ಮಂಡ್ಯ ಜಿಲ್ಲೆ ಕೆ.ಆರ್ ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣವೊಂದನ್ನು ದಾಖಲಿಸುವ ವೇಳೆ ಸಂತ್ರಸ್ತೆಯ ತಾಯಿ ನೀಡಿದ ಮೂಲ ದೂರನ್ನು ತಿರುಚಿ, ಪೊಲೀಸರು ತಮಗೆ ಇಷ್ಟ ಬಂದಂತೆ ಎಫ್‌ಐಆರ್ ದಾಖಲಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಅಪ್ರಾಪ್ತೆಯ ಮೇಲೆ ನಡೆದ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ನ್ಯಾಯ ಕೋರಿ ಆಕೆಯ ತಾಯಿ ಕೆ.ಆರ್ ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದರು. ಈ ವೇಳೆ ಪೊಲೀಸ್ ಇನ್ಸ್‌ಪೆಕ್ಟರ್ ಆನಂದೇಗೌಡ ಸಂತ್ರಸ್ತೆ ಮತ್ತು ಆಕೆಯ ತಾಯಿ ನೀಡಿದ ನಿಖರವಾದ ಹೇಳಿಕೆಗಳನ್ನು ದಾಖಲಿಸಿಕೊಳ್ಳದೆ, ಪ್ರಕರಣದ ತೀವ್ರತೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ದೂರಿನ ಅಂಶಗಳನ್ನು ಬದಲಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಕುರಿತು ಮಾತನಾಡಿರುವ ಸಂತ್ರಸ್ತೆಯ ತಾಯಿ, “ನಾನು ಮೊದಲೇ ಒಂದು ಹೇಳಿಕೆ ನೀಡಿದ್ದೆ. ಆದರೆ ಪೊಲೀಸರು ನೆಟ್‌ವರ್ಕ್ ಇಲ್ಲ ಎಂಬ ನೆಪ ಹೇಳಿ ಸಮಯ ಕಳೆದರು. ನಂತರ ನನಗೆ ತಿಳಿಯದಂತೆ ಬೇರೆಯದೇ ರೀತಿಯ ದೂರು ಪತ್ರ ಸಿದ್ಧಪಡಿಸಿ, ಅದರ ಮೇಲೆ ಸಹಿ ಹಾಕುವಂತೆ ಒತ್ತಡ ಹೇರಿದರು. ಅತ್ಯಂತ ಅವಸರವಾಗಿ ನನ್ನಿಂದ ಸಹಿ ಪಡೆದುಕೊಂಡಿದ್ದಾರೆ” ಎಂದು ಅಳಲು ತೋಡಿಕೊಂಡಿದ್ದಾರೆ.
ಆರೋಪಿ ಕಿರಣ್ ಎಂ.ಎನ್ “ನನ್ನ ಮೇಲೆ ದೂರು ದಾಖಲಿಸಿದರೆ ನಿಮ್ಮ ಹೆಸರು ಬರೆದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ” ಎಂದು ನನಗೆ ಮತ್ತು ನನ್ನ ಮಗಳಿಗೆ ಪೋನಿನ ಮೂಲಕ ಬೆದರಿಕೆ ಪತ್ರ ಕಳುಹಿಸಿದ್ದಾನೆ” ಎಂದು ಸಂತ್ರಸ್ತೆಯ ತಾಯಿ ಹೇಳಿದ್ದಾರೆ.
ಪೊಕ್ಸೋ ಪ್ರಕರಣದಲ್ಲಿ ರಾಜಿ ಪಂಚಾಯಿತಿಗೆ ಅವಕಾಶ ಇಲ್ಲದಿದ್ದರೂ, ನ್ಯಾಯ ಕೊಡಿಸುವುದಾಗಿ ಮಣಿಪುರಕ್ಕೆ ಕರೆದುಕೊಂಡು ಹೋಗಿ ಸಂತ್ರಸ್ತೆಯ ತಾಯಿಯಿಂದ ಲಕ್ಷಾಂತರ ರೂಪಾಯಿ ಹಣ ದುಂದು ವೆಚ್ಚ ಮಾಡಿಸಿ ಮೋಸ ಮಾಡಿ, ನಂತರ ಅವರಿಗೇ ಬೆದರಿಕೆ ಹಾಕುತ್ತಿರುವ ರಜನಿರಾಜ್ ಎಂಬ ಮಹಿಳೆಯ ಮೇಲೆ ಎಫ್‌ಐಆರ್ ದಾಖಲಿಸುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿದ್ದರೂ, ಅವರ ಹೆಸರನ್ನು ಕೈಬಿಡಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂಬ ಅಂಶವೂ ಸಂತ್ರಸ್ತೆಯ ತಾಯಿಯ ಹೇಳಿಕೆಯಿಂದ ತಿಳಿದುಬಂದಿದೆ.
