ವೆನೆಜುವೆಲಾ ಮೇಲೆ ಅಮೆರಿಕ ನಡೆಸಿದ ಆಕ್ರಮಣವನ್ನು ಭಾರತದ ಎಡಪಕ್ಷಗಳು ತೀವ್ರವಾಗಿ ಖಂಡಿಸಿದ್ದು, ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರ ಬಂಧನವನ್ನು ‘ಅಪಹರಣ’ ಎಂದು ಹೇಳಿದೆ. ಹಾಗೆಯೇ, ಅಮೆರಿಕದ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗಳಿಗೆ ಕರೆ ನೀಡಿವೆ.
ಸಿಪಿಐ(ಎಂ), ಸಿಪಿಐ, ಸಿಪಿಐ(ಎಂಎಲ್)ಎಲ್, ಆರ್‌ಎಸ್‌ಪಿ ಮತ್ತು ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್ ಪಕ್ಷಗಳು, ತೈಲ ನಿಕ್ಷೇಪಗಳನ್ನು ವಶಪಡಿಸಿಕೊಳ್ಳುವುದಾಗಿ ಅಮೆರಿಕ ಅಧ್ಯಕ್ಷ ನೀಡಿರುವ ಹೇಳಿಕೆಯು ಈ ದಾಳಿಯ ಹಿಂದಿನ ‘ನಿಜವಾದ ಉದ್ದೇಶಗಳನ್ನು’ ಬಯಲು ಮಾಡಿದೆ ಎಂದು ಹೇಳಿದೆ. ಅಮೆರಿಕದ ಆಕ್ರಮಣವನ್ನು ಖಂಡಿಸುವ ಇತರೆ ದೇಶಗಳೊಂದಿಗೆ ಧ್ವನಿಗೂಡಿಸುವಂತೆ ಮತ್ತು ವೆನೆಜುವೆಲಾದೊಂದಿಗೆ ದೃಢವಾಗಿ ನಿಲ್ಲುವಂತೆ ಭಾರತ ಸರ್ಕಾರವನ್ನು ಒತ್ತಾಯಿಸಿವೆ.
ಈ ಬಗ್ಗೆ ಎಡ ಪಕ್ಷಗಳ ಪ್ರಧಾನ ಕಾರ್ಯದರ್ಶಿಗಳಾದ ಎಂ.ಎ ಬೇಬಿ (ಸಿಪಿಐ-ಎಂ), ಡಿ ರಾಜಾ (ಸಿಪಿಐ), ದೀಪಂಕರ್ ಭಟ್ಟಾಚಾರ್ಯ (ಸಿಪಿಐ-ಎಂಎಲ್ಎಲ್), ಜಿ ದೇವರಾಜನ್ (ಎಐಎಫ್‌ಬಿ) ಮತ್ತು ಮನೋಜ್ ಭಟ್ಟಾಚಾರ್ಯ (ಆರ್‌ಎಸ್‌ಪಿ) ಅವರು ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
“ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಭಾಷಣದಲ್ಲಿ ವೆನೆಜುವೆಲಾದ ತೈಲ ನಿಕ್ಷೇಪಗಳನ್ನು ವಶಪಡಿಸಿಕೊಳ್ಳುವುದಾಗಿ ಹೇಳಿದ್ದಾರೆ. ಈ ಮೂಲಕ ಈ ಆಕ್ರಮಣದ ಹಿಂದಿನ ನಿಜವಾದ ಉದ್ದೇಶಗಳನ್ನು ಅವರು ಬಹಿರಂಗಪಡಿಸಿದ್ದಾರೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಒಂದು ಹೆಜ್ಜೆ ಮುಂದೆ ಹೋಗಿ ಕ್ಯೂಬಾ ಮತ್ತು ಮೆಕ್ಸಿಕೊ ಅವರ ಮುಂದಿನ ಗುರಿಯಾಗಲಿದೆ ಎಂದು ಎಚ್ಚರಿಸಿದ್ದಾರೆ” ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
“ಅಮೆರಿಕದ ರಾಷ್ಟ್ರೀಯ ಭದ್ರತಾ ಕಾರ್ಯತಂತ್ರ 2025 ಬಿಡುಗಡೆಯಾದ ಕೆಲವು ದಿನಗಳ ನಂತರ ಈ ದಾಳಿ ನಡೆದಿದೆ. ಇದು ಅಮೆರಿಕದ ಸಾಮ್ರಾಜ್ಯಶಾಹಿ ಇಡೀ ಪ್ರಪಂಚದ ಮೇಲೆ ತನ್ನ ಪ್ರಾಬಲ್ಯವನ್ನು ಹೇರಲು ಪ್ರಯತ್ನಿಸುತ್ತಿದೆ ಎಂಬುವುದನ್ನು ಸ್ಪಷ್ಟಪಡಿಸುತ್ತದೆ” ಎಂದು ಎಡ ಪಕ್ಷಗಳ ನಾಯಕರು ಹೇಳಿದ್ದಾರೆ.
“ಇಡೀ ಪಶ್ಚಿಮ ಗೋಳಾರ್ಧವನ್ನು ತನ್ನ ಹಿತ್ತಲಿನಂತೆ ಪರಿಗಣಿಸುವ ಮತ್ತು ತನ್ನ ಅಧಿಕಾರವನ್ನು ಚಲಾಯಿಸುವ ಕುಖ್ಯಾತ ಮನ್ರೋ ಸಿದ್ಧಾಂತದ ಟ್ರಂಪ್ ಇಡೀ ವಿಶ್ವದಲ್ಲೇ ಪ್ರಾಬಲ್ಯ ಹೊಂದಲು ಬಯಸುತ್ತಿದ್ದಾರೆ” ಎಂದು ದೂರಿದ್ದಾರೆ.
“ವೆನೆಜುವೆಲಾದ ಹೋರಾಟದ ಜನರಿಗೆ ನಮ್ಮ ಸಂಪೂರ್ಣ ಬೆಂಬಲವಿದೆ. ನಾವು, ಎಡ ಪಕ್ಷಗಳು, ಅಮೆರಿಕದ ಆಕ್ರಮಣದ ವಿರುದ್ಧ ಮತ್ತು ಲ್ಯಾಟಿನ್ ಅಮೆರಿಕದ ಜನರೊಂದಿಗೆ ಒಗ್ಗಟ್ಟಿನಿಂದ ದೇಶಾದ್ಯಂತ ಪ್ರತಿಭಟನೆಗಳಿಗೆ ಕರೆ ನೀಡುತ್ತೇವೆ. ನಮ್ಮ ದೇಶದ ಎಲ್ಲಾ ಶಾಂತಿಪ್ರಿಯ, ಸಾಮ್ರಾಜ್ಯಶಾಹಿ ವಿರೋಧಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಈ ಪ್ರತಿಭಟನೆಗಳಲ್ಲಿ ಭಾಗವಹಿಸಬೇಕು ಎಂದು ನಾವು ಮನವಿ ಮಾಡುತ್ತೇವೆ” ಎಂದು ನಾಯಕರು ತಿಳಿಸಿದ್ದಾರೆ.


