ಆಧಾರ್ ಕಾರ್ಡ್ ಇಲ್ಲದ ಕಾರಣ ವೈದ್ಯರು ದಾಖಲಿಸಿಕೊಳ್ಳಲು ನಿರಾಕರಿಸಿದ್ದು, ಪರಿಣಾಮ ಹೆರಿಗೆಗೆ ಆಸ್ಪತ್ರೆ ಸಿಗದೆ ಅಲೆಮಾರಿ ಸಮುದಾಯದ ಮಹಿಳೆಯೊಬ್ಬರು ಪರದಾಡುತ್ತಿರುವ ಬಗ್ಗೆ ತೆಲಂಗಾಣದ ಕರೀಂನಗರ ಜಿಲ್ಲೆಯಿಂದ ವರದಿಯಾಗಿದೆ.
ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಅಲೆಮಾರಿ ಸಮುದಾಯವಾದ ಬೇಡ ಬುಡಗ ಜಂಗಮದ 23 ವರ್ಷದ ಮಹಿಳೆ ಉಬಿದಿ ರೇಖಾ ಅವರ ಹೆರಿಗೆ ದಿನಾಂಕ ಸಮೀಪಿಸುತ್ತಿದ್ದು, ಆಸ್ಪತ್ರೆಗೆ ದಾಖಲಾಗಲು ಆಧಾರ್ ಕಾರ್ಡ್ ಇಲ್ಲದಿರುವುದು ಆಕೆಗೆ ದೊಡ್ಡ ಸಮಸ್ಯೆಯಾಗಿದೆ. ಯಾವುದೇ ಆಸ್ಪತ್ರೆಗೆ ಹೋದರೂ, ಆಧಾರ್ ಕಾರ್ಡ್ ಇಲ್ಲದೆ ದಾಖಲಿಸಿಕೊಳ್ಳಲು ವೈದ್ಯರು ನಿರಾಕರಿಸುತ್ತಿದ್ದಾರೆ ಎನ್ನಲಾಗಿದೆ.
ರೇಖಾ ಮೂಲತಃ ಕರೀಂನಗರ ಜಿಲ್ಲೆಯ ತಿಮ್ಮಾಪುರ ಮಂಡಲದ ರಾಮಕೃಷ್ಣ ಕಾಲೋನಿ ಗ್ರಾಮದವರು. ಆದರೆ, ಅವರು ಈ ಗ್ರಾಮದ ಶಾಶ್ವತ ನಿವಾಸಿ ಎನ್ನಲಾಗದು. ಏಕೆಂದರೆ, ಗ್ರಾಮದ ಇತರ ಹಲವರಂತೆ ಇವರ ಪೋಷಕರೂ ಕೂಡ ರಾಜ್ಯದಾದ್ಯಂತ ಅಲೆದಾಡಿ ಜೀವನೋಪಾಯ ಕಂಡುಕೊಳ್ಳುವವರು. ವರದಿಯ ಪ್ರಕಾರ, ಪೋಷಕರು ರಾಜ್ಯದ ಯಾವುದೋ ಮೂಲೆಯಲ್ಲಿ ಇದ್ದಾಗ ರೇಖಾ ಅವರ ಜನನ ಆಗಿತ್ತು. ಹಾಗಾಗಿ, ಅವರ ಜನನ ಎಲ್ಲೂ ನೋಂದಣಿ ಆಗಿಲ್ಲ.
ಜನನ ನೋಂದಣಿ ಆಗದ ಕಾರಣ ರೇಖಾ ಅವರಿಗೆ ಆಧಾರ್ ಕಾರ್ಡ್ ದೊರೆತಿಲ್ಲ. ಪರಿಣಾಮ ಈಗ ಆಕೆಯ ಗರ್ಭಾವಸ್ಥೆಯಲ್ಲಿ ಸರ್ಕಾರದ ಯಾವುದೇ ಕಲ್ಯಾಣ ಯೋಜನೆಗಳನ್ನು ಪಡೆಯಲು ಆಗಿಲ್ಲ. ದಿನನಿತ್ಯದ ಆರೋಗ್ಯ ರಕ್ಷಣೆ ಮತ್ತು ಈಗ ಸುರಕ್ಷಿತ ಹೆರಿಗೆಯ ಹಕ್ಕನ್ನೂ ಪಡೆಯಲು ಹೆಣಗಾಡುವಂತಾಗಿದೆ.
