ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಅವರಿಗೆ ಕಾನೂನು ಸಮನ್ಸ್ ಕಳುಹಿಸಿತ್ತು. ಆದರೆ, ಭಾರತದ ಕಾನೂನು ಮತ್ತು ನ್ಯಾಯ ಸಚಿವಾಲಯ ಈ ಸಮನ್ಸ್‌ಗಳನ್ನು ಅಧಿಕೃತವಾಗಿ ಅದಾನಿ ಅವರಿಗೆ ತಲುಪಿಸಲು ಎರಡು ಬಾರಿ ನಿರಾಕರಿಸಿದೆ ಎಂದು ವರದಿಯಾಗಿದೆ.
ಸಮನ್ಸ್‌ಗಳಲ್ಲಿ ತಾಂತ್ರಿಕ ದೋಷಗಳಿದ್ದವು. ಅಂದರೆ, ಅದರ ಮೇಲೆ ಅಗತ್ಯವಾದ ಅಧಿಕೃತ ಸೀಲ್ ಮತ್ತು ಇಂಕ್ ಸಹಿ ಮುಂತಾದವು ಸರಿಯಾಗಿ ಇರಲಿಲ್ಲ ಎಂದು ಸರ್ಕಾರ ಜಾರಿಕೊಂಡಿದೆ ಎಂದು ವರದಿ ಹೇಳಿದೆ.
ವರದಿಗಳ ಪ್ರಕಾರ, ಕಳೆದ ವರ್ಷ (2025ರಲ್ಲಿ) ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯವು ಎಸ್‌ಇಸಿ ಕಳುಹಿಸಿದ ಕವರ್ ಲೆಟರ್‌ನಲ್ಲಿ ಇಂಕ್ ಸಹಿ, ಅಗತ್ಯ ಫಾರ್ಮ್‌ಗಳ ಮೇಲೆ ಅಧಿಕೃತ ಸೀಲ್ ಇಲ್ಲದಿರುವುದನ್ನು ಮತ್ತು ಸಮನ್ಸ್ ತಲುಪಿಸುವ ವಿಧಾನಕ್ಕೆ ಸಂಬಂಧಿಸಿದ ಪ್ರಕ್ರಿಯಾ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಎರಡು ಬಾರಿ ಸಮನ್ಸ್‌ಗಳನ್ನು ಅಧಿಕೃತವಾಗಿ ಅದಾನಿಗೆ ನೀಡಲು ನಿರಾಕರಿಸಿದೆ.
ಎರಡು ಭಾರತ ಸರ್ಕಾರ ಸಮನ್ಸ್ ತಲುಪಿಸಲು ನಿರಾಕರಿಸಿದ ಕಾರಣ ಎಸ್‌ಇಸಿಗೆ ಹೇಗ್ ಕನ್ವೆನ್ಷನ್ ಮೂಲಕ ಸಮನ್ಸ್ ತಲುಪಿಸುವುದು ಕಷ್ಟವಾಗಿದೆ. ಇದರಿಂದಾಗಿ ಅದು ನ್ಯೂಯಾರ್ಕ್‌ನ ಈಸ್ಟರ್ನ್ ಡಿಸ್ಟ್ರಿಕ್ಟ್ ಫೆಡರಲ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಸಾಮಾನ್ಯ ಪ್ರಕ್ರಿಯೆಯನ್ನು ಬಿಟ್ಟು ಬೇರೆ ಮಾರ್ಗದ ಮೂಲಕ (ಇ-ಮೇಲ್ ಮೂಲಕ) ಸಮನ್ಸ್ ತಲುಪಿಸಲು ಅನುಮತಿ ಕೇಳಿದೆ.