ಈ ಕುರಿತು ಮಾತನಾಡಿರುವ ‘ಮಹಿಳಾ ಮುನ್ನಡೆ’ ಸಂಘಟನೆಯ ಸಾಮಾಜಿಕ ಕಾರ್ಯಕರ್ತೆ ಪೂರ್ಣಿಮಾ, “ಪೊಲೀಸರು ಸಂತ್ರಸ್ತೆಯ ಪರವಾಗಿ ನಿಲ್ಲುವ ಬದಲು ಆರೋಪಿಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆ. ತಾಯಿ-ಮಗಳು ನೀಡಿದ ದೂರಿನಂತೆ ಎಫ್‌ಐಆರ್ ದಾಖಲಿಸದೆ, ಇನ್ಸ್‌ಪೆಕ್ಟರ್ ತಮಗೆ ಬೇಕಾದಂತೆ ಬರೆದುಕೊಂಡಿದ್ದಾರೆ. ಇದನ್ನು ವಿರೋಧಿಸಿದಾಗ ಸಂತ್ರಸ್ತೆಯನ್ನೇ ಅಪರಾಧಿಯಂತೆ ಕಂಡು ಠಾಣೆಯಲ್ಲಿ ಕೂರಿಸುವ ಮೂಲಕ ದರ್ಪ ಪ್ರದರ್ಶಿಸಿದ್ದಾರೆ” ಎಂದು ಆರೋಪಿಸಿದ್ದಾರೆ.
ಈಗಾಗಲೇ ಈ ವಿಚಾರವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು (ಎಸ್ಪಿ) ಮತ್ತು ಜಿಲ್ಲಾಧಿಕಾರಿಗಳ (ಡಿಸಿ) ಗಮನಕ್ಕೆ ತರಲಾಗಿದೆ. ಸಂತ್ರಸ್ತೆಗೆ ನ್ಯಾಯ ಸಿಗದಿದ್ದರೆ ಮತ್ತು ತಿರುಚಲಾದ ಎಫ್‌ಐಆರ್ ಅನ್ನು ಸರಿಪಡಿಸದಿದ್ದರೆ ಬೃಹತ್ ಪ್ರತಿಭಟನೆ ಮಾಡಿ ಪತ್ರಿಕಾಗೋಷ್ಠಿ ನಡೆಸುವುದಾಗಿ ಸಂಘಟನೆಗಳು ಎಚ್ಚರಿಕೆ ನೀಡಿವೆ.
ಠಾಣೆಗೆ ಭೇಟಿ ನೀಡಿದ ಅತ್ಯಾಚಾರ ವಿರೋಧಿ ಆಂದೋಲನದ ನಿಯೋಗದಲ್ಲಿ ಪದಾಧಿಕಾರಿಗಳಾದ ಕರ್ನಾಟಕ ಜನಶಕ್ತಿಯ ಸಿದ್ದರಾಜು, ಕರ್ನಾಟಕ ರೈತ ಸಂಘದ ಲತಾಶಂಕರ್, ಮಹಿಳಾ ಮುನ್ನಡೆಯ ಶಿಲ್ಪ, ಗಂಗಾಧರ್ ಬಿಎಸ್‌ಪಿ, ರವಿ ಹಾಗೂ ಜಾಗೃತ ಕರ್ನಾಟಕದ ಜಗದೀಶ್ ನಗರಕೆರೆ ಇನ್ನೂ ಮುಂತಾದವರು ಹಾಜರಿದ್ದರು.


