ಸೈಬರ್ ವಂಚನೆಯಾದ ಡಿಜಿಟಲ್ ಅರೆಸ್ಟ್‌ನಲ್ಲಿ ಬರೋಬ್ಬರಿ 23 ಕೋಟಿ ರೂಪಾಯಿ (22.92 ಕೋಟಿ) ಕಳೆದುಕೊಂಡ 82 ವರ್ಷದ ವ್ಯಕ್ತಿಯೊಬ್ಬರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು, ಈ ಸಂಬಂಧ ಕೇಂದ್ರ ಸರ್ಕಾರ, ಭಾರತೀಯ ರಿಸರ್ವ್ ಬ್ಯಾಂಕ್, ಸಿಬಿಐ ಮತ್ತು 7 ಖಾಸಗಿ ಬ್ಯಾಂಕ್‌ಗಳಿಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಇದು ಬಹುಶಃ ದೇಶದ ಅತಿದೊಡ್ಡ ವೈಯಕ್ತಿಕ ಡಿಜಿಟಲ್ ವಂಚನೆ ಪ್ರಕರಣ ಎನ್ನಲಾಗ್ತಿದೆ. ಹಣ ಕಳೆದುಕೊಂಡ ವ್ಯಕ್ತಿ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರಿದ್ದ ಸುಪ್ರೀಂ ಕೋರ್ಟ್, ಸರ್ಕಾರ ಮತ್ತು ಇತರ ಪಕ್ಷಕಾರರಿಗೆ ನೋಟಿಸ್ ಜಾರಿ ನೀಡಿದೆ.
ಅರ್ಜಿದಾರರ ಪರವಾಗಿ ಹಾಜರಾದ ಹಿರಿಯ ವಕೀಲ ಕೆ. ಪರಮೇಶ್ವರ್ ಅವರು, ಅರ್ಜಿದಾರರ ಮಕ್ಕಳು ವಿದೇಶದಲ್ಲಿದ್ದಾಗ ಈ ಘಟನೆ ನಡೆದಿದೆ. ಇದು ಸಂಬಂಧಪಟ್ಟ ಬ್ಯಾಂಕುಗಳ ‘ತೀವ್ರ ನಿರ್ಲಕ್ಷ್ಯ’ದ ಪ್ರಕರಣವಾಗಿದೆ. ಅರ್ಜಿದಾರರು ಬ್ಯಾಂಕುಗಳ ವಿರುದ್ಧ ರಾಷ್ಟ್ರೀಯ ಗ್ರಾಹಕ ವಿವಾದ ಪರಿಹಾರ ಆಯೋಗವನ್ನು ಸಂಪರ್ಕಿಸುವ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
“ಬ್ಯಾಂಕುಗಳು ಕೂಡ ಕೆಲವು ಕರ್ತವ್ಯಗಳನ್ನು ನಿರ್ವಹಿಸಬೇಕಾಗಿದೆ, ಅವರು (ಅರ್ಜಿದಾರರು) ವೀಲ್‌ಚೇರ್‌ನಲ್ಲಿ ಓಡಾಡುವವರು. ಅವರಿಗೆ ಸುಮಾರು 82 ವರ್ಷ ವಯಸ್ಸಾಗಿದೆ. ಇಷ್ಟು ದೊಡ್ಡ ವಹಿವಾಟು ಪತ್ತೆಯಾದಾಗ ಬ್ಯಾಂಕುಗಳು ಕೂಡ ಜಾಗರೂಕತೆಯನ್ನು ತೋರಿಸಬೇಕು ಎಂದು” ಅರ್ಜಿದಾರರ ಪರ ವಕೀಲ ವಾದಿಸಿದ್ದಾರೆ.