ಹೇಗ್ ಕನ್ವೆನ್ಷನ್‌ನಲ್ಲಿ ಸೀಲ್ ಮತ್ತು ಅಥವಾ ಇಂಕ್ ಸಹಿ ಕಡ್ಡಾಯವಲ್ಲ ಎಂದು ಎಸ್‌ಇಸಿ ವಾದಿಸಿದರೂ, 2025ರ ಮೇ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ ಕಾನೂನು ಮತ್ತು ನ್ಯಾಯ ಸಚಿವಾಲಯವು ಸಮನ್ಸ್ ತಲುಪಿಸಲು ನಿರಾಕರಿಸಿದೆ.
ಡಿಸೆಂಬರ್‌ನಲ್ಲಿ ತಿರಸ್ಕರಿಸುವಾಗ ಕೇಂದ್ರ ಸಚಿವಾಲಯ ಅಮೆರಿಕದ ಕಾನೂನನ್ನೇ ಉಲ್ಲೇಖಿಸಿ, ಈ ಸಮನ್ಸ್‌ಗಳು ಅನುಮತಿಸಲಾದ ವರ್ಗಗಳಲ್ಲಿ ಬರುವುದಿಲ್ಲ ಎಂದಿದೆ. ಅಂದರೆ, ಇದು ಹೇಗ್ ಕನ್ವೆನ್ಷನ್ ಅಡಿಯಲ್ಲಿ ಸಹಾಯ ಮಾಡಬಹುದಾದ ರೀತಿಯ ದಾಖಲೆಯಲ್ಲ ಎಂದು ವಾದಿಸಿತ್ತು.
ಸಚಿವಾಲಯದ ವಾದಕ್ಕೆ ಹೇಗ್ ಕನ್ವೆನ್ಷನ್ ಅಡಿಯಲ್ಲಿ ಯಾವುದೇ ಆಧಾರವಿಲ್ಲ ಎಂದು ಎಸ್‌ಇಸಿ ಹೇಳಿತ್ತು. ಅಂದರೆ, ಅಂತಾರಾಷ್ಟ್ರೀಯ ಸಮನ್ಸ್ ನೀಡುವುದಕ್ಕೆ ಸಂಬಂಧಿಸಿದ ಹೇಗ್ ಕನ್ವೆನ್ಷನ್ ನಿಯಮಗಳು ಇಂತಹ ತಾಂತ್ರಿಕ ಅಗತ್ಯಗಳನ್ನು (ಇಂಕ್ ಸಹಿ ಅಥವಾ ಅಧಿಕೃತ ಸೀಲ್) ಕಡ್ಡಾಯಗೊಳಿಸುವುದಿಲ್ಲ ಎಂದಿತ್ತು. ಆದರೂ, ಭಾರತ ಸರ್ಕಾರ ತನ್ನ ನಿಲುವನ್ನು ಬದಲಾಯಿಸಿಲ್ಲ ಎನ್ನಲಾಗಿದೆ.
ಭಾರತ ಸರ್ಕಾರದ ಎರಡು ನಿರಾಕರಣೆಯ ಬಳಿಕ ಎಸ್‌ಇಸಿ ನ್ಯೂಯಾರ್ಕ್ ಕೋರ್ಟ್‌ಗೆ ಅರ್ಜಿ ಹಾಕಿ ಇಮೇಲ್ ಮೂಲಕ ಸಮನ್ಸ್ ತಲುಪಿಸಲು ಅನುಮತಿ ಕೇಳಿದೆ. ಈ ಸುದ್ದಿ ಹೊರಬಿದ್ದ ನಂತರ ಅದಾನಿ ಗ್ರೂಪ್ ಕಂಪನಿಗಳ ಷೇರುಗಳು ದೊಡ್ಡ ಪ್ರಮಾಣದಲ್ಲಿ ಇಳಿಕೆಯಾಗಿವೆ. ವಿವಿಧ ಕಂಪನಿಗಳ ಷೇರುಗಳು 3.3% ರಿಂದ 14.6% ವರೆಗೆ ಕುಸಿದಿವೆ. ಒಟ್ಟಾರೆಯಾಗಿ ಅದಾನಿ ಗ್ರೂಪ್ ಕಂಪನಿಗಳ ಮಾರ್ಕೆಟ್ ಕ್ಯಾಪ್ ಸುಮಾರು 12.5 ಬಿಲಿಯನ್ ಡಾಲರ್ (ಅಂದಾಜು 1 ಲಕ್ಷ ಕೋಟಿ ರೂ.) ಕಳೆದುಕೊಂಡಿದೆ. ಉದಾಹರಣೆಗೆ : ಅದಾನಿ ಎಂಟರ್‌ಪ್ರೈಸಸ್, ಅದಾನಿ ಎನರ್ಜಿ ಸೊಲ್ಯೂಷನ್ಸ್ ಮುಂತಾದವು ಹೆಚ್ಚು ಇಳಿಕೆ ಕಂಡಿವೆ (10-14% ವರೆಗೆ).
