ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಬುಧವಾರ (ಜ.14) ನಕಲಿ ಗೋರಕ್ಷಕರು 35 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಜಾನುವಾರುಗಳನ್ನು ಹೊತ್ತ ವ್ಯಾನ್ ನಿಲ್ಲಿಸಿ ಪ್ರಾಣಿಗಳ ಸಾಗಣೆ ಆರೋಪದ ಮೇಲೆ ಹಲ್ಲೆ ನಡೆಸಿ ಕೊಂದಿದ್ದಾರೆ. ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದ ಮಕಂದರ್ ಮಹಮ್ಮದ್ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರೆ, ಚಾಲಕ ಬದುಕುಳಿದಿದ್ದಾರೆ.
ಬೆಳಿಗ್ಗೆ 5 ಗಂಟೆಗೆ ನಡೆದ ದಾಳಿಯಲ್ಲಿ ಬಾಪು, ಪವನ್, ಪಿಂಟು, ನೇಪಾಳಿ ಮತ್ತು ಚಿನು ತೆಲೆಂಗಾ ಎಂಬುವವರು, ಇಬ್ಬರೂ ವ್ಯಕ್ತಿಗಳನ್ನು ಹರಿತವಾದ ಆಯುಧಗಳು, ಪೈಪ್ ಮತ್ತು ಚಾಕುಗಳಿಂದ ಹೊಡೆದಿದ್ದಾರೆ. ಜಾಳತಾಣದಲ್ಲಿ ಹರಿದಾಡುತ್ತಿರುವ ವೀಡಿಯೊದಲ್ಲಿ ದಾಳಿಕೋರರು ಮಹಮ್ಮದ್ ಅವರನ್ನು ‘ಜೈ ಶ್ರೀ ರಾಮ್’ ಎಂದು ಕೂಗುವಂತೆ ಒತ್ತಾಯಿಸುತ್ತಿದ್ದಾರೆ. ಆರಂಭದಲ್ಲಿ, ಪ್ರಾಣಿ ಹಿಂಸೆ ತಡೆ ಕಾಯ್ದೆ, ಒರಿಸ್ಸಾ ಗೋಹತ್ಯೆ ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತಾ ಅಡಿಯಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿದರು.
ಬಲಿಪಶುವಿನ ಸಹೋದರ ಜಿತೇಂದರ್ ಮಹಮ್ಮದ್ ಅವರ ದೂರಿನ ಮೇರೆಗೆ ಎರಡನೇ ಎಫ್‌ಐಆರ್ ದಾಖಲಿಸಲಾಗಿದ್ದು, ಐವರ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 103(2) ರ ಅಡಿಯಲ್ಲಿ ಗುಂಪು ಹತ್ಯೆಗೆ ಆರೋಪ ಹೊರಿಸಲಾಗಿದೆ. ಪೊಲೀಸರು ಒಂದು ಹಸು ಮತ್ತು ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಹೆಚ್ಚಿನ ಜನರು ಭಾಗಿಯಾಗಿರುವುದನ್ನು ಗುರುತಿಸಲು ಶಂಕಿತರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.


