ಈ ತಿಂಗಳ ಆರಂಭದಲ್ಲಿ ಗುಂಪೊಂದು ಹಲ್ಲೆ ನಡೆಸಿ ಸಾರ್ವಜನಿಕವಾಗಿ ಅವಮಾನಿಸಿತ್ತು ಎನ್ನಲಾದ ಒಡಿಶಾ ಪಾದ್ರಿ ಕುಟುಂಬ ಎಂಟು ವರ್ಷಗಳ ಕಾಲ ವಾಸಿಸುತ್ತಿದ್ದ ಮನೆಯಿಂದ ಖಾಲಿ ಮಾಡುವಂತೆ ಒತ್ತಾಯಿಸಲಾಗಿದೆ. ಇದರಿಂದಾಗಿ ಅವರ ಕುಟುಂಬ ಭಯಭೀತರಾಗಿ ಸ್ಥಳಾಂತರಗೊಂಡಿದೆ.
ಧೆಂಕನಾಲ್ ಜಿಲ್ಲೆಯ ಪರ್ಜಂಗ್ ಪೊಲೀಸ್ ಠಾಣೆ ವ್ಯಾಪ್ತಿಯ ಕಂದರ್ಸಿಂಗ ಗ್ರಾಮದಲ್ಲಿ ಜನವರಿ 4 ರಂದು ಪಾದ್ರಿ ಬಿಪಿನ್ ಬಿಹಾರಿ ನಾಯಕ್ ಮೇಲೆ ಹಲ್ಲೆ ನಡೆಸಲಾಯಿತು. ಎಫ್‌ಐಆರ್ ಪ್ರಕಾರ, 15 ರಿಂದ 20 ಜನರ ಗುಂಪು ನಾಯಕ್ ಪ್ರಾರ್ಥನೆ ಸಲ್ಲಿಸುತ್ತಿದ್ದ ಮನೆಗೆ ಬಲವಂತವಾಗಿ ನುಗ್ಗಿ ಅವರ ಮೇಲೆ ಹಲ್ಲೆ ನಡೆಸಿತು.
ಪಾದ್ರಿಯನ್ನು ಥಳಿಸಿ, ಚಪ್ಪಲಿ ಹಾರ ಹಾಕಿ, ಗ್ರಾಮದಾದ್ಯಂತ ಮೆರವಣಿಗೆ ಮಾಡಿ, ಬಲವಂತವಾಗಿ ಕೊಳಕು ನೀರು ಕುಡಿಸಲಾಯಿತು. ಅವರ ಇಚ್ಛೆಗೆ ವಿರುದ್ಧವಾಗಿ ದೇವಾಲಯದ ಮುಂದೆ ನಮಸ್ಕರಿಸಲಾಯಿತು ಎಂದು ದೂರಿನಲ್ಲಿ ತಿಳಿಸಲಾಗಿದೆ. ನಾಯಕ್ ಅವರ ಪತ್ನಿ ಸಲ್ಲಿಸಿದ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ.
ಘಟನೆಯ ನಂತರ, ನಾಯಕ್ ಅವರು ಅಂಗುಲ್ ಜಿಲ್ಲೆಯ ತಮ್ಮ ಸ್ಥಳೀಯ ಗ್ರಾಮದಲ್ಲಿಯೇ ವಾಸಿಸುತ್ತಿದ್ದಾರೆ. ಅವರು ಮನಗೆಗೆ ಹಿಂತಿರುಗಲು ಹೆದರುತ್ತಿದ್ದಾರೆ. ಒಂದು ವಾರದೊಳಗೆ ಮನೆ ಬಾಡಿಗೆ ಮನೆ ಖಾಲಿ ಮಾಡುವಂತೆ ಮಾಲೀಕರು ಒತ್ತಾಯಿಸಿದ ಬಳಿಕ ತಮ್ಮ ಪರಿಸ್ಥಿತಿ ಹದಗೆಟ್ಟಿದೆ ಎಂದು ಅವರ ಕುಟುಂಬ ತಿಳಿಸಿದೆ.
“ನನ್ನ ಸಹೋದರ ಎಂಟು ವರ್ಷಗಳ ಕಾಲ ಯಾವುದೇ ಸಮಸ್ಯೆಯಿಲ್ಲದೆ ವಾಸಿಸುತ್ತಿದ್ದ ಮನೆಯಿಂದ ಅದರ ಮಾಲೀಕರು ಹೊರಹೋಗುವಂತೆ ಒತ್ತಡ ಹಾಕುತ್ತಿದ್ದಾರೆ; ಅನಿವಾರ್ಯವಾಗಿ ನಾವು ಅಲ್ಲಿಂದ ಹೊರಟೆವು” ಎಂದು ನಾಯಕ್ ಅವರ ಹಿರಿಯ ಸಹೋದರ ಉದಯನಾಥ್ ತಿಳಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
“ಒಬ್ಬರ ಸ್ವಂತ ನಂಬಿಕೆಯನ್ನು ಪಾಲಿಸುವುದು ಪಾಪವೇ? ಈ ದೇಶದಲ್ಲಿ ಅದು ಮೂಲಭೂತ ಹಕ್ಕಲ್ಲವೇ” ಎಂದು ಪ್ರಶ್ನಿಸಿದ ಅವರು, ತನ್ನ ಸಹೋದರನನ್ನು ಗ್ರಾಮಸ್ಥರೊಬ್ಬರು ಅವರ ಆರೋಗ್ಯ ವೃದ್ಧಿಗಾಗಿ ಪ್ರಾರ್ಥಿಸಲು ಆಹ್ವಾನಿಸಿದ್ದರು, ಬಲವಂತದ ಧಾರ್ಮಿಕ ಮತಾಂತರ ಮಾಡಲು ಅಲ್ಲ ಎಂದು ಜೇಮ್ಸ್ ಆರೋಪಗಳನ್ನು ತಿರಸ್ಕರಿಸಿದರು.
