ಕೊಪ್ಪಳ: ಬಳ್ಳಾರಿಯಲ್ಲಿ ತಮ್ಮ ಮೇಲೆ “ಪೂರ್ವ ಯೋಜಿತ ಹತ್ಯೆ ಯತ್ನ” ನಡೆದಿದೆ ಎಂದು ಆರೋಪಿಸಿ, ಬಿಜೆಪಿ ಶಾಸಕ ಜಿ ಜನಾರ್ದನ ರೆಡ್ಡಿ ಅವರು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪ್ರತ್ಯೇಕ ಪತ್ರಗಳನ್ನು ಬರೆದಿದ್ದಾರೆ.
ಪತ್ರದಲ್ಲಿ ಜನವರಿ 1 ರಂದು ವಾಲ್ಮೀಕಿ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕಾಗಿ ಬ್ಯಾನರ್ ಅಳವಡಿಸುವ ಸಂದರ್ಭದಲ್ಲಿ ಭುಗಿಲೆದ್ದ ಘರ್ಷಣೆಯನ್ನು ಉಲ್ಲೇಖಿಸುತ್ತಾ, “ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ” ಎಂದು ಹೇಳಿದ್ದರು. ಘರ್ಷಣೆಗೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿ ಸೇರಿದಂತೆ ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಶನಿವಾರ ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ, ರೆಡ್ಡಿ ಅವರು ಹೊಸ ವರ್ಷದ ದಿನದಂದು ತಮ್ಮ ಬಳ್ಳಾರಿ ನಿವಾಸದ ಮೇಲೆ ನಡೆದ ದಾಳಿ “ಸಾಮಾನ್ಯ ರಾಜಕೀಯ ಘರ್ಷಣೆಯಲ್ಲ, ಬದಲಾಗಿ ಬಳ್ಳಾರಿ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ ಮತ್ತು ಅವರ ಸಹಚರರು ನಡೆಸಿದ್ದೆಂದು ಹೇಳಲಾದ ಪೂರ್ವ ಯೋಜಿತ ಮತ್ತು ವ್ಯವಸ್ಥಿತ ಹತ್ಯೆಯ ಪ್ರಯತ್ನ” ಎಂದು ಹೇಳಿಕೊಂಡಿದ್ದಾರೆ.
ನನ್ನ ಜೀವಕ್ಕೆ ಅಪಾಯ ಎದುರಾಗಿದೆ. ಬಳ್ಳಾರಿ ಶಾಸಕ ನಾರಾ ಭರತ್ ರೆಡ್ಡಿ ಮತ್ತು ಆತನ ಗೂಂಡಾ ಸಹಚರರು ಪೆಟ್ರೋಲ್ ಬಾಂಬ್ ಹಾಗೂ ಬಂದೂಕು ಬಳಸಿ ನನ್ನ ಹತ್ಯೆಗೆ ಯತ್ನಿಸಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿಯೂ ರಾಜ್ಯ ಸರ್ಕಾರ ವಿಫಲವಾಗಿದೆ. ಅತ್ಯಂತ ಆಕ್ರೋಶ ಹಾಗೂ ಆಘಾತದೊಂದಿಗೆ ಈ ಪತ್ರವನ್ನು ಬರೆಯುತ್ತಿದ್ದು ಸರ್ಕಾರ ತ್ವರಿತವಾಗಿ ಕ್ರಮ ವಹಿಸಬೇಕು ಎಂದು ಅವರು ಕೋರಿದ್ದಾರೆ.
ಬಳ್ಳಾರಿಯ ನನ್ನ ನಿವಾಸದ ಬಳಿ ನಡೆದ ಭೀಕರ ದಾಳಿಯು ಸಾಮಾನ್ಯ ರಾಜಕೀಯ ಘರ್ಷಣೆಯಲ್ಲ. ನನ್ನನ್ನು ವ್ಯವಸ್ಥಿತವಾಗಿ ಮುಗಿಸಲು ನಾರಾ ಭರತ್ ರೆಡ್ಡಿ ನಡೆಸಿದ ಪೂರ್ವ ನಿಯೋಜಿತ ಹತ್ಯೆಯ ಸಂಚು ಎಂದು ಆರೋಪಿಸಿರುವ ಶಾಸಕ ರೆಡ್ಡಿ ಶಾಸಕನ ಮೇಲೆ ಪೆಟ್ರೋಲ್ ಬಾಂಬ್ ಹಾಗೂ ಬಂದೂಕುಗಳೊಂದಿಗೆ ಬಂದು ಪೊಲೀಸರ ಎದುರೇ ದಾಂಧಲೆ ನಡೆಸಿ ಹತ್ಯೆಗೆ ಯತ್ನಿಸಿರುವುದು ನೋಡಿದರೆ ರಾಜ್ಯದಲ್ಲಿ ‘ಜಂಗಲ್ ರಾಜ್’ ಇದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಆರೋಪಿದ್ದಾರೆ.
ಆದ್ದರಿಂದ ಸರ್ಕಾರ ತುರ್ತಾಗಿ ನನಗೆ ಹಾಗೂ ನನ್ನ ಕುಟುಂಬಕ್ಕೆ ಝಡ್ ಶ್ರೇಣಿ ಅಥವಾ ಅದಕ್ಕೆ ಸಮಾನವಾದ ಉನ್ನತ ಪೊಲೀಸ್ ಭದ್ರತೆ ಒದಗಿಸಬೇಕು. ಈ ವಿಷಯದಲ್ಲಿ ನಿರ್ಲಕ್ಷ್ಯ ಮಾಡಿ ಒಂದು ವೇಳೆ ಮತ್ತೆ ದಾಳಿ ನಡೆದರೆ ಅದಕ್ಕೆ ಸರ್ಕಾರವೇ ಹೊಣೆ ಎಂದೂ ಅವರು ಎಚ್ಚರಿಕೆ ನೀಡಿದ್ದಾರೆ.


