ವಿಧಾನಮಂಡಲದ ವಿಶೇಷ ಅಧಿವೇಶನದಲ್ಲಿ ಗುರುವಾರ (ಜ.22) ಭಾರೀ ಹೈಡ್ರಾಮ ನಡೆಯಿತು. ರಾಜ್ಯಪಾಲರು ಸರ್ಕಾರ ಬರೆದುಕೊಟ್ಟ ಭಾಷಣ ಓದದೆ, ತಮ್ಮದೇ ಆದ ಕೇವಲ ಎರಡೇ ಸಾಲಿನ ಭಾಷಣ ಓದಿ ಹೊರ ನಡೆದರು. ಇದಕ್ಕೆ ಆಡಳಿತ ಪಕ್ಷದ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಆರಂಭದಲ್ಲಿ ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ನಿರಾಕರಿಸಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ವಿಧಾನಸಭೆಯ ಸ್ಪೀಕರ್ ಯುಟಿ ಖಾದರ್, ವಿಧಾನಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಮತ್ತು ಕಾನೂನು ಸಚಿವರ ಹೆಚ್.ಕೆ ಪಾಟೀಲ್ ಸೇರಿದಂತೆ ಪ್ರಮುಖರು ಮನವೊಲಿಸಿದ ಬಳಿಕ ರಾಜ್ಯಪಾಲರು ಸದನಕ್ಕೆ ಆಗಮಿಸಿದ್ದರು.
ರಾಜ್ಯಪಾಲರು ಸದನಕ್ಕೆ ಬರಲು ಒಪ್ಪಿದರೂ, ಸರ್ಕಾರ ಬರೆದುಕೊಟ್ಟ ಭಾಷಣ ಓದುವುದಿಲ್ಲ. ಅವರೇ ಪ್ರತ್ಯೇಕ ಭಾಷಣ ಬರೆದುಕೊಂಡು ಬಂದಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ರಾಜ್ಯಪಾಲರು ಸದನಕ್ಕೆ ಆಗಮಿಸಿ ಕೇವಲ ಎರಡು ಸಾಲಿನ ಭಾಷಣ ಮಾಡಿ ತೆರಳಿದರು. ಈ ವೇಳೆ ವಿಧಾನಪರಿಷತ್ ಸದಸ್ಯ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್ ರಾಜ್ಯಪಾಲರನ್ನು ತಡೆಯುವ ಪ್ರಯತ್ನ ಮಾಡಿದರು.
ಈ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯಪಾಲರು ವರ್ಷದ ಆರಂಭದಲ್ಲಿ ಮತ್ತು ಹೊಸ ಸರ್ಕಾರ ಬಂದಾಗ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವುದು ವಾಡಿಕೆ. ಸಂವಿಧಾನದ ವಿಧಿ 176 ಮತ್ತು 163 ರಾಜ್ಯಪಾಲರು ಅವರು ತಯಾರು ಮಾಡಿದ ಭಾಷಣ ಓದುವಂತಿಲ್ಲ. ಸಚಿವ ಸಂಪುಟ ಸಿದ್ದಪಡಿಸಿಕೊಟ್ಟ ಭಾಷಣ ಓದಲೇಬೇಕು ಎಂದು ಹೇಳಿದೆ ಎಂದರು.
ಇವತ್ತು ಜಂಟಿ ಅಧಿವೇಶನ ಕರೆಯಲಾಗಿದೆ. ಏಕೆಂದರೆ ನರೇಗಾ ಕಾಯ್ದೆಯನ್ನು ರದ್ದು ಮಾಡಿ ವಿಬಿ-ಜಿ ರಾಮ್ ಜಿ ಕಾಯ್ದೆಯನ್ನು ಹೊಸದಾಗಿ ಮಾಡಿದ್ದಾರೆ. ಅದಕ್ಕೆ ನಮ್ಮ ಸರ್ಕಾರದ ತೀವ್ರ ವಿರೋಧ ಇದೆ. ಹೊಸ ಕಾಯ್ದೆಯಲ್ಲಿ ಮಹಾತ್ಮ ಗಾಂಧಿಯವರ ಹೆಸರು ತೆಗೆದು ಹಾಕಲಾಗಿದೆ. ಹಲವು ಜನಪರ ನಿಯಮಗಳನ್ನು ಮಾರ್ಪಾಡು ಮಾಡಲಾಗಿದೆ. 20 ವರ್ಷಗಳ ಹಿಂದೆ, ಅಂದರೆ 2005ರಲ್ಲಿ ಡಾ. ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದಾಗ ಸಂವಿಧಾನದ ಆದೇಶಗಳನ್ನು ಅನುಸರಿಸಿ ಜನರಿಗೆ ಕೆಲಸದ ಹಕ್ಕು, ಆಹಾರದ ಹಕ್ಕು, ಮಾಹಿತಿಯ ಹಕ್ಕು ಮತ್ತು ಶಿಕ್ಷಣದ ಹಕ್ಕು ನೀಡಿದ್ದರು ಎಂದು ಹೇಳಿದರು.
