂತಾಪ ಸೂಚಿಸುತ್ತೇನೆ” ಎಂದು ಜೈಶಂಕರ್ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ.
“ಬೇಗಂ ಖಲೀದಾ ಝಿಯಾ ಅವರ ದೃಷ್ಟಿಕೋನ ಮತ್ತು ಮೌಲ್ಯಗಳು ನಮ್ಮ ಪಾಲುದಾರಿಕೆಯ ಅಭಿವೃದ್ಧಿಗೆ ಮಾರ್ಗದರ್ಶನ ನೀಡುತ್ತವೆ ಎಂಬ ವಿಶ್ವಾಸವಿದೆ” ಎಂದು ಜೈಶಂಕರ್ ಬರೆದುಕೊಂಡಿದ್ದಾರೆ.
ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಖಾಲಿದಾ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದು, 2015ರಲ್ಲಿ ಢಾಕಾಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರೊಂದಿಗಿನ ಭೇಟಿಯನ್ನು ನೆನಪಿಸಿಕೊಂಡಿದ್ದಾರೆ.
ಇತ್ತೀಚೆಗೆ ದೊಡ್ಡ ಮಟ್ಟದ ಹಿಂಸಾಚಾರ ನಡೆದು ಬಾಂಗ್ಲಾದೇಶದ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದೆ. ಇತ್ತೀಚಿನ ಹಿಂಸಾಚಾರದ ವೇಳೆ ಭಾರತದ ವಿರುದ್ದವೇ ಪ್ರಮುಖವಾಗಿ ಪ್ರತಿಭಟನೆಗಳು ವ್ಯಕ್ತಿವಾಗಿತ್ತು. ಭಾರತ ವಿರೋಧಿ ಗುಂಪಿನ ನಾಯಕ ಉಸ್ಮಾನ್ ಹಾದಿಯ ಹತ್ಯೆ, ಯುವಕರು ಭಾರತದ ವಿರುದ್ದ ಇನ್ನಷ್ಟು ಆಕ್ರೋಶಿತರಾಗುವಂತೆ ಮಾಡಿತ್ತು. ಈ ನಡುವೆ ಜೈಶಂಕರ್ ಅವರು ಬಾಂಗ್ಲಾದೇಶಕ್ಕೆ ಭೇಟಿ ನೀಡಿರುವುದು ಮಹತ್ವವೆನಿಸಿದೆ.
ವರದಿಗಳ ಪ್ರಕಾರ, ಜೈಶಂಕರ್ ಅವರ ಭೇಟಿಯ ವೇಳೆ ಭಾರೀ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.


