ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ 14 ವರ್ಷದ ದಲಿತ ಬಾಲಕಿಯ ಭೀಕರ ಅತ್ಯಾಚಾರ, ಕೊಲೆ ನಡೆದಿದ್ದು, ಈ ಸಂಬಂಧ 16 ವರ್ಷದ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗುರುವಾರ (ಜ.15) ಬೆಳಿಗ್ಗೆ ಶಾಲೆಗೆ ಹೋದ ಬಾಲಕಿಯ ಶವ, ಆಕೆಯ ಮನೆಯಿಂದ ಸುಮಾರು 17 ಕಿಲೋ ಮೀಟರ್ ದೂರದ ವಾಣಿಯಂಬಲಂ ಎಂಬಲ್ಲಿ ರೈಲ್ವೆ ಹಳಿಯ ಬಳಿ ಪೊದೆಗಳ ನಡುವೆ ಪತ್ತೆಯಾಗಿದೆ.
ಬಾಲಕಿ ಶಾಲೆಯಿಂದ ಮನೆಗೆ ಮರಳದ ಹಿನ್ನೆಲೆ, ಆಕೆಯ ತಾಯಿ ಕರೆ ಮಾಡಿದ್ದರು. ಗುರುವಾರ ಸಂಜೆ 5 ಗಂಟೆಯ ಸುಮಾರಿಗೆ ಕರೆ ಸ್ವೀಕರಿಸಿದ ಬಾಲಕಿ, ಮನೆಗೆ ಬರುತ್ತಿದ್ದೇನೆ ಎಂದು ತಾಯಿಗೆ ತಿಳಿಸಿದ್ದಾಳೆ. ಬಳಿಕ ಆಕೆಯ ಮೊಬೈಲ್ ಸ್ವಿಚ್ ಆಫ್ ಆಗಿದೆ. ರಾತ್ರಿಯಾದರೂ ಆಕೆ ಮನೆ ತಲುಪದ ಹಿನ್ನೆಲೆ, ಮನೆಯವರು ಕರುವಕುಂಡ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ರಾತ್ರಿಯಿಡೀ ಬಾಲಕಿಯ ಕುಟುಂಬಸ್ಥರು ಮತ್ತು ಸ್ಥಳೀಯರ ಜೊತೆಗೂಡಿ ಆಕೆಗಾಗಿ ಹುಡುಕಾಟ ನಡೆಸಿದ್ದರು. ಬಳಿಕ ಕುಟುಂಬಸ್ಥರ ಮಾಹಿತಿಯಂತೆ ಬಾಲಕಿಯ ಗೆಳೆಯ ಅಥವಾ ಆಕೆಯದ್ದೇ ಶಾಲೆಯಲ್ಲಿ ಕಲಿಯುವ ಪರಿಚಯಸ್ಥ ಹುಡುಗನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕೊಲೆ ನಡೆದಿರುವ ವಿಚಾರ ಬಯಲಾಗಿದೆ.
ಹುಡುಗ ನೀಡಿದ ಮಾಹಿತಿಯಂತೆ ವಾಣಿಯಂಬಲಂ ಬಳಿ ರೈಲ್ವೆ ಹಳಿಗಳ ಸಮೀಪ ಪೊದೆಯಲ್ಲಿ ಬಾಲಕಿಯ ಶವವನ್ನು ಶುಕ್ರವಾರ ಪೊಲೀಸರು ಪತ್ತೆ ಹಚ್ಚಿದ್ದಾರೆ. ಶಾಲಾ ಸಮವಸ್ತ್ರ ಧರಿಸಿದ ರೀತಿಯಲ್ಲಿ ಬಾಲಕಿಯ ಶವ ಪತ್ತೆಯಾಗಿದೆ. ಆಕೆಯ ಕೈ-ಕಾಲುಗಳನ್ನು ಬಟ್ಟೆಯಿಂದ ಕಟ್ಟಲಾಗಿತ್ತು. ಚಪ್ಪಲಿ ಮತ್ತು ಬ್ಯಾಗ್ ಮೃತದೇಹದ ಸಮೀಪದಲ್ಲೇ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಆಮಿಷವೊಡ್ಡಿ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಬಳಿಕ ಆಕೆಯ ಕೈ-ಕಾಲುಗಳನ್ನು ಕಟ್ಟಿ ಅತ್ಯಾಚಾರವೆಸಗಿ, ನಂತರ ಉಸಿರುಗಟ್ಟಿಸಿ ಕೊಲೆ ಮಾಡಿರುವುದನ್ನು ಬಾಲಕ ಒಪ್ಪಿಕೊಂಡಿದ್ದಾನೆ. ಆತನೇ ಘಟನಾ ಸ್ಥಳವನ್ನು ತೋರಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿ ಬಾಲಕ ಈ ಹಿಂದೆ ಎರಡು ಬಾರಿ ಬಾಲಕಿಗೆ ಕಿರುಕುಳ ನೀಡಿದ್ದ. ಈ ಸಂಬಂಧ ಒಮ್ಮೆ ಬಾಲಕಿಯ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಆತನನ್ನು ಕರೆದು ಎಚ್ಚರಿಕೆ ನೀಡಿ ಕಳಿಸಿದ್ದರು. ಇನ್ನು ಮುಂದೆ ತಪ್ಪು ಮಾಡುವುದಿಲ್ಲ ಎಂದಿದ್ದ ಬಾಲಕ, ಈಗ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾನೆ ಎಂದು ವರದಿಗಳು ಹೇಳಿವೆ.
ಬಾಲಕಿಯ ತಂದೆ ಕರುವಕುಂಡ್ ಸಮೀಪ ವರ್ಕ್‌ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದರೆ, ತಾಯಿ ಸ್ಥಳೀಯ ಆಯಿಲ್ ಮಿಲ್‌ನಲ್ಲಿ ದುಡಿಯುತ್ತಿದ್ದರು. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು. ಅವರಲ್ಲಿ ದೊಡ್ಡವಳು ಕೊಲೆಯಾದ ಬಾಲಕಿ.
ಶಾಲೆಯಲ್ಲಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆ, ವಿಶೇಷವಾಗಿ ಸ್ಟೂಡೆಂಟ್ ಪೊಲೀಸ್ ಕ್ಯಾಡೆಟ್ (ಎಸ್‌ಪಿಸಿ) ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಆಕೆ, ಪ್ರತಿಭಾವಂತಳಾಗಿದ್ದಳು. ಬಾಲಕ ಕೂಡ ಅದೇ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಆತ ಈ ಹಿಂದೆ ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ಪಾಲ್ಗೊಂಡ ಬಗ್ಗೆ ವರದಿಗಳಿಲ್ಲ.
ಬಾಲಕಿ ದಲಿತ ಸಮುದಾಯದವಳು ಎಂದು ಮಲಯಾಳಂನ ಪ್ರಮುಖ ಸುದ್ದಿ ಸಂಸ್ಥೆ onmanorama.com ವರದಿ ಮಾಡಿದೆ. ಮತ್ತೊಂದು ಪ್ರಮುಖ ಸುದ್ದಿ ಸಂಸ್ಥೆ keralakaumudi.com ಬಾಲಕ ಮಾದಕ ವ್ಯಸನಿಯಾಗಿದ್ದ ಎಂದು ಉಲ್ಲೇಖಿಸಿದೆ. ಈ ಕುರಿತು ಹೆಚ್ಚಿನ ಮತ್ತು ಖಚಿತ ಮಾಹಿತಿ ತಿಳಿದು ಬರಬೇಕಿದೆ.


