ಕೇಂದ್ರ ಸರ್ಕಾರದ ಕೋರಿಕೆಯ ಮೇರೆಗೆ ಹೈಕೋರ್ಟ್ ನ್ಯಾಯಾಧೀಶರನ್ನು ವರ್ಗಾವಣೆ ಮಾಡುವ ಪ್ರಸ್ತಾವನೆ ಮಾರ್ಪಡಿಸಿದ ಕೊಲಿಜಿಯಂನ ಇತ್ತೀಚಿನ ನಿರ್ಧಾರವನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಪ್ರಶ್ನಿಸಿದ್ದು, “ನ್ಯಾಯಾಧೀಶರ ವರ್ಗಾವಣೆ ಮತ್ತು ನೇಮಕಾತಿ ವಿಷಯದಲ್ಲಿ ಕಾರ್ಯಾಂಗಕ್ಕೆ ಯಾವುದೇ ಪಾತ್ರವಿಲ್ಲ” ಎಂದು ಪ್ರತಿಪಾದಿಸಿದ್ದಾರೆ.
ಕೇಂದ್ರದ ಕೋರಿಕೆಯ ಮೇರೆಗೆ ವರ್ಗಾವಣೆ ಪ್ರಸ್ತಾವನೆ ಮಾರ್ಪಾಡು ಮಾಡಲಾಗಿದೆ ಎಂಬ ಕೊಲಿಜಿಯಂನ ದಾಖಲೆಯು “ಸಾಂವಿಧಾನಿಕವಾಗಿ ಸ್ವತಂತ್ರ ಎಂದು ಭಾವಿಸಲಾದ ಪ್ರಕ್ರಿಯೆಯ ಮೇಲೆ ಕಾರ್ಯಾಂಗ ಪ್ರಭಾವದ ಗಮನಾರ್ಹ ಹಸ್ತಕ್ಷೇಪವನ್ನು ಬಹಿರಂಗಪಡಿಸುತ್ತದೆ” ಎಂದು ನ್ಯಾಯಮೂರ್ತಿ ಭುಯಾನ್ ಹೇಳಿದ್ದಾರೆ.
ಕಳೆದ ವರ್ಷದ ಅಕ್ಟೋಬರ್‌ನಲ್ಲಿ, ಸುಪ್ರೀಂ ಕೋರ್ಟ್ ಕೊಲಿಜಿಯಂ ನ್ಯಾಯಮೂರ್ತಿ ಅತುಲ್ ಶ್ರೀಧರನ್ ಅವರನ್ನು ಮಧ್ಯಪ್ರದೇಶ ಹೈಕೋರ್ಟ್‌ನಿಂದ ಛತ್ತೀಸ್‌ಗಢ ಹೈಕೋರ್ಟ್‌ಗೆ ವರ್ಗಾಯಿಸುವ ತನ್ನ ಮೂಲ ಪ್ರಸ್ತಾವನೆಯನ್ನು ಮಾರ್ಪಡಿಸಿ, ಅವರನ್ನು ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾಯಿಸಲು ಶಿಫಾರಸು ಮಾಡಿತ್ತು.
“ಸರ್ಕಾರದ ಮರುಪರಿಶೀಲನೆ ಕೋರಿಗೆ ಮೇರೆಗೆ” ಪ್ರಸ್ತಾವನೆಯನ್ನು ಮಾರ್ಪಡಿಸಲಾಗಿದೆ ಎಂದು ಕೊಲಿಜಿಯಂ ಹೇಳಿಕೆಯೇ ಸ್ಪಷ್ಟವಾಗಿ ದಾಖಲಿಸಿರುವುದರಿಂದ ಈ ನಡೆ ಹುಬ್ಬೇರಿಸಿದೆ. ಛತ್ತೀಸ್‌ಗಢ ಹೈಕೋರ್ಟ್‌ನಲ್ಲಿ, ನ್ಯಾಯಮೂರ್ತಿ ಶ್ರೀಧರನ್ ಅವರು ಹೈಕೋರ್ಟ್ ಕೊಲಿಜಿಯಂ ಸದಸ್ಯರಾಗುತ್ತಿದ್ದರು. ಆದರೆ, ಅಲಹಾಬಾದ್ ಹೈಕೋರ್ಟ್‌ನಲ್ಲಿ ಅವರ ಸೇವಾ ಹಿರಿತನವು ತುಂಬಾ ಕಡಿಮೆ ಇದೆ.