ಮುಂದುವರಿದು, ಕೆಲಸದ ಹಕ್ಕು ಎಂದರೆ ವರ್ಷದಲ್ಲಿ 100 ದಿನಗಳ ಕಾಲ ಬಡ ಕೂಲಿ ಕಾರ್ಮಿಕರಿಗೆ ಉದ್ಯೋಗ ಕೊಡುವುದು. ಇದರಲ್ಲಿ ದಲಿತರು, ರೈತರು ಮಹಿಳೆಯರು ಇದ್ದಾರೆ. ವಿಶೇಷವಾಗಿ 50 ಶೇಕಡ ಮಹಿಳೆಯರು ಮತ್ತು 20 ಶೇಕಡ ದಲಿತರು ನರೇಗಾ ಯೋಜನೆಯ ಫಲಾನುಭವಿಗಳು. ನರೇಗಾ ಯೋಜನೆಯಲ್ಲಿ ಜನರು ಇಷ್ಟಪಟ್ಟಲ್ಲಿ ಕೆಲಸ ಮಾಡಬಹುದಿತ್ತು. ಆದರೆ, ಹೊಸ ಕಾಯ್ದೆಯಲ್ಲಿ ಕೇಂದ್ರ ಹೇಳಿದ್ದಲ್ಲಿ ಕೆಲಸ ಮಾಡಬೇಕು. ನರೇಗಾದಲ್ಲಿ 365 ದಿನ ಕೆಲಸ ಇತ್ತು. ಯೋಜನೆ ರೂಪಿಸುವುದು ಗ್ರಾಮ ಪಂಚಾಯತ್ ಆಗಿತ್ತು. ಇದನ್ನು ಹೊಸ ಕಾಯ್ದೆಯಲ್ಲಿ ತೆಗೆದು ಹಾಕಿದ್ದಾರೆ ಎಂದರು.
ಈ ಎಲ್ಲಾ ಕಾರಣಗಳಿಗೆ ಕೇಂದ್ರದ ಹೊಸ ಕಾಯ್ದೆಯನ್ನು ನಾವು ವಿರೋಧ ಮಾಡಿದ್ದೇವೆ. ಅದನ್ನು ಸಂಪುಟ ರಾಜ್ಯಪಾಲರ ಭಾಷಣದಲ್ಲಿ ಸೇರಿಸಿತ್ತು. ನಮ್ಮ ಆಗ್ರಹ ನರೇಗಾ ಯೋಜನೆ ಮರು ಸ್ಥಾಪಿಸಬೇಕು, ಹೊಸ ಕಾಯ್ದೆ ರದ್ದು ಮಾಡಬೇಕು ಎಂಬುವುದಾಗಿದೆ. ನರೇಗಾ ಮರುಸ್ಥಾಪನೆ ಆಗುವವರೆಗೆ ನಮ್ಮ ಹೋರಾಟ ನಿರಂತರವಾಗಿ ನಡೆಯುತ್ತದೆ. ಇದು ನಮ್ಮ ಸರ್ಕಾರದ ತೀರ್ಮಾನ. ಕೇಂದ್ರದ ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿದಂತೆ ನಾವು ಹೋರಾಟ ರೂಪಿಸುತ್ತೇವೆ ಎಂದರು ತಿಳಿಸಿದರು.
ರಾಜ್ಯಪಾಲರು ಅವರೇ ತಯಾರು ಮಾಡಿದ ಒಂದು ಪ್ಯಾರದ ಭಾಷಣ ಮಾತ್ರ ಓದಿ ಸಂವಿಧಾನದ ವಿಧಿಗಳನ್ನು ಉಲ್ಲಂಘಿಸಿದ್ದಾರೆ. ಇದರಿಂದ ಜನ ಪ್ರತಿನಿಧಿಗಳ ಸಭೆಗೆ ಅವಮಾನ ಆಗಿದೆ. ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಭಾಷಣ ಮಾಡುವುದು ಸಂವಿಧಾನಾತ್ಮಕ ಪದ್ದತಿಯಾಗಿತ್ತು. ರಾಜ್ಯಪಾಲರ ನಡೆಯನ್ನು ನಮ್ಮ ಸರ್ಕಾರ, ಪಕ್ಷ ಪ್ರತಿಭಟಿಸುತ್ತದೆ ಎಂದು ಹೇಳಿದರು.
ರಾಜ್ಯಪಾಲರು ಕೇಂದ್ರದ ಕೈಗೊಂಬೆಯಂತೆ ವರ್ತಿಸಿದ್ದಾರೆ. ಕೇಂದ್ರದವರು ಅವರ ತಪ್ಪು ಮುಚ್ಚಿಕೊಳ್ಳಲು ರಾಜ್ಯಪಾಲರಲ್ಲಿ ಬೇರೆ ಭಾಷಣ ಓದಿಸಿದ್ದಾರೆ. ಇದು ಸಂವಿಧಾನಬಾಹಿರ, ಸಂವಿಧಾನದ ಉಲ್ಲಂಘನೆ. ರಾಜ್ಯಪಾಲರು ತಮ್ಮ ಕರ್ತವ್ಯ, ಜವಾಬ್ದಾರಿ ಪಾಲನೆ ಮಾಡಿಲ್ಲ. ನಾವು ತಯಾರಿಸಿದ ಭಾಷಣ ಎಲ್ಲಾ ಸದಸ್ಯರಿಗೆ ಕೊಟ್ಟಿದ್ದೆವು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.