ಎಸ್‌ಇಸಿಯ ಆರೋಪಗಳನ್ನು ಅದಾನಿ ಗ್ರೂಪ್ ತಳ್ಳಿ ಹಾಕಿದೆ. ಅವುಗಳನ್ನು ಆಧಾರರಹಿತ ಎಂದು ಕರೆದಿದೆ. ಎಸ್‌ಇಸಿಯ ಆರೋಪಗಳನ್ನು ಎದುರಿಸಲು ಎಲ್ಲಾ ಸಾಧ್ಯವಾದ ಕಾನೂನು ಮಾರ್ಗಗಳನ್ನು ಬಳಸುವುದಾಗಿ ಹೇಳಿದೆ. ವಿಶೇಷವಾಗಿ ಅದಾನಿ ಗ್ರೀನ್ ಎನರ್ಜಿ ಕಂಪನಿಯು ಸ್ಟಾಕ್ ಎಕ್ಸ್‌ಚೇಂಜ್‌ಗೆ ದಾಖಲೆ ಸಲ್ಲಿಸಿ, ಕಂಪನಿಯು ಈ ಎಸ್‌ಇಸಿ ಪ್ರಕರಣದ ಯಾವುದೇ ಪಕ್ಷವಲ್ಲ, ಇದು ಸಿವಿಲ್ ಪ್ರಕರಣ ಮಾತ್ರ, ಅಂದರೆ ಕ್ರಿಮಿನಲ್ ಅಲ್ಲ ಮತ್ತು ಆರೋಪಿಗಳ ವಿರುದ್ಧ ಲಂಚ ಅಥವಾ ಭ್ರಷ್ಟಾಚಾರದ ಆರೋಪಗಳಿಲ್ಲ ಎಂದು ತಿಳಿಸಿದೆ.
ಈ ಸಮನ್ಸ್‌ಗಳು ಅದಾನಿ ಗ್ರೂಪ್ ವಿರುದ್ದದ ವಂಚನೆ ಮತ್ತು 265 ಮಿಲಿಯನ್ ಡಾಲರ್ (ಸುಮಾರು 2,200 ಕೋಟಿ ರೂ.) ಲಂಚದ ಪ್ರಕರಣಕ್ಕೆ ಸಂಬಂಧಿಸಿದೆ. ವಂಚನೆ ಮತ್ತು ಲಂಚದ ಆರೋಪಗಳನ್ನು ಮಾಡಿ ಎಸ್‌ಇಸಿಯು ಗೌತಮ್ ಅದಾನಿ ಮತ್ತು ಸಾಗರ್ ಅದಾನಿ ವಿರುದ್ಧ ಸಿವಿಲ್ ಕೇಸ್ ದಾಖಲಿಸಿದೆ. ಅಮೆರಿಕದ ಕಾನೂನಿನ ಪ್ರಕಾರ, ಇಂತಹ ಪ್ರಕರಣಗಳಲ್ಲಿ ಆರೋಪಿಗಳಿಗೆ ವೈಯಕ್ತಿಕವಾಗಿ ಸಮನ್ಸ್ ತಲುಪಿಸಬೇಕು.