ನ್ಯಾಯಮೂರ್ತಿ ಅತುಲ್ ಶ್ರೀಧರನ್ ಅವರು ಸ್ವತಂತ್ರ ನ್ಯಾಯಾಧೀಶರು ಎಂಬ ಖ್ಯಾತಿ ಹೊಂದಿದವರು. ಇತ್ತೀಚೆಗೆ ಕರ್ನಲ್ ಸೋಫಿಯಾ ಕುರೇಶಿ ವಿರುದ್ದ ಅವಮಾನಕರ ಮತ್ತು ನಿಂದನೀಯ ಹೇಳಿಕೆ ನೀಡಿದ್ದ ಮಧ್ಯಪ್ರದೇಶದ ಬಿಜೆಪಿ ಸರ್ಕಾರದ ಸಚಿವ ಕುನ್ವರ್ ವಿಜಯ್ ಶಾ ವಿರುದ್ದ ಅವರು ಸ್ವಯಂಪ್ರೇರಿತ (ಸುಮೋಟೋ) ವಿಚಾರಣೆ ಕೈಗೆತ್ತಿಕೊಂಡಿದ್ದರು. ಈ ನಡೆಯಿಂದ ಅವರು ‘ನಿಷ್ಪಕ್ಷಪಾತಿ’ ಎಂದು ಎನಿಸಿಕೊಂಡಿದ್ದರು. ಅಂತಹ ನ್ಯಾಯಾಧೀಶರ ವಿಚಾರದಲ್ಲಿ ಕೇಂದ್ರ ಹಸ್ತಕ್ಷೇಪ ಮಾಡಿರುವುದು ಅನುಮಾನವನ್ನು ಹುಟ್ಟುಹಾಕಿದೆ.
ಪುಣೆಯ ಐಎಲ್‌ಎಸ್ ಕಾನೂನು ಕಾಲೇಜಿನಲ್ಲಿ “ಸಾಂವಿಧಾನಿಕ ನೈತಿಕತೆ ಮತ್ತು ಪ್ರಜಾಪ್ರಭುತ್ವ ಆಡಳಿತ” ಕುರಿತು ಪ್ರಾಂಶುಪಾಲ ಜಿ.ವಿ. ಪಂಡಿತ್ ಸ್ಮಾರಕ ಉಪನ್ಯಾಸ ನೀಡುತ್ತಾ, ನ್ಯಾಯಾಧೀಶರ ವರ್ಗಾವಣೆ ಮತ್ತು ನಿಯೋಜನೆಯು ನ್ಯಾಯಾಂಗದ ವ್ಯಾಪ್ತಿಗೆ ಮಾತ್ರ ಬರುತ್ತದೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರದಿಂದ ಪ್ರಭಾವಿತವಾಗಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಭುಯಾನ್ ಹೇಳಿದ್ದಾರೆ.