“ಅವರು ಕಳೆದ ಎರಡು ವರ್ಷಗಳಿಂದ ಅಲ್ಲಿಗೆ ಪ್ರಾರ್ಥನೆ ಸಲ್ಲಿಸಲು ಮಾತ್ರ ಹೋಗುತ್ತಿದ್ದಾರೆ. ಈ ಆರೋಪಗಳು ಸುಳ್ಳು ಮತ್ತು ಪ್ರಕರಣವನ್ನು ದುರ್ಬಲಗೊಳಿಸುವ ಉದ್ದೇಶವನ್ನು ಹೊಂದಿವೆ” ಎಂದು ಅವರು ಹೇಳಿದರು.
ಘಟನೆಯ ಗಂಭೀರತೆಯ ಹೊರತಾಗಿಯೂ ಸ್ಥಳೀಯ ಪೊಲೀಸರು ತಕ್ಷಣ ಕ್ರಮ ಕೈಗೊಳ್ಳಲಿಲ್ಲ ಎಂದು ಕುಟುಂಬ ಆರೋಪಿಸಿದೆ. ದೂರಿನ ಪ್ರಕಾರ, ನಾಯಕ್ ಅವರ ಪತ್ನಿ ಹಲ್ಲೆ ನಡೆದ ಅರ್ಧ ಗಂಟೆಯೊಳಗೆ ಪೊಲೀಸ್ ಠಾಣೆಗೆ ತಲುಪಿದರು, ಆದರೆ ಪೊಲೀಸರು ತುರ್ತು ಕ್ರಮ ತೆಗೆದುಕೊಂಡಿಲ್ಲ.
“ಅಪರಾಧದ ಗಂಭೀರತೆಯ ಹೊರತಾಗಿಯೂ, ಪೊಲೀಸರು ಎಫ್‌ಐಆರ್ ದಾಖಲಿಸಲು ನಿರಾಕರಿಸಿದರು. ಅಧಿಕಾರಿಗಳು ಸ್ಥಳಕ್ಕೆ ತಲುಪುವ ಹೊತ್ತಿಗೆ, ನನ್ನ ಪತಿ ಈಗಾಗಲೇ ತೀವ್ರ ದೈಹಿಕ ಮತ್ತು ಮಾನಸಿಕ ಹಿಂಸೆಯನ್ನು ಅನುಭವಿಸಿದ್ದರು” ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕುಟುಂಬವು ಪೊಲೀಸ್ ವರಿಷ್ಠಾಧಿಕಾರಿಯನ್ನು ಸಂಪರ್ಕಿಸಿದ ನಂತರವೇ ಎಫ್‌ಐಆರ್ ದಾಖಲಿಸಲಾಗಿದೆ. ಧೆಂಕನಲ್ ಎಸ್‌ಪಿ ಅಭಿನವ್ ಸೋಂಕರ್ ಅವರು ಪರ್ಜಂಗ್ ಪೊಲೀಸ್ ಠಾಣೆಯ ಉಸ್ತುವಾರಿ ಇನ್ಸ್‌ಪೆಕ್ಟರ್‌ನಿಂದ ವಿವರಣೆ ಕೇಳಿದ್ದೇವೆ ಎಂದು ಹೇಳಿದರು. ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು, ಇದುವರೆಗೆ ಒಂಬತ್ತು ಜನರನ್ನು ಬಂಧಿಸಲಾಗಿದೆ ಎಂದು ಹೇಳಿದರು.
ರಾಜಕೀಯ ಪ್ರತಿಕ್ರಿಯೆ
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಹಲ್ಲೆಯನ್ನು ಖಂಡಿಸಿದರು. “ತೀವ್ರ ಅಮಾನವೀಯ ಕೃತ್ಯ” ಎಂದು ಕರೆದು, ದೇಶದಲ್ಲಿ ಹೆಚ್ಚುತ್ತಿರುವ ಹಿಂಸಾಚಾರ ಮತ್ತು ಅಸಹಿಷ್ಣುತೆಯ ವಾತಾವರಣವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಕೂಡ ದಾಳಿಯನ್ನು ಖಂಡಿಸಿದರು. ಇದು ಸಾಂವಿಧಾನಿಕ ಹಕ್ಕುಗಳ ಗಂಭೀರ ಉಲ್ಲಂಘನೆಯಾಗಿದೆ, ಹೊಣೆಗಾರರಾದವರ ವಿರುದ್ಧ ತ್ವರಿತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಅವರಿಗೆ ಪತ್ರ ಬರೆದು, ಪಾದ್ರಿ ಮತ್ತು ಅವರ ಕುಟುಂಬಕ್ಕೆ ತಕ್ಷಣರಕ್ಷಣೆ ನೀಡುವಂತೆ ಕೋರಿದರು.


