ಇಬ್ಬರು ಸಾಧ್ವಿಯರ ಮೇಲಿನ ಅತ್ಯಾಚಾರ ಮತ್ತು ಪತ್ರಕರ್ತನ ಹತ್ಯೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್‌ಗೆ ಮತ್ತೊಮ್ಮೆ 40 ದಿನಗಳ ಪೆರೋಲ್ ಮಂಜೂರಾಗಿದೆ. ಪ್ರಸ್ತುತ ಈತ ರೋಹ್ಟಕ್‌ನ ಸುನಾರಿಯಾ ಜೈಲಿನಲ್ಲಿದ್ದು, ಪೆರೋಲ್ ಅವಧಿಯಲ್ಲಿ ಸಿರ್ಸಾದಲ್ಲಿರುವ ಡೇರಾ ಸಚ್ಚಾ ಸೌದಾ ಪ್ರಧಾನ ಕಚೇರಿಯಲ್ಲಿ ಇರಲಿದ್ದಾನೆ.
ರಾಮ್ ರಹೀಮ್ ತನ್ನ ಇಬ್ಬರು ಮಹಿಳಾ ಅನುಯಾಯಿಗಳ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ 20 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾನೆ. ಆಗಸ್ಟ್ 2017ರಲ್ಲಿ ಶಿಕ್ಷೆಗೊಳಗಾದ ನಂತರ, ಈತ ಜೈಲಿನಿಂದ ಹೊರಬರುತ್ತಿರುವುದು ಇದು 15ನೇ ಬಾರಿಯಾಗಿದೆ.
ಇದಕ್ಕೂ ಮೊದಲು, ರಾಮ್ ರಹೀಮ್ ಈ ವರ್ಷದ ಆಗಸ್ಟ್ 15ರಂದು ಡೇರಾದ ಕಾರ್ಯಕ್ರಮವೊಂದರ ನೆಪವೊಡ್ಡಿ ಸುನಾರಿಯಾ ಜೈಲಿನಿಂದ ಹೊರಬಂದಿದ್ದ. ಈಗ ಮತ್ತೆ ಜನವರಿ 25ರಂದು ಡೇರಾ ಸಚ್ಚಾ ಸೌದಾದ ಎರಡನೇ ಮುಖ್ಯಸ್ಥ ಶಾ ಸತ್ನಾಮ್ ಜಿ ಮಹಾರಾಜ್ ಅವರ ಜನ್ಮ ದಿನಾಚರಣೆ ಹಿನ್ನೆಲೆ ವಿಶೇಷ ಕಾರ್ಯಕ್ರಮ ಇದ್ದು, ಈ ಕಾರಣಕ್ಕೆ ಪೆರೋಲ್ ನೀಡಲಾಗಿದೆ ಎಂದು ವರದಿಯಾಗಿದೆ.
ರಾಮ್ ರಹೀಮ್ 2017ರಿಂದ ಜೈಲಿನಲ್ಲಿದ್ದಾನೆ ಮತ್ತು ಪ್ರಸ್ತುತ ರೋಹ್ಟಕ್‌ನ ಸುನಾರಿಯಾ ಜೈಲಿನಲ್ಲಿ ಬಂಧಿತನಾಗಿದ್ದಾನೆ. ಅಲ್ಲಿಂದ ಈತನಿಗೆ ಪದೇ ಪದೇ ಪೆರೋಲ್ ಮತ್ತು ಫರ್ಲೋ ನೀಡಲಾಗ್ತಿದೆ. ಇದರಿಂದಾಗಿ ಈತ ಈ ಹಿಂದೆ 14 ಬಾರಿ ಜೈಲಿನಿಂದ ಹೊರಬಂದಿದ್ದ. ಪ್ರಸ್ತುತ ಪೆರೋಲ್ ಮೂಲಕ 15ನೇ ಬಾರಿಗೆ ಜೈಲಿನಿಂದ ಹೊರಬರಲಿದ್ದಾನೆ.
ರೋಹ್ಟಕ್ ಜೈಲು ಅಧಿಕಾರಿಗಳಿಗೆ ಈತನ ಈ ಬಾರಿಯ ಬಿಡುಗಡೆಯ ಬಗ್ಗೆ ಇನ್ನೂ ಆದೇಶ ತಲುಪಿಲ್ಲ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ರ‍್ಯಾಗಿಂಗ್‌ಗೆ ದಲಿತ ವಿದ್ಯಾರ್ಥಿನಿ ಬಲಿ: ‘ಜಾತಿ ಮತ್ತು ಲಿಂಗ ಆಧಾರಿತ ಸಾಂಸ್ಥಿಕ ಹಿಂಸಾಚಾರದ ಗಂಭೀರ ನಿದರ್ಶನ’ ಎಂದ ಮಾನವ ಹಕ್ಕುಗಳ ಸಂಘಟನೆ