ವೈದ್ಯರ ನಿರ್ದೇಶನಗಳು ಇಲ್ಲದಿದ್ದರೂ, ಸಹಜವಾಗಿ ಹೆರಿಗೆಯ ದಿನಾಂಕ ಸಮೀಪಿಸುತ್ತಿರುವುದು ಗೊತ್ತಾದ ಕಾರಣ ರೇಖಾ ಅವರು ಇತ್ತೀಚೆಗೆ ಕರೀಂನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಹೋಗಿದ್ದರು. ಆದರೆ, ಅಲ್ಲಿ ಆಧಾರ್ ಕಾರ್ಡ್ ಇಲ್ಲದೆ ವೈದ್ಯರು ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ. ರೇಖಾ ಜಿಲ್ಲೆಯ ಇತರ ಸರ್ಕಾರಿ ಆಸ್ಪತ್ರೆಗಳಿಗೂ ಹೋಗಿ ಬಂದಿದ್ದಾರೆ. ಎಲ್ಲೂ ಆಕೆಯನ್ನು ಸೇರಿಸಿಕೊಂಡಿಲ್ಲ ಎಂದು ಆರೋಪಿಸಲಾಗಿದೆ. ಅಲೆಮಾರಿ ಸಮುದಾಯವಾಗಿರುವುದರಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗುವುದು ಆಕೆಗೆ ಕನಸಿನ ಮಾತಾಗಿದೆ.
ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಆಧಾರ್ ಕಾರ್ಡ್ ಅನ್ನು ಕೇವಲ ಗುರುತಿಸುವಿಕೆಗಾಗಿ ಮಾತ್ರ ಕೇಳಲಾಗುತ್ತದೆ. ಅದು ಇಲ್ಲ ಎಂಬ ಕಾರಣಕ್ಕೆ ರೋಗಿಗಳನ್ನು ದಾಖಲಿಸಿಕೊಳ್ಳಲು ನಿರಾಕರಿಸುವಂತಿಲ್ಲ. ಒಂದು ವೇಳೆ ಆಧಾರ್ ಕಾರ್ಡ್ ಇಲ್ಲದಿದ್ದರೆ, ಅಂತವರನ್ನು ‘ಅಜ್ಞಾತ ಅಥವಾ ಅಪರಿಚತ ವ್ಯಕ್ತಿ’ ಎಂದು ಪರಿಗಣಿಸಲಾಗುತ್ತದೆ. ಅವರ ಬಗ್ಗೆ ಪೊಲೀಸರಿಗೆ ವರದಿ ಮಾಡಲಾಗುತ್ತದೆ. ಆದರೆ, ಅವರಿಗೆ ಚಿಕಿತ್ಸೆ ನಿರಾಕರಿಸಲಾಗುವುದಿಲ್ಲ” ಎಂದು ಜಿಲ್ಲಾ ಜನರಲ್ ಆಸ್ಪತ್ರೆಯ ಸೂಪರಿಂಟೆಂಡೆಂಟ್ ಡಾ. ಜಿ. ವೀರಾ ರೆಡ್ಡಿ ಹೇಳಿದ್ದಾರೆ. ಒಂದು ವೇಳೆ ಇಂತಹ ಯಾವುದೇ ಸಮಸ್ಯೆ ಅಥವಾ ತೊಂದರೆ ಉಂಟಾದರೆ, ಅದನ್ನು ನೇರವಾಗಿ ತಮ್ಮ ಗಮನಕ್ಕೆ ತರುವಂತೆ ಅವರು ಕೇಳಿಕೊಂಡಿದ್ದಾರೆ.
ಹಿರಿಯ ಅಧಿಕಾರಿ ಹೇಳಿಕೆ ಕೊಟ್ಟರೂ ತಳಮಟ್ಟದಲ್ಲಿ ನೈಜತೆ ಬೇರೆಯೇ ಇದೆ. ಅಲ್ಲಿ ನಿಯಮ ಮತ್ತು ಅದರ ಅನುಷ್ಠಾನದ ನಡುವೆ ಅಂತರವಿದೆ. ಯಾವುದೇ ಆಸ್ಪತ್ರೆಗೆ ಹೋದರೂ ದಾಖಲಿಸಿಕೊಳ್ಳಲು ನಿರಾಕರಿಸುತ್ತಿರುವುದು ಬಡ, ಅನಕ್ಷರಸ್ಥ, ಆರ್ಥಿಕವಾಗಿ ಸಬಲರಲ್ಲದ ರೇಖಾ ಅವರಲ್ಲಿ ಆತಂಕವನ್ನು ಹೆಚ್ಚಿಸುತ್ತಿದೆ. ಹೆರಿಗೆಯ ದಿನಾಂಕ ಸಮೀಪಿಸಿದರೂ, ಆಕೆಗೆ ಎಲ್ಲಿ ಹೆರಿಗೆಯಾಗಲಿದೆ ಎಂಬ ಸ್ಪಷ್ಟತೆ ಇನ್ನೂ ಸಿಕ್ಕಿಲ್ಲ ಎಂದು ವರದಿ ಉಲ್ಲೇಖಿಸಿದೆ.
“ನನ್ನ ಬಳಿ ಆಧಾರ್ ಕಾರ್ಡ್ ಇಲ್ಲದಿದ್ದರೆ, ನಾನು ತಾಯಿಯಾಗಲು ಸಾಧ್ಯವಿಲ್ಲವೇ?” ಎಂದು ಆಕೆ ಕೇಳುತ್ತಾರೆ ಎಂದು ವರದಿ ಹೇಳಿದೆ.
