ಉತ್ತರ ಪ್ರದೇಶದ ಮೊರಾದಾಬಾದ್‌ನ ಕಾಡಿನಲ್ಲಿ ಅಂತರ್ಧರ್ಮೀಯ ಜೋಡಿಯ ಶವ ಪತ್ತೆಯಾಗಿದ್ದು, ಪ್ರಾಥಮಿಕ ತನಿಖೆಯಲ್ಲಿ ಆಕೆಯ ಸಹೋದರರು ಮರ್ಯಾದೆಗೇಡು ಹತ್ಯೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಯುವತಿಯನ್ನು 19 ವರ್ಷದ ಕಾಜಲ್ ಎಂದು ಗುರುತಿಸಲಾಗಿದ್ದು, ಮೃತ ಯುವಕ 27 ವರ್ಷದ ಅರ್ಮಾನ್. ಇಬ್ಬರೂ ಮೊರಾದಾಬಾದ್‌ನ ಉಮ್ರಿ ಸಬ್ಜಿಪುರ್ ಗ್ರಾಮದ ನಿವಾಸಿಗಳಾಗಿದ್ದು, ಕಾಜಲ್ ವಿದ್ಯಾರ್ಥಿನಿಯಾಗಿದ್ದರು. ಯುವತಿಯ ಮೂವರು ಸಹೋದರರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ.
ಪೊಲೀಸರ ಪ್ರಕಾರ, ಕಾಜಲ್ ಮತ್ತು ಅರ್ಮಾನ್ ಮೂರು ದಿನಗಳ ಹಿಂದೆ ತಮ್ಮ ಮನೆಗಳಿಂದ ನಾಪತ್ತೆಯಾಗಿದ್ದರು. ಅವರ ಕುಟುಂಬಗಳು ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿ ಸತ್ಪಾಲ್ ಆಂಟಿಲ್ ಅವರು, ಯುವಕನ ಕುಟುಂಬವು ಬುಧವಾರ ದೂರು ನೀಡಿದ್ದು, ಯುವತಿ ಕುಟುಂಬದ ಕಡೆಯಿಂದ ಗುರುವಾರ ಬೆಳಿಗ್ಗೆ ದೂರು ದಾಖಲಾಗಿದೆ. ಕೆಲವು ಗಂಟೆಗಳ ನಂತರ, ಅವರಿಬ್ಬರ ಶವಗಳು ಕಾಡಿನಲ್ಲಿ ಪತ್ತೆಯಾಗಿವೆ.
“ಎರಡೂ ಕುಟುಂಬಗಳಿಂದ ಕಾಣೆಯಾದ ಬಗ್ಗೆ ದೂರು ನೀಡಿದ ನಂತರ ನಾವು ತನಿಖೆಯನ್ನು ಪ್ರಾರಂಭಿಸಿದ್ದೇವೆ. ಮಹಿಳೆಯ ಸಹೋದರರು ಇಬ್ಬರನ್ನೂ ಕೊಲೆ ಮಾಡಿದ್ದಾರೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಇಬ್ಬರು ಸಹೋದರರನ್ನು ಬಂಧಿಸಲಾಗಿದೆ. ಅವರ ನಿರ್ದೇಶನದ ಮೇರೆಗೆ, ದಂಪತಿಗಳ ಶವಗಳನ್ನು ಗ್ರಾಮದಿಂದ ಕೆಲವು ಮೀಟರ್ ದೂರದಲ್ಲಿರುವ ದೇವಾಲಯದ ಹಿಂದಿನ ಕಾಡಿನಲ್ಲಿ ವಶಪಡಿಸಿಕೊಳ್ಳಲಾಗಿದೆ” ಎಂದು ಆಂಟಿಲ್ ಹೇಳಿದರು.
ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ಎರಡೂ ಶವಗಳನ್ನು ವಶಪಡಿಸಿಕೊಳ್ಳಲಾಗಿದೆ, ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.


