ಇತ್ತೀಚಿನ ದಿನಗಳಲ್ಲಿ, ಚುನಾವಣಾ ಆಯೋಗದಂತಹ ಸಂಸ್ಥೆಗಳು ನಿರಂತರ ಒತ್ತಡವನ್ನು ಎದುರಿಸುತ್ತಿವೆ. ಆದ್ದರಿಂದ ಪ್ರಜಾಪ್ರಭುತ್ವವು ಕೇವಲ ಉಳಿಯುವುದಲ್ಲದೆ, ನಿಜವಾಗಿಯೂ ಅಭಿವೃದ್ಧಿ ಹೊಂದುವಂತೆ ಅವುಗಳ ಸ್ವಾತಂತ್ರ್ಯವನ್ನು ರಕ್ಷಿಸುವುದು ‘ನಮ್ಮ ಜವಾಬ್ದಾರಿ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾನುವಾರ (ಜ.25) ಹೇಳಿದ್ದಾರೆ.
ರಾಷ್ಟ್ರೀಯ ಮತದಾರರ ದಿನದ ಹಿನ್ನೆಲೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿರುವ ಅವರು, “ಮತಗಳ್ಳತನ ಮತ್ತು ಯೋಜಿತವಲ್ಲದ ಎಸ್‌ಐಆರ್ ಮೂಲಕ ಮತದಾನದ ಹಕ್ಕನ್ನು ಕಸಿದುಕೊಳ್ಳುವುದು ಬಹುಕಾಲದಿಂದ ಪಾಲಿಸಿಕೊಂಡು ಬಂದ ಭಾರತದ ಪ್ರಜಾಪ್ರಭುತ್ವಕ್ಕೆ ಕಳಂಕ ಎಂದಿದ್ದಾರೆ.
“ಒಂದು ರಾಷ್ಟ್ರದ ಭವಿಷ್ಯವು ಅದರ ಜನರದ್ದೇ ಆಗಿದೆ, ನಮ್ಮ ಸಾಮೂಹಿಕ ಧ್ವನಿ ನಮ್ಮ ಭವಿಷ್ಯವನ್ನು ರೂಪಿಸಬಹುದು ಎಂಬುದನ್ನು ನಮಗೆ ನೆನಪಿಸುವ ದಿನವೇ ರಾಷ್ಟ್ರೀಯ ಮತದಾರರ ದಿನ” ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
“ಭಾರತದ ಜನರು ಸ್ವತಂತ್ರ, ನ್ಯಾಯಯುತ ಮತ್ತು ನಿರ್ಭೀತ ಚುನಾವಣೆಗಳಿಗೆ ಅರ್ಹರು. ಅಲ್ಲಿ ಶುದ್ಧ ಮತದಾರರ ಪಟ್ಟಿ ಮತ್ತು ಸಮಾನ ಸ್ಪರ್ಧೆಯ ಕ್ಷೇತ್ರ ಮುಖ್ಯ ಅಗತ್ಯವಾಗಿರಬೇಕು” ಎಂದಿದ್ದಾರೆ.
ಭಾರತ ಗಣರಾಜ್ಯವಾಗುವ ಒಂದು ದಿನ ಮೊದಲು, ಅಂದರೆ ಜನವರಿ 25, 1950ರಂದು ಚುನಾವಣಾ ಆಯೋಗವನ್ನು ಸ್ಥಾಪಿಸಲಾಯಿತು. ಕಳೆದ 16 ವರ್ಷಗಳಿಂದ ಈ ದಿನವನ್ನು ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಿಸಲಾಗುತ್ತಿದೆ.