ಅರ್ಜಿದಾರರು ತಮ್ಮ ಅರ್ಜಿಯಲ್ಲಿ ಸೈಬರ್ ವಂಚಕರು ಬಳಸುವ ಮ್ಯೂಲ್ ಖಾತೆಗಳನ್ನು (ವಂಚನೆಯ ಹಣ ವರ್ಗಾಯಿಸಲು ಬಳಸುವ ಖಾತೆ) ಗುರುತಿಸಲು ನಿರ್ದೇಶನಗಳನ್ನು ನೀಡಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ನ್ಯಾಯಾಲಯವು ಅರ್ಜಿದಾರರು ಗ್ರಾಹಕರ ಪರಿಹಾರ ಆಯೋಗದ ಮೊರೆ ಹೋಗಲು ಅವಕಾಶ ನೀಡಿದೆ.
ತಾನು ಕಳೆದುಕೊಂಡ ಹಣವನ್ನು ವಂಚಕರಿಂದ ಮರಳಿ ಪಡೆದು ಅದನ್ನು ಒಂದು ಎಸ್ಕ್ರೋ ಖಾತೆಗೆ ಅಂದರೆ, ಒಂದು ಸುರಕ್ಷಿತ, ತಾತ್ಕಾಲಿಕ ಖಾತೆ ಅಥವಾ ನ್ಯಾಯಾಲಯದ ನಿಯಂತ್ರಣದಲ್ಲಿರುವ ಖಾತೆಗೆ ಜಮೆ ಮಾಡಬೇಕು. ಬಳಿಕ ಅದನ್ನು ತನಗೆ ಬಿಡುಗಡೆ ಮಾಡುವಂತೆ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರ ಕೋರಿದ್ದಾರೆ. ಕೋಟಕ್ ಮಹೀಂದ್ರಾ ಬ್ಯಾಂಕ್, ಹೆಚ್‌ಡಿಎಫ್‌ಸಿ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಇಂಡಸ್‌ಲ್ಯಾಂಡ್ ಬ್ಯಾಂಕ್, ಸಿಟಿ ಯೂನಿಯನ್ ಬ್ಯಾಂಕ್ ಮತ್ತು ಯೆಸ್ ಬ್ಯಾಂಕ್‌ಗಳನ್ನು ಪ್ರತಿವಾದಿಗಳಾಗಿ ಉಲ್ಲೇಖಿಸಿದ್ದಾರೆ.
ರಿಟ್ ಅರ್ಜಿ ಪ್ರಕಾರ, ಅರ್ಜಿದಾರ 82 ವರ್ಷದ ಹಿರಿಯ ನಾಗರಿಕರಾಗಿದ್ದು, ಅವರು ಮನೆಯಲ್ಲಿ ಒಂಟಿಯಾಗಿದ್ದಾಗ ಕಾನೂನು ಜಾರಿ ಅಧಿಕಾರಿಗಳಂತೆ ನಟಿಸಿದ ಸೈಬರ್ ವಂಚಕರು, ಸುಪ್ರೀಂ ಕೋರ್ಟ್ ನೀಡಿದೆ ಎಂದು ನಕಲಿ ಆದೇಶಗಳನ್ನು ವಾಟ್ಸಾಪ್ ಮತ್ತು ವಿಡಿಯೋ ಕಾನ್ಫರೆನ್ಸ್ ಮೂಲಕ ಹಂಚಿಕೊಂಡು ಬ್ಯಾಂಕ್ ಖಾತೆಯಿಂದ ಹಣ ದೋಚಿದ್ದಾರೆ.
ನನ್ನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಬೆದರಿಸಿ, ನಕಲಿ ನ್ಯಾಯಾಂಗದ ದಾಖಲೆಗಳನ್ನು ತೋರಿಸಿ ನನ್ನ ಜೀವಮಾನದ ಸಂಪೂರ್ಣ ಉಳಿತಾಯವನ್ನು ವಂಚಕರು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ ಎಂದು ಅರ್ಜಿದಾರ ನ್ಯಾಯಾಲಯದ ಮುಂದೆ ಅಳಲು ತೋಡಿಕೊಂಡಿದ್ದಾರೆ ಎಂದು ಲೈವ್‌ಲಾ ವರದಿ ಮಾಡಿದೆ.