ಸ್ಥಳೀಯ ಬಿಜೆಪಿ ಮುಖಂಡ ಸುಗುರ್ತಿ ಜಗದೀಶ್ವರಚಾರಿ ಈ ವಿಷಯದಲ್ಲಿ ಮಧ್ಯಪ್ರವೇಶಿಸಲು ಪ್ರಯತ್ನಿಸಿದ್ದರು. ಅವರು ಗ್ರಾಮ ಪಂಚಾಯತ್‌ನಿಂದ ವಾಸಸ್ಥಳದ ಪ್ರಮಾಣಪತ್ರವನ್ನು ಪಡೆಯಲು ರೇಖಾ ಅವರಿಗೆ ಸಹಾಯ ಮಾಡಿದ್ದರು. ಆದರೆ, ತಾಂತ್ರಿಕ ಸಮಸ್ಯೆಗಳಿಂದಾಗಿ ಆಧಾರ್ ಪೋರ್ಟಲ್ ರೇಖಾ ಅವರ ವಿವರಗಳನ್ನು ಸ್ವೀಕರಿಸಿಲ್ಲ. ಅವರ ಅರ್ಜಿ ಸ್ಥಗಿತಗೊಂಡಿದೆ.
ರೇಖಾ ಅವರ ಪ್ರಕರಣವು ದೊಡ್ಡ ಸಮಸ್ಯೆಯನ್ನು ಪ್ರತಿಬಿಂಬಿಸುತ್ತದೆ ಎಂದು ಜಗದೀಶ್ವರಚಾರಿ ಹೇಳಿದ್ದಾರೆ.
ಅಲೆಮಾರಿ ಸಮುದಾಯಗಳ ಅನೇಕ ಮಹಿಳೆಯರು ಮತ್ತು ಮಕ್ಕಳು, ಮನೆ ಜನನ, ವಲಸೆ ನೋಂದಣಿಗಳ ಕೊರತೆಯಿಂದಾಗಿ ಔಪಚಾರಿಕ ದಾಖಲೆಗಳಿಂದ ಹೊರಗೆ ಉಳಿದಿದ್ದಾರೆ. ಪರಿಣಾಮ ಅವರ ಮಕ್ಕಳು ಶಿಕ್ಷಣದಲ್ಲಿ ಅಡೆತಡೆಗಳನ್ನು ಎದುರಿಸುತ್ತಿದ್ದಾರೆ ಮತ್ತು ಕಲ್ಯಾಣ ಯೋಜನೆಗಳು ಆ ಸಮುದಾಯದ ಜನರಿಗೆ ಸಿಗುತ್ತಿಲ್ಲ. ಅಲೆಮಾರಿ ಸಮುದಾಯಕ್ಕೆಂದೇ ಮೀಸಲಾದ ಯೋಜನೆಗಳ ಲಾಭವನ್ನೂ ಪಡೆಯಲು ಆಗುತ್ತಿಲ್ಲ ಎಂದು ಜಗದೀಶ್ವರಚಾರಿ ವಿಷಾದ ವ್ಯಕ್ತಪಡಿಸಿದ್ದಾರೆ.
ತುರ್ತು ಆಸ್ಪತ್ರೆ ದಾಖಲಾತಿಗಳಿಗೆ ಆಧಾರ್ ಕಡ್ಡಾಯಗೊಳಿಸುವ ಕಾನೂನುಬದ್ಧತೆಯ ಬಗ್ಗೆ ತೆಲಂಗಾಣ ಹೈಕೋರ್ಟ್ ಇತ್ತೀಚೆಗೆ ರಾಜ್ಯ ಸರ್ಕಾರವನ್ನು ಪ್ರಶ್ನಿಸಿತ್ತು. ಆಧಾರ್ ಇಲ್ಲದ ಕಾರಣಕ್ಕೆ ತೆಲಂಗಾಣದಲ್ಲಿ ಕುಟುಂಬಗಳನ್ನು ಮಹಾಲಕ್ಷ್ಮಿ ಯೋಜನೆ (ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ) ಮತ್ತು ಕಲ್ಯಾಣ ಲಕ್ಷ್ಮಿಯಂತಹ ಯೋಜನೆಗಳಿಂದ ಹೊರಗಿಡಲಾಗುತ್ತದೆ ಎಂದು ವರದಿಯಾಗಿದೆ.
ಈ ಸಮಸ್ಯೆಗಳನ್ನು ತಗ್ಗಿಸಲು, ತೆಲಂಗಾಣ ಸರ್ಕಾರ ಜನವರಿ 2026ರಲ್ಲಿ ಉಚಿತ ಮಹಿಳಾ ಬಸ್ ಪ್ರಯಾಣಕ್ಕಾಗಿ ಸ್ಮಾರ್ಟ್ ಐಡಿ ಕಾರ್ಡ್‌ಗಳನ್ನು ಪರಿಚಯಿಸಿದೆ. ಇದು ಆಧಾರ್ ಪರಿಶೀಲನೆಯಲ್ಲಿ ತೊಂದರೆ ಎದುರಿಸಬಹುದಾದವರಿಗೆ ಪರಿಹಾರವನ್ನು ನೀಡುವ ಗುರಿಯನ್ನು ಹೊಂದಿದೆ.
Courtesy : newindianexpress.com


