ಪ್ರತ್ಯೇಕ ರಾಜ್ಯಗಳಲ್ಲಿ ಇಬ್ಬರು ಬಂಗಾಳಿ ಮುಸ್ಲಿಂ ವಲಸೆ ಕಾರ್ಮಿಕರು ಶವವಾಗಿ ಪತ್ತೆಯಾಗಿದ್ದು, ದೇಶದಲ್ಲಿ ಬಂಗಾಳಿ ಮಾತನಾಡುವ ಕಾರ್ಮಿಕರ ವಿರುದ್ದ ಹೆಚ್ಚುತ್ತಿರುವ ಹಿಂಸಾಚಾರದ ಭಾಗವಾಗಿ ಇಬ್ಬರನ್ನೂ ಕೊಲ್ಲಲಾಗಿದೆ ಎಂದು ಅವರ ಕುಟುಂಬಗಳು ಆರೋಪಿಸಿವೆ.
ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯ ಕೊಮರೋಲು ಎಂಬ ಹಳ್ಳಿಯಲ್ಲಿ ಪಶ್ಚಿಮ ಬಂಗಾಳದ ದಕ್ಷಿಣ 24-ಪರಗಣ ಜಿಲ್ಲೆಯ ಉಸ್ಥಿ ನಿವಾಸಿ 32 ವರ್ಷದ ಮಂಜುರ್ ಅಲಂ ಲಸ್ಕರ್ ಅವರನ್ನು ಬಲಪಂಥೀಯ ಹಿಂದುತ್ವ ಗೂಂಡಾಗಳು ಥಳಿಸಿ ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ.
ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಹರಿಶ್ಚಂದ್ರಪುರದ ಮತ್ತೊಬ್ಬ ವಲಸೆ ಕಾರ್ಮಿಕ, 29 ವರ್ಷದ ಅಲಂಗೀರ್ ಮೊಂಡಲ್ ಅವರ ಮೃತದೇಹ ಗುರುವಾರ ಚೆನ್ನೈನ ರೈಲ್ವೆ ಹಳಿಗಳ ಬಳಿ ಪತ್ತೆಯಾಗಿದೆ ಎಂದು ದಿ ಟೆಲಿಗ್ರಾಫ್ ವರದಿ ಮಾಡಿದೆ.
ವರದಿಗಳ ಪ್ರಕಾರ, ಆಲಂ ಲಸ್ಕರ್ ಸುಮಾರು ಒಂದು ದಶಕದಿಂದ ಆಂಧ್ರ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದರು. ಮಂಗಳವಾರ, ಅವರ ಕುಟುಂಬಕ್ಕೆ 25,000 ರೂ.ಗೆ ಬೇಡಿಕೆ ಇಟ್ಟಿದ್ದ ಕರೆ ಬಂದಿದ್ದು, ಹಣವನ್ನು ಪಾವತಿಸದಿದ್ದರೆ ಆಲಂ ಅವರನ್ನು ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಲಾಗಿತ್ತು. ಕುಟುಂಬವು 6,000 ರೂ.ಗಳನ್ನು ವರ್ಗಾಯಿಸಿತ್ತು. ಮರುದಿನ, ಕರೆ ಮಾಡಿದವರು ಆಲಂ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾಗಿ ಟೈಮ್ ಆಫ್ ಇಂಡಿಯಾ ವರದಿ ಮಾಡಿದೆ.
ಆಲಂ ಅವರ ಹಿರಿಯ ಸಹೋದರ, ಸ್ಥಳೀಯ ಪಂಚಾಯತ್ ಉಪಾಧ್ಯಕ್ಷ ಗಿಯಾಸುದ್ದೀನ್ ಲಸ್ಕರ್, ಆಲಂ ಬಂಗಾಳಿ ಮಾತನಾಡುವ ಮುಸ್ಲಿಂ ಆಗಿದ್ದರಿಂದ ಬಾಂಗ್ಲಾದೇಶಿ ಎಂಬ ಅನುಮಾನದ ಮೇಲೆ ಗುರಿಯಾಗಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಅಲಂಗೀರ್ ಅಲಂ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಬಿಟ್ಟು ಸುಮಾರು ಒಂದು ತಿಂಗಳ ಹಿಂದೆ ಚೆನ್ನೈಗೆ ತೆರಳಿದ್ದರು. ಎಂಟು ದಿನಗಳ ಹಿಂದೆ, ಅವರು ಹೈದರಾಬಾದ್‌ನಲ್ಲಿ ಮತ್ತೊಂದು ಕೆಲಸ ಪಡೆದಿದ್ದರು. ಚೆನ್ನೈಗೆ ರೈಲು ಹತ್ತುವ ಮೊದಲು ಜನವರಿ 14 ರಂದು ಅವರು ಕೊನೆಯ ಬಾರಿಗೆ ಪತ್ನಿಯೊಂದಿಗೆ ಮಾತನಾಡಿದ್ದರು. ನಂತರ ಅವರು ನಾಪತ್ತೆಯಾಗಿದ್ದರು. ಬುಧವಾರ, ಅವರ ಶವ ಚೆನ್ನೈನ ನಿಲ್ದಾಣವೊಂದರ ಬಳಿಯ ರೈಲ್ವೆ ಹಳಿಯ ಸಮೀಪ ಪತ್ತೆಯಾಗಿದೆ ಎಂದು ವರದಿಯಾಗಿದೆ.
ಅಲಂಗೀರ್ ಅವರನ್ನು ಕೊಂದು ನಂತರ ಶವವನ್ನು ಹಳಿಯ ಪಕ್ಕದಲ್ಲಿ ಎಸೆದು ಹೋಗಿರಬಹುದು ಎಂದು ಅವರ ಕುಟುಂಬ ಶಂಕಿಸಿದೆ.
ಈ ತಿಂಗಳ ಆರಂಭದಲ್ಲಿ ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ದನಗಳ ಸಾಗಣೆಗೆ ವಿರೋಧ ವ್ಯಕ್ತಪಡಿಸಿದ ಗುಂಪೊಂದು 35 ವರ್ಷದ ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿತ್ತು.
2025ರಲ್ಲಿ ನಾಲ್ವರು ಮುಸ್ಲಿಮರು ಮತ್ತು ಒಬ್ಬ ದಲಿತ ಸೇರಿದಂತೆ ಕನಿಷ್ಠ ಐದು ಜನರನ್ನು ‘ಬಾಂಗ್ಲಾದೇಶಿಗಳು’ ಮತ್ತು ‘ಅಕ್ರಮ ವಲಸಿಗರು’ ಎಂದು ಆರೋಪಿಸಿ ಕೊಲೆ ಮಾಡಲಾಗಿದೆ.


