‘ಜಂಟಿ ಸದನಳನ್ನು ಉದ್ದೇಶಿಸಿ ಭಾಷಣ ಓದಲು ನಿರಾಕರಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ನಡೆ ಸಂಪೂರ್ಣ ಅಸಂವಿಧಾನಿಕ; ಅವರು ಕರ್ನಾಟಕದ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡಿದ್ದಾರೆ’ ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿದರು.
ರಾಜ್ಯಪಾಲರು ಭಾಷಣ ಮಾಡದೆ ವಿಧಾನಸೌಧದಿಂದ ತೆರಳಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಹರಿಪ್ರಸಾದ್, “ಕರ್ನಾಟಕ ರಾಜ್ಯ ಮತ್ತು ವಿಧಾನಮಂಡಲದ ಇತಿಹಾಸಕ್ಕೆ ಮಸಿ ಬಳಿಯುವ ಕೆಲಸವನ್ನು ರಾಜ್ಯಪಾಲರು ಮಾಡಿದ್ದಾರೆ. ಅವರು, ಆರ್‌ಎಸ್‌ಎಸ್, ಮೋಹನ್ ಭಾಗವತ್, ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ನಿರ್ದೇಶನದ ಭಾಷಣ ಮಾಡಲು ನಿರಾಕರಿಸಿದ್ದಾರೆ” ಎಂದರು.
“ಸಂವಿಧಾನದ ಆರ್ಟಿಕಲ್ 176 ಪ್ರಕಾರ, ರಾಜ್ಯಪಾಲರು ರಾಜ್ಯ ವಿಧಾನಮಂಡಲದ ಮೊದಲ ಅಧಿವೇಶನದಲ್ಲಿ ವಿಶೇಷ ಭಾಷಣ ಮಾಡಬೇಕು ಎಂದು ಕಡ್ಡಾಯಗೊಳಿಸುತ್ತದೆ. ಅವರು ಭಾಷಣ ಓದಲು ನಿರಾಕರಿಸಲು ಸಾಧ್ಯವಿಲ್ಲ. ಕರ್ನಾಟಕ ರಾಜ್ಯದ ಪ್ರಗತಿ ಮತ್ತು ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡಿದ್ದಾರೆ. ರಾಜ್ಯಪಾಲರ ಸ್ಥಾನಮಾನಕ್ಕೆ ಮಸಿ ಬಳಿಯುವ ಹುನ್ನಾರವನ್ನು ಬಿಜೆಪಿ ಮಾಡುತ್ತಿದೆ. ಅವರಿಗೆ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ. ಇರುವ ವವಸ್ಥೆಯನ್ನೇ ಬುಡಮೇಲು ಮಾಡುವ ಕೆಲಸಮಾಡುತ್ತಿದೆ” ಎಂದು ಆಕ್ರೋಶ ಹೊರಹಾಕಿದ್ದಾರೆ.
“ಭದ್ರತಾ ಪಡೆ ಮತ್ತು ಬಿಜೆಪಿ ಶಾಸಕರು ನನ್ನ ಬಟ್ಟೆ ಹರಿದಿದ್ದಾರೆ. ನನ್ನ ಮೇಲೆ ಕೈ ಮಾಡುವ ಹಂತಕ್ಕೆ ಕೂಡ ಬಂದಿದ್ದರು. ಈ ಬಗ್ಗೆ ಪೊಲೀಸರಿಗೆ ದೂರು ಕೊಡುವಷ್ಟು ಹೇಡಿ ನಾನಲ್ಲ. ಅವರಿಗೆ ಸೂಕ್ತ ಉತ್ತರ ಕೊಡುತ್ತೇನೆ” ಎಂದರು.


