ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ.
ಡಿಸೆಂಬರ್ 28ರಂದು ಪ್ರಾರಂಭವಾದ ಪ್ರತಿಭಟನೆಗಳು, ಆರಂಭದಲ್ಲಿ ಹೆಚ್ಚುತ್ತಿರುವ ಹಣದುಬ್ಬರದ ಬಗ್ಗೆ ಅಸಮಾಧಾನದ ಮೇಲೆ ಕೇಂದ್ರೀಕೃತವಾಗಿದ್ದವು. ನಂತರ 100ಕ್ಕೂ ಹೆಚ್ಚು ನಗರಗಳಲ್ಲಿ ಪ್ರತಿಭಟನಾಕಾರರು ಧಾರ್ಮಿಕ ನಾಯಕರ ಆಡಳಿತವನ್ನು ಕೊನೆಗೊಳಿಸಬೇಕೆಂದು ಒತ್ತಾಯಿಸಿದ ಪರಿಣಾಮ, ಅದು ಆಡಳಿತ ವಿರೋಧಿ ದಂಗೆಯಾಗಿ ಪರಿರ್ವತನೆಯಾಗಿದೆ.
ಇರಾನ್‌ನ ಅಧಿಕಾರಿಗಳು ಅಮೆರಿಕ ಮತ್ತು ಇಸ್ರೇಲ್ ದೇಶದಲ್ಲಿ ಅಶಾಂತಿಯನ್ನು ಪ್ರಚೋದಿಸುತ್ತಿವೆ ಎಂದು ಆರೋಪಿಸಿದ್ದಾರೆ. ಸರ್ಕಾರ ಗುರುವಾರ ಇಂಟರ್ನೆಟ್ ಮತ್ತು ದೂರವಾಣಿ ಸೇವೆಗಳನ್ನು ಕಡಿತಗೊಳಿಸಿದೆ. ಇದರಿಂದಾಗಿ ದೇಶಕ್ಕೆ ಹೊರಗಿನ ಪ್ರಪಂಚದಿಂದ ಸಂಪರ್ಕ ಕಡಿತಗೊಂಡಿದೆ.
ಪ್ರತಿಭಟನೆಗಳು ಪ್ರಾರಂಭಗೊಂಡು ಎರಡು ವಾರ ಪೂರ್ಣಗೊಳ್ಳುವಾಗ ದೇಶದಲ್ಲಿ ದೃಢಪಡಿಸಿದ ಸಾವಿನ ಸಂಖ್ಯೆ ಶನಿವಾರ 116ಕ್ಕೆ ತಲುಪಿದೆ ಎಂದು ಇರಾನ್‌ನ ಮಾನವ ಹಕ್ಕುಗಳ ಕಾರ್ಯಕರ್ತರು ತಿಳಿಸಿದ್ದಾರೆ. ಇಂಟರ್ನೆಟ್ ಸ್ಥಗಿತಗೊಳಿಸುವಿಕೆ ಮತ್ತು ತೀವ್ರ ಸಂವಹನ ಅಡಚಣೆಗಳು ‘ಮಾಹಿತಿಯನ್ನು ಪ್ರಸಾರ ಮಾಡುವ ಮತ್ತು ಘಟನೆಗಳನ್ನು ಸ್ವತಂತ್ರವಾಗಿ ಪರಿಶೀಲಿಸುವ ಸಾಮರ್ಥ್ಯವನ್ನು ಗಮನಾರ್ಹವಾಗಿ ಸೀಮಿತಗೊಳಿಸಿವೆ’ ಎಂದು ಹೇಳಿದ್ದಾರೆ.
ಪ್ರತಿಭಟನಾ ನಿರತ ಎಲ್ಲರನ್ನೂ ‘ದೇವರ ಶತ್ರು’ ಎಂದು ಪರಿಗಣಿಸಲಾಗುತ್ತದೆ ಎಂದು ಇರಾನ್ ಅಟಾರ್ನಿ ಜನರಲ್ ಮೊಹಮ್ಮದ್ ಮೊವಾಹೆದಿ ಆಝಾದ್ ಶನಿವಾರ ಎಚ್ಚರಿಸಿದ್ದಾರೆ. ಈ ಆರೋಪಕ್ಕೆ ಮರಣದಂಡನೆ ವಿಧಿಸಲಾಗುತ್ತದೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. ಗಲಭೆಕೋರರಿಗೆ ಸಹಾಯ ಮಾಡುವ ವ್ಯಕ್ತಿಗಳು ಕೂಡ ಈ ಆರೋಪ ಎದುರಿಸಬೇಕಾಗುತ್ತದೆ ಎಂದು ಮೊವಾಹೆದಿ ಹೇಳಿದ್ದನ್ನು ಇರಾನ್ ಸರ್ಕಾರದ ದೂರದರ್ಶನ ಉಲ್ಲೇಖಿಸಿದೆ.
“ನಮ್ಮ ದೇಶದ ವಿರುದ್ಧ ದ್ರೋಹ ಮಾಡಿ, ಜನರಲ್ಲಿ ಭಯ ಹುಟ್ಟಿಸಿ, ಅಶಾಂತಿ ಸೃಷ್ಟಿಸಿ, ವಿದೇಶಿ ಶಕ್ತಿಗಳ ಆಳ್ವಿಕೆ ತರಲು ಯತ್ನಿಸುವ ಎಲ್ಲರ ವಿರುದ್ಧ ತ್ವರಿತವಾಗಿ, ಕಠಿಣವಾಗಿ ಕಾನೂನು ಕ್ರಮ ಕೈಗೊಳ್ಳಿ. ಆರೋಪಪತ್ರಗಳನ್ನು ತ್ವರಿತವಾಗಿ ದಾಖಲಿಸಿ, ಶೀಘ್ರ ವಿಚಾರಣೆ ನಡೆಸಿ, ಅವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಿ. ಯಾವುದೇ ದಯೆ, ಕ್ಷಮೆ, ಸಹನೆ ಇರಬಾರದು” ಎಂದು ಮೊವಾಹೆದಿ ಹೇಳಿದ್ದಾರೆ.
ಈ ನಡುವೆ, ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳು ರಾಜಧಾನಿ ತೆಹ್ರಾನ್ ಮತ್ತು ಉತ್ತರದಲ್ಲಿ ರಾಶ್ಟ್, ವಾಯುವ್ಯದಲ್ಲಿ ತಬ್ರಿಝ್ ಮತ್ತು ದಕ್ಷಿಣದಲ್ಲಿ ಶಿರಾಜ್ ಮತ್ತು ಕೆರ್ಮನ್‌ನಂತಹ ಹಲವಾರು ನಗರ ಕೇಂದ್ರಗಳಲ್ಲಿ ಹೊಸದಾಗಿ ಪ್ರತಿಭಟನೆಗಳು ಭುಗಿಲೆದ್ದಿರುವುದನ್ನು ತೋರಿಸಿವೆ ಎಂದು ವರದಿಯಾಗಿದೆ.