“ಸರ್ಕಾರದ ವಿರುದ್ಧ ಕೆಲವು ಆದೇಶಗಳನ್ನು ಹೊರಡಿಸಿದ್ದಾರೆ ಎಂಬ ಕಾರಣಕ್ಕಾಗಿ ನ್ಯಾಯಾಧೀಶರನ್ನು ಒಂದು ಹೈಕೋರ್ಟ್‌ನಿಂದ ಮತ್ತೊಂದು ಹೈಕೋರ್ಟ್‌ಗೆ ಏಕೆ ವರ್ಗಾಯಿಸಬೇಕು? ಇದು ನ್ಯಾಯಾಂಗದ ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರುವುದಿಲ್ಲವೇ?” ಎಂದು ನ್ಯಾ. ಭುಯಾನ್ ಅವರು ಪ್ರಶ್ನಿಸಿದ್ದು, ಇಂತಹ ಕ್ರಮಗಳು ಸಂವಿಧಾನದ ಮೂಲ ಆಶಯವಾಗಿರುವ ನ್ಯಾಯಾಂಗದ ಸ್ವಾತಂತ್ರ್ಯವನ್ನು ನೇರವಾಗಿ ಹಾಳುಮಾಡುತ್ತವೆ” ಎಂದು ಎಚ್ಚರಿಸಿದ್ದಾರೆ. ಆದರೆ, ನ್ಯಾ. ಭುಯಾನ್ ಅವರು ತಮ್ಮ ಭಾಷಣದಲ್ಲಿ ನ್ಯಾ. ಶ್ರೀಧರನ್ ಅವರ ಹೆಸರನ್ನು ನೇರವಾಗಿ ಉಲ್ಲೇಖಿಸಿಲ್ಲ.
“ವಿಷಯಗಳ ಸ್ವಭಾವದಿಂದ, ಕೇಂದ್ರ ಸರ್ಕಾರವು ಹೈಕೋರ್ಟ್ ನ್ಯಾಯಾಧೀಶರ ವರ್ಗಾವಣೆ ಮತ್ತು ನಿಯೋಜನೆಯ ವಿಷಯದಲ್ಲಿ ಯಾವುದೇ ಪಾತ್ರವನ್ನು ಹೊಂದಲು ಸಾಧ್ಯವಿಲ್ಲ. ಇಂತಹ ನ್ಯಾಯಾಧೀಶರನ್ನು ವರ್ಗಾಯಿಸಬಾರದು ಅಥವಾ ವರ್ಗಾಯಿಸಬೇಕು ಎಂದು ಹೇಳಲು ಸಾಧ್ಯವಿಲ್ಲ. ಅದು ನ್ಯಾಯಾಂಗದ ವಿಶೇಷ ವ್ಯಾಪ್ತಿಯಲ್ಲಿ ಬರುತ್ತದೆ” ಎಂದು ನ್ಯಾ. ಭುಯಾನ್ ಪ್ರತಿಪಾದಿಸಿದ್ದಾರೆ.
ನ್ಯಾಯಾಂಗದ ಉತ್ತಮ ಆಡಳಿತಕ್ಕಾಗಿ ವರ್ಗಾವಣೆಗಳು ಆಗಬೇಕೇ ಹೊರತು, ಸರ್ಕಾರದ ವಿರುದ್ದ ನಿರ್ಣಯಗಳನ್ನು ತೆಗೆದುಕೊಂಡ ನ್ಯಾಯಾಧೀಶರನ್ನು ದಂಡಿಸುವ ಸಾಧನವಾಗಿ ವರ್ಗಾವಣೆಯನ್ನು ಬಳಸಬಾರದು ಎಂದು ನ್ಯಾ.ಭುಯಾನ್ ಅವರು ಒತ್ತಿ ಹೇಳಿದ್ದಾರೆ. ಕೇಂದ್ರದ ಕೋರಿಕೆಯ ಮೇರೆಗೆ ನ್ಯಾಯಾಧೀಶರನ್ನು ವರ್ಗಾವಣೆ ಮಾಡುವ ನಿರ್ಧಾರದ ಮಾರ್ಪಾಡು “ಕಾರ್ಯಾಂಗವು ಕೊಲಿಜಿಯಂ ನಿರ್ಧಾರಗಳ ಮೇಲೆ ಪ್ರಭಾವ ಬೀರುತ್ತದೆ ಎಂಬುವುದನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ” ಎಂದಿದ್ದಾರೆ.


